ಶಿರಸಿ: ಪ್ರಸ್ತುತದ ದಿನಗಳಲ್ಲಿ ಕನ್ನಡದ ಕತೆಗಳು ಹೊಸ ಆಯಾಮವನ್ನು ಸೃಷ್ಟಿಸಲು ಸಾಧ್ಯವಿದೆ.ರೂಪಾಂತರಗೊಂಡ ಜನಜೀವನದಲ್ಲಿ ಏಕತಾನತೆಯನ್ನು ಸಾಹಿತ್ಯ ಕೃತಿಗಳು ಹೋಗಲಾಡಿಸಬಹುದು. ಮಣ್ಣೊಳಗಿನ ನಿಕ್ಷೇಪದಂದದಿ ಹೂತಿರುವ ಜೀವನ ಪ್ರೀತಿ, ತಾಳ್ಮೆಯ ಫಲ, ದುಡಿತದ ಸುಖ, ಪ್ರಾಮಾಣಿಕತೆಯ ಪ್ರಸನ್ನತೆ ಇತ್ಯಾದಿ ಮೌಲ್ಯಗಳನ್ನು ಹೊಸ ಕಾಲಘಟ್ಟದಲ್ಲಿ ನೆನಪಿಸಬೇಕಾದ ಅನಿವಾರ್ಯತೆ ಪ್ರಸ್ತುತದ ಕತೆಗಾರರ ಮೂಲ ಆಶಯವಾಗಬೇಕಾಗಿದೆಯೆಂದು ಕತೆಗಾರ ಕೆ.ಮಹೇಶ್ ಅಭಿಪ್ರಾಯಪಟ್ಟರು.
ನಗರದ ನೆಮ್ಮದಿ ಕುಟೀರದಲ್ಲಿ ಶಿರಸಿಯ ಸಾಹಿತ್ಯ ಚಿಂತಕರ ಚಾವಡಿಯ ಆಶ್ರಯದಲ್ಲಿ ನಡೆದ ‘ಕಥಾಗೋಷ್ಠಿ’ಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಪರಿಸರ ಪ್ರೀತಿಯನ್ನೂ, ಕೌಟುಂಬಿಕ ಸೌಹಾರ್ದತೆಯನ್ನೂ ಉಳಿಸಿ, ಬೆಳೆಸುವ ಸಂಗತಿಗಳು ಇಂದಿನ ಕತೆಗಾರರಿಗೆ ವಸ್ತುವಾಗಬೇಕಾಗಿದೆ. ಈ ಕತಾ ಪ್ರಪಂಚದಲ್ಲಿ ತುಡಿಯುವ ಹೊಸ ಮನಸ್ಸುಗಳು ಹೊಸ ವಿನ್ಯಾಸದೊಂದಿಗೆ ಕಥನ ಕ್ರಿಯೆಯಲ್ಲಿ ತೊಡಗಿಕೊಂಡು ಜನಮನವನ್ನು ತಣಿಸಲಿ, ವಿಶಿಷ್ಠ ಸಂವಹನ ಪ್ರಕಾರ ತನ್ನೆಲ್ಲ ಶುಭದಿನಗಳನ್ನು ಕಾಣುವಂತಾಗಲೆಂದು ಹೇಳಿದರು.
ಕನ್ನಡದ ಕತೆಗಾರ ಕೇವಲ ಕತೆಗಳನ್ನು ಕಟ್ಟದೇ ಅದಕ್ಕೂ ಮಿಗಿಲಾದ ವಾಂಙ್ಮಯವನ್ನೂ ಸೃಷ್ಟಿಸಿದ್ದಾನೆ .ಕನ್ನಡದ ಸಣ್ಣಕತೆಗಳು ಒಳಗೊಂಡಿರುವ ಅನುಭವ ದ್ರವ್ಯ ಅಗಾಧವಾದದ್ದು ಮನುಷ್ಯ ಸ್ವಭಾವ, ಮನುಷ್ಯ ಸಂಬಂಧಗಳು, ಸಾಮಾಜಿಕ, ರಾಜಕೀಯ, ಸಾಂಸ್ಕ್ರತಿಕ, ಆರ್ಥಿಕ, ಮನೋವೈಜ್ಞಾನಿಕ,ಆಧ್ಯಾತ್ಮಿಕ ಸಮಸ್ಯೆಗಳ ಜಿಜ್ಞಾಸೆ, ಜಾತಿ, ವರ್ಗ ಲಿಂಗ ಅಸಮಾನತೆಗಳ ಶೋಧ, ಅಸ್ಮಿತೆಯ ಪ್ರಶ್ನೆ, ಸಾಮಾಜಿಕ ನ್ಯಾಯದ ನಿರ್ವಚನೆ, ಪಲ್ಲಟಗೊಳ್ಳುತ್ತಿರುವ ಜೀವನ ಕ್ರಮಗಳ ಅವಲೋಕನ , ಚಲನಶೀಲ ಇತಿಹಾಸದ ದಿಕ್ಕು-ದೆಸೆ -ಗತಿಗಳ ಪ್ರತಿಫಲನ ಹೀಗೇ ಮನುಷ್ಯಾನುಭವದ ಹಲವು ಮುಖಗಳ ದರ್ಶನವನ್ನು ಮಾಡಿಸುವ ಕನ್ನಡ ಕತೆಗಾರರು ಕಥನ ವೈವಿಧ್ಯ,ಮತ್ತು ನಿರೂಪಣೆಯಲ್ಲಿ ತೋರಿರುವ ಪ್ರಯೋಗಶೀಲತೆಯನ್ನು ಗಮನಿಸಿದಾಗ ಸಾಹಿತ್ಯದ ಈ ಗದ್ಯ ಪ್ರಕಾರ ನೆಲೆ ಕಂಡುಕೊಂಡ ಗಟ್ಟಿತನವನ್ನೂ , ಗಾಂಭೀರ್ಯವನ್ನೂ, ಅದರ ಹೆಚ್ಚುಗಾರಿಕೆಯನ್ನೂ ಶ್ರುತ ಪಡಿಸುತ್ತದೆ.ಜೊತೆಗೆಯೇ ಇದಕ್ಕಿರುವ ಜವಾಬ್ದಾರಿಯನ್ನೂ ಹೇಳುತ್ತದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಅವರು ಕಥನ ಸಾಹಿತ್ಯ ಪ್ರಕಾರದಲ್ಲಿ ದುಡಿದ ಜಿಲ್ಲೆಯ ಹಲವಾರು ಮಹನೀಯರುಗಳನ್ನು ಸ್ಮರಿಸಿ ಶ್ರೀಮಂತ ಪರಂಪರೆಯನ್ನು ಸ್ಮರಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕವಿ ದಿವಸ್ಪತಿ ಭಟ್ಟ ಮಾತನಾಡಿ ಸಂವಹನ ಮಾಧ್ಯಮವು ವಾಚನ,ನಿರೂಪಣ,ಮತ್ತು ಆಂಗಿಕ ಭಾಷೆಯನ್ನೂ ಕೂಡಿಕೊಂಡಿರುತ್ತದೆ.ಅವೆಲ್ಲವೂ ಪರಿಣಾಮಕಾರಿಯಾಗಿ ಮೂಡಿ ಬಂದಾಗ ಸಶಕ್ತವೆನಿಸುತ್ತದೆ.ಎಂದರು..
ಭಾಷೆಯ ಮೂಲಕ ಹೇಳಲಾಗದಿರುವುದನ್ನು ಹೃದಯದ ಮೂಲಕ ಅಂತರಂಗದ ಭಾವಗಳನ್ನು ಪ್ರಕಟಿಸುವ ಹೊಸ ಆಯಾಮದ ಕಾಲಘಟ್ಟದಲ್ಲಿ ನಾವಿದ್ದೇವೆ ಎಂದರು.ಭಾವ ಪ್ರಪಂಚ ಮನುಷ್ಯನ ಮನೋಸ್ಥಿತಿಯನ್ನು ಬಿಂಬಿಸುವುದು. ಸಂವಹನಕ್ಕೆ ಒಡನಾಟ,ಅಧ್ಯಯನ, ಅಂತರಂಗದ ಅರಿವು ಪೂರಕ ಅಂಶಗಳಾಗಿ ಪ್ರಭಾವ ಬೀರುತ್ತದೆ ಎಂದು ದಿವಸ್ಪತಿ ಭಟ್ಟ ಹೇಳಿದರು.
ವೇದಿಕೆಯ ಸಂಸ್ಥಾಪಕ ಎಸ್.ಎಸ್.ಭಟ್ಟ ಉಪಸ್ಥಿತಿ ವಹಿಸಿ ಮಾತನಾಡಿ ಇಂದು ಪ್ರಶಸ್ತಿಯ ಮಾನದಂಡವೇ ತೀರಾ ಕುಸಿತ ಕಾಣುತ್ತಿದೆ.ಹೇರಳವಾಗಿ ಪ್ರಶಸ್ತಿಗಳು ವಿತರಿಸಲಾಗುತ್ತಿದೆ. ಸಾಹಿತ್ಯ ಪ್ರಕಾರದ ಗುಣಮಟ್ಟದ ಬೆಳವಣಿಗೆಗೆ ಈ ರೀತಿಯ ಬೇಕಾಬಿಟ್ಟಿ ಪ್ರಶಸ್ತಿ ನೀಡಿಕೆಯೂ ಒಂದು ತಡೆಯಾಗಿ ಪರಿಣಮಿಸಿದೆಯೆಂದು ಹೇಳಿದರು.
ಆರಂಭದಲ್ಲಿ ಎಸ್.ಎಂ.ಹೆಗಡೆ ಹಾಗೂ ರಾಜಲಕ್ಷೀ ಹೆಗಡೆ ಬೊಮ್ನಳ್ಳಿ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.ಕವಯಿತ್ರಿ ಯಶಸ್ವಿನಿ ಶ್ರೀಧರಮೂರ್ತಿ ಸ್ವಾಗತಿಸಿದರು
ಕಾರ್ಯಕ್ರಮದಲ್ಲಿ ಜಗದೀಶ ಭಂಡಾರಿ, ಡಿ.ಎಸ್.ನಾಯ್ಕ, ಮಂಜುನಾಥ ಹೂಡ್ಲಮನೆ, ವಿ.ಪಿ.ಹೆಗಡೆ, ಕೃಷ್ಣಪದಕಿ, ಡಿ.ಎಸ್.ಭಟ್, ಮುಂತಾದ ಐವತ್ತಕ್ಕೂ ಮಿಗಿಲಾದ ಸಾಹಿತ್ಯಾಸಕ್ತರು ಭಾಗವಹಿಸಿದ್ದರು.
ನಂತರ ನಡೆದ ಕಥಾ ವಾಚನದಲ್ಲಿ ಕೆ.ಮಹೇಶ- ‘ಸೆಲೆ’…ಉಮೇಶ ದೈವಜ್ಞ -‘ಬದುಕು ಜಟಕಾಬಂಡಿ’,ಶಂಕರ ಮಡಿವಾಳ -‘ಕದನ’ ,ಯಶಸ್ವಿನಿ ಶ್ರೀದರಮೂರ್ತಿ-‘ಅಮ್ಮ’ , ರಾಜಲಕ್ಷೀ ಭಟ್ಟ-‘ಕಾಡಿನ ರಾಜ’, ಶ್ರೀಮತಿ ಜಲಜಾಕ್ಷೀ ಶೆಟ್ಟಿ- ‘ನಿಜವಾದ ವಿದ್ಯೆ’ , ಭವ್ಯಾ ಹಳೆಯೂರು-‘ಮಾಣಿ ಮದುವೆ’, ಪುಷ್ಪಾ ಮಾಳ್ಕೊಪ್ಪ- ‘ಹೀಗೊಂದು ನೆನಪು’, ಶೋಭಾ ಭಟ್ಟ-‘ಸಾಕಮ್ಮ’, ಪೂರ್ಣಿಮಾ ಹೆಗಡೆ -‘ವಿಶೇಷ ಚೇತನ’, ಗೌತಮ ಬೆಂಗ್ರೆ-‘ಕಲೀಲ ಕಾನನ’, ಗೋಪಾಲಕೃಷ್ಣ ಹೆಗಡೆ -‘ಕವ್ವಾ ಬಿದ್ದಿದ್ದು ಕೌವ್ವಾ’, ಅಜಿತ್ ಬಿಳಗಿ- ‘ಹಿರಿಯರ ಆಟಿಕೆ’, ಸಾವಿತ್ರಿ ಶಾಸ್ತ್ರಿ- ‘ಶ್ರಾದ್ಧ’, ದಾಕ್ಷಾಯಿಣಿ ಪಿ.ಸಿ. -‘ಸೋಲೇ ಗೆಲುವಿನ ಸೋಪಾನ’, ಡಿ.ಎಸ್.ಭಟ್ಟ -‘ಮನೆ’ ಮತ್ತು ಎಸ್.ಎಸ್.ಭಟ್ – ‘ಕಂಜೂಸ್ ಕುಟ್ಟಿ ದಂಪತಿಗಳು’ ಎಂಬ ಕತೆಗಳನ್ನು ಪ್ರಸ್ತುತ ಪಡಿಸಿದರು.
ಹಿರಿಯ ಕವಯಿತ್ರಿ ಜಲಜಾಕ್ಷಿ ಶೆಟ್ಟಿಯವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಸಂಪೂರ್ಣ ಕಾರ್ಯಕ್ರಮದ ನಿರೂಪಣೆಯನ್ನು ವಿಜಯಾ ಶಾನಭಾಗ ಅಚ್ಚುಕಟ್ಟಾಗಿ ನಿಭಾಯಿಸಿದರು. ದಾಕ್ಷಾಯಿಣಿ ಪಿ.ಸಿ. ಕೊನೆಯಲ್ಲಿ ವಂದಿಸಿದರು.