ಯಲ್ಲಾಪುರ:ಪಟ್ಟಣದ ತಿಲಕ್ ಚೌಕದ ಸಭಾಭವನದಲ್ಲಿ ಬೆಂಗಳೂರಿನ ಬಾಲಭವನ ಸೊಸೈಟಿ, ಯಲ್ಲಾಪುರ ಬಾಲಭವನ ಸೊಸೈಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಲೂಕಾ ಪಂಚಾಯತ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ದರ್ಪಣ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ11 ದಿನಗಳ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವನ್ನು ಯಲ್ಲಾಪುರದ ತಾಲೂಕಾ ಆಸ್ಪತ್ರೆಯ ನೇತ್ರ ತಜ್ಞೆ ಡಾ.ಸೌಮ್ಯಾ ಕೆ.ವಿ ಉದ್ಘಾಟಿಸಿದರು.
ನಂತರ ಮಾತನಾಡಿ ಆಧುನಿಕ ತಂತ್ರಜ್ಞಾನದ ಕಾರಣಕ್ಕೆ ಮಕ್ಕಳಿಗೆ ಪರಂಪರಾಗತ ಆಟಪಾಠಗಳನ್ನು ಸಂಪೂರ್ಣ ಮರೆಯತೊಡಗಿದ್ದಾರೆ. ಇಂತಹ ಸನ್ನಿವೇಶದಲ್ಲಿ ಮಕ್ಕಳಿಗೆ ಬೇಸಿಗೆ ಶಿಬಿರಗಳು ಅತ್ಯುಪಯುಕ್ತವಾಗಿದ್ದು, ಪ್ರತಿ ಮಕ್ಕಳೂ ಒಳ್ಳೆಯ ಸಂಗತಿಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು, ಉತ್ತಮ ಗುರಿ ಸಾಧಕರಾಗಿ ದೇಶಕ್ಕೆ ಮಹಾನ್ ಕೊಡುಗೆ ನೀಡುವವರಾಗಿರಬೇಕೆಂದು ಕರೆ ನೀಡಿದರು.
ಇಂದಿನ ಹೊಸ ಕಾಲಮಾನದಲ್ಲಿ ಮಕ್ಕಳಿಗೆ ಮೊಬೈಲ್ ಮತ್ತು ದೂರದರ್ಶನಗಳ ಮಿತಿಮೀರಿದ ಆಕರ್ಷಣೆಯಿಂದಾಗಿ ಆಟೋಟಗಳು ಕಡಿಮೆಯಾಗಿವೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಮಗು ಆರೋಗ್ಯವಾಗಿರಲು ದೈಹಿಕ ಶ್ರಮದ ಆಟೋಟಗಳು ಅಗತ್ಯವಾಗಿದೆ ಹೀಗಾಗಿ ಬೇಸಿಗೆ ಶಿಬಿರಗಳ ಪ್ರಯೋಜನ ಪಡೆದುಕೊಳ್ಳುವಂತೆ ಕಿವಿ ಮಾತು ಹೇಳಿದರು.
ತಾಲೂಕಾ ಶಿಕ್ಷಣ ಸಂಯೋಜಕ ಷಣ್ಮುಖ ಹೆಗಡೆ ಮಾತನಾಡಿ, ಕೊವಿಡ್ ಕಾರಣದಿಂದಾಗಿ ಕಳೆದೆರಡು ವರ್ಷಗಳಿಂದ ಮಕ್ಕಳ ಸೃಜನಶೀಲತೆಯ ಅಭಿವ್ಯಕ್ತಿಗೆ ಗಮನಾರ್ಹ ತಡೆಯುಂಟಾಗಿತ್ತು. ಇದೀಗ ಪ್ರತಿ ಮಕ್ಕಳಲ್ಲಿ ಹುದುಗಿರುವ ಪ್ರತಿಭೆಯ ಅನಾವರಣಕ್ಕೆ ಇಂತಹ ಬೇಸಿಗೆ ಶಿಬಿರಗಳು ಉತ್ತಮ ವೇದಿಕೆಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ.ಪಂ. ಅಧ್ಯಕ್ಷೆ ಸುನಂದಾ ದಾಸ್ ಮಾತನಾಡಿ, ವಿದ್ಯಾರ್ಜನೆಯೊಂದಿಗೆ ಮಕ್ಕಳಿಗೆ ಕಲೆ, ಕ್ರೀಡೆ ಮತ್ತು ಸಾಮಾಜಿಕ ಚಟುವಟಿಕೆಗಳು ಅತಿ ಮುಖ್ಯ. ಯಾರೂ ಕದಿಯಲಾರದ ಸಂಪತ್ತಾಗಿರುವ ವಿದ್ಯಾರ್ಥಿ ಮಕ್ಕಳಿಗೆ ಶಿಬಿರ ಖಂಡಿತ ಪ್ರಯೋಜನಕಾರಿ ಎಂದರು.
ಮತ್ತೋರ್ವ ಅತಿಥಿ ಪ.ಪಂ.ಉಪಾಧ್ಯಕ್ಷೆ ಶ್ಯಾಮಿಲಿ ಪಾಟಣಕರ ಮಾತನಾಡಿ, ಎಲ್ಲ ವಿದ್ಯಾರ್ಥಿಗಳಿಗೆ ಶಿಕ್ಷಣ ಪ್ರಮುಖ ಘಟ್ಟವಾಗಿದೆ. ಈ ದಿಸೆಯಲ್ಲಿ ಪಾಲಕರು ಗಮನಹರಿಸಿ ತಮ್ಮ ಮಕ್ಕಳಿಗೆ ಸಮಾಜಮುಖಿಯಾಗುವ ಶಿಕ್ಷಣವನ್ನು ಕೊಡಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಶಿಬಿರಕ್ಕೆ ಪೂರ್ಣ ಪ್ರಮಾಣದ ಹಾಜರಾತಿ ನೀಡಿದ 10 ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಶಿಬಿರಾರ್ಥಿ ಧನ್ಯಾಳ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಸಿ.ಡಿ.ಪಿ.ಓ. ರಫೀಕಾ ಹಳ್ಳೂರು ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಮಕ್ಕಳ ಕಲ್ಯಾಣ ಇಲಾಖೆಯ ವೀರವ್ವ ಪೂಜಾರಿ ನಿರ್ವಹಿಸಿ, ವಂದಿಸಿದರು.
ಶಿಬಿರದಲ್ಲಿ 52 ಮಕ್ಕಳು ಪಾಲ್ಗೊಂಡು ಚಿತ್ರಕಲೆ, ಹಾಡು, ನೃತ್ಯ, ಪರಿಸರ ಪಾಠ, ಕರಕುಶಲ ವಸ್ತು ತಯಾರಿಕೆ, ಯೋಗ ಮತ್ತಿತರ ವಿವಿಧ ಸಂಗತಿಗಳ ಕುರಿತು ತರಬೇತಿ ಪಡೆದರು. ಸಂಪನ್ಮೂಲ ವ್ಯಕ್ತಿಗಳಾಗಿ ಲಕ್ಷ್ಮಿ ಭಟ್ಟ ಚಿಮ್ನಳ್ಳಿ, ಗಾಯತ್ರಿ ಬೋಳಗುಡ್ಡೆ, ಪ್ರೇಮಾ ದೇಸಾಯಿ, ರಾಘವೇಂದ್ರ ನಾಯ್ಕ, ಸೌಮ್ಯಾ ಕೆ.ವಿ, ಕಲಾವತಿ ತುಂಡೇಕರ್ ಕಾರ್ಯನಿರ್ವಹಿಸಿದರು.