ಶಿರಸಿ : ಪಾರದರ್ಶಕತೆ ಎಲ್ಲಿಯ ತನಕ ತಂತ್ರಜ್ಞಾನದ ಮೇಳೈಕೆಯೊಂದಿಗೆ ಜನರೆದುರು ಇಡುವುದಿಲ್ಲವೋ ಅಲ್ಲಿಯ ತನಕ ಸಹಕಾರಿ ಕ್ಷೇತ್ರಕ್ಕೆ ಹೊಸ ಹರಿವು, ಇನ್ನಷ್ಟು ಪ್ರಗತಿ ಆಗಲು ಸಾಧ್ಯವಿಲ್ಲ. ತಂತ್ರಜ್ಞಾನ ನಮ್ಮ ತಲೆಮಾರಿನ ವೇಗಕ್ಕಿಂತ ಮುಂದೆ ಹೋಗುತ್ತಿದೆ. ತಂತ್ರಜ್ಞಾನ ನಮ್ಮ ಬೇಕು, ಬೇಡಿಕೆಗಳನ್ನು ಒದಗಿಸಿದೆ. ಅದರಂತೆ ನಾವು ಬದಲಾಯಿಸಿಕೊಳ್ಳಲೇಬೇಕು, ಎಂದು ಸಂಸದ ಅನಂತಕುಮಾರ ಹೆಗಡೆ ಹೇಳಿದರು.
ಅವರು ಮಂಗಳವಾರ ಸಂಜೆ ತಾಲೂಕಿನ ಬಿಸಲಕೊಪ್ಪದಲ್ಲಿ ವ್ಯವಸಾಯ ಸೇವಾ ಸಹಕಾರಿ ಸಂಘ ನಿ., ಬಿಸಲಕೊಪ್ಪ ಶತಮಾನೋತ್ಸವದ ಸಮಾರೋಪ ಸಮಾರಂಭದಲ್ಲಿ ಶತಪಥ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡುತ್ತಾ, ಹೊಸ ತಲೆಮಾರಿನ ಮುಖ ಬಂದರೆ ಯೋಚನೆ ಬದಲಾಗಿದೆ ಎಂದಲ್ಲ, ಅರಿವು ಮೂಡಿಸುವ ಕೆಲಸ ಆಗಬೇಕು. ಹೊರ ದೇಶದ ಪ್ರದೇಶದಲ್ಲಿ ಇದ್ದ ಜನ ಕೋವಿಡ್‌ನಿಂದ ಮರಳಿ ಬಂದು ತಿರುಗಿ ಹೋದರು. ನಾವು ಕೃಷಿಗೆ ಮಾತ್ರ ಯೋಚನೆ ಮಾಡದೇ ಕೃಷಿಯೇತರ ವ್ಯವಸ್ಥೆ ಆಗಬೇಕಿದೆ. ಕೆಲವೆಡೆ ಆಗಿದೆ. ಕೆಲವೆಡೆ ಸೂಪರ್ ಮಾರ್ಕೆಟ್ ವ್ಯವಸ್ಥೆ ಬಂದಿದೆ. ಆದರೆ ತಂತ್ರಜ್ಞಾನದಲ್ಲಿ ಅಭಿವೃದ್ಧಿ ಆಗಬೇಕಿದೆ, ಎಂದರು.
ಸಹಕಾರಿ ವ್ಯವಸ್ಥೆ ನಿಂತ ನೀರಾಗಿದೆ. ಕಾನೂನು ಆಗುತ್ತಿದ್ದರೆ ಸಾಲದು ತಂತ್ರಜ್ಞಾನದ ಯುಗದಲ್ಲಿ ತಂತ್ರಜ್ಞಾನ ಕೈ ಬೆರಳ ತುದಿಯಲ್ಲಿ ಇರಬೇಕು. ತಂತ್ರಜ್ಞಾನದ ಬಳಕೆಗೆ ಎಷ್ಟು ಸಿದ್ಧರಾಗಿದ್ದೇವೆ ಎನ್ನುವುದು ಮುಖ್ಯ. ಒಂದು ರೂ.ನಲ್ಲಿಯೂ ಬಂಗಾರವನ್ನು ಖರೀದಿಸಬಹುದು ಎನ್ನುವುದನ್ನು ತೋರಿಸಿದ್ದೇವೆ. ಇದನ್ನು ಕುಳಿತಲ್ಲಿಯೇ ಮಾಡಬಹುದು. ಇಂದಿನ ದರದಲ್ಲಿ ಮುಂದಿನ ೧೦ ವರ್ಷಗಳ ನಂತರವೂ ಸಿಗುವ ವ್ಯವಸ್ಥೆ ಇದು. ತಂತ್ರಜ್ಞಾನ ವ್ಯವಸ್ಥೆಯಾಗಿದೆ, ಎಂದರು.
ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿದ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಶಿರಸಿ ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿ ನಿ., ಅಧ್ಯಕ್ಷ ಶಂಭುಲಿಂಗ ಹೆಗಡೆ, ನಿಡಗೋಡ ಮಾತನಾಡಿ , ನನ್ನ ಜೀವನದಲ್ಲಿ ಹೋರಾಟ ಮಾಡಿಯೇ ಕೆಲಸ ಮಾಡಿ ಬಂದವನು ನಾನು. ರಾಜಕೀಯ ಕ್ಷೇತ್ರವಿರಲಿ, ಸಹಕಾರ ಕ್ಷೇತ್ರವಿರಲಿ ಹೋರಾಡಿ ಬಂದವನು. ಸಹಕಾರ ಕ್ಷೇತ್ರದಲ್ಲಿ ನನಗೆ ಉತ್ತಮ ಮಾರ್ಗದರ್ಶನ ಮಾಡಿದವರು ಜಿ.ಎಂ.ಹೆಗಡೆ, ಹುಳಗೋಳ. ಸಹಕಾರ ಸಂಘ ಡಿವಿಡೆಂಡ್ ಕೊಡುವುದು ಮುಖ್ಯವಲ್ಲ, ಸೇವೆ ಮುಖ್ಯ, ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಸಲಕೊಪ್ಪ ವ್ಯವಸಾಯ ಸೇವಾ ಸಹಕಾರಿ ಸಂಘ ನಿ., ಅಧ್ಯಕ್ಷರಾದ ಎಸ್.ಎನ್.ಭಟ್ಟ ವಹಿಸಿದ್ದರು.
ಸಮಾರೋಪ ಸಮಾರಂಭದಲ್ಲಿ ಧಾರವಾಡ ಹಾಲು ಉತ್ಪಾದಕರ ಮಹಾಮಂಡಳಿ ಸದಸ್ಯ ಸುರೇಶ್ಚಂದ್ರ ಹೆಗಡೆ, ಕೆಶಿನ್ಮನೆ, ಉ.ಕ.ಜಿಲ್ಲಾ ಸಹಕಾರಿ ಯೂನಿಯನ್ ನಿ. ಕುಮಟಾ ಅಧ್ಯಕ್ಷ ವಿ.ಎನ್.ಭಟ್ಟ, ಅಳ್ಳಂಕಿ, ಟಿಎಂಎಸ್ ಶಿರಸಿ ಜಿ.ಎಂ.ಹೆಗಡೆ, ಹುಳಗೋಳ ಹಾಗೂ ಸಂಘದ ಆಡಳಿತ ಮಂಡಳಿ ನಿರ್ದೇಶಕರು ಮತ್ತು ಇತರರು ಉಪಸ್ಥಿತರಿದ್ದರು.