ಕಾರವಾರ: ಮಳೆಗಾಲ ಆರಂಭವಾಗುವ ಮೊದಲೇ ಕಾಮಗಾರಿಗಳು ಪೂರ್ಣಗೊಳ್ಳಲು ಹಾಗೂ ಕಾಮಗಾರಿಯಲ್ಲಿ ಪ್ರಗತಿ ಸಾಧಿಸಲು ಪ್ರಾಮಾಣಿಕವಾಗಿ ಪ್ರಯತ್ನ ನಡೆಯಬೇಕಿದೆ ಎಂದು ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ (ಅಭಿವೃದ್ಧಿ) ದಿಲೀಪ್ ಜಕ್ಕಪ್ಪಗೋಳ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮುಂಡಗೋಡ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಸೋಮವಾರ ನರೇಗಾ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿನ ಗ್ರಾಮಸ್ಥರಿಗೆ ಉದ್ಯೋಗ ಕಲ್ಪಿಸಿ ವಲಸೆ ಹೋಗುವುದನ್ನು ತಪ್ಪಿಸಬೇಕು. ಕೂಲಿಕಾರರಿಗೆ ಬೇಡಿಕೆಗನುಗುಣವಾಗಿ ಕೆಲಸ ನೀಡಬೇಕು. ಪ್ರತಿಶತ ಸಾಧನೆ ಕಡೆ ಗುರಿ ಇರಲಿ. ಮೇ ತಿಂಗಳಿನಲ್ಲಿ ಕೃಷಿ ಇಲಾಖೆಯು ಫಲಾನುಭವಿಗಳಿಗೆ ಕಾಮಗಾರಿಗಳನ್ನು ನೀಡಲು ಸೂಕ್ತ ಸಮಯವಾಗಿದೆ. ರೈತರಿಗೆ ಯೋಜನೆಯ ಸದುಪಯೋಗ ಆಗುವಂತೆ ಕ್ರಮ ಕೈಗೊಳ್ಳಿ ಹಾಗೂ ಅರಣ್ಯ, ತೋಟಗಾರಿಕೆ ಇಲಾಖೆಗಳಿಗೆ ಸಂಬಂಧಿಸಿದಂತೆ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದರು.
ನರ್ಸರಿ ಆರಂಭಿಸಲು ಸೂಕ್ತ ರೀತಿಯಲ್ಲಿ ಕ್ರಮ ವಹಿಸಬೇಕು. ಈಗಾಗಲೇ ಕೆಲವು ಸ್ವಸಹಾಯ ಸಂಘಗಳು, ವಿವಿಧ ಸಂಸ್ಥೆಗಳು ನರ್ಸರಿ ಕಾರ್ಯದಲ್ಲಿ ಭಾಗಿಯಾಗಿವೆ. ನಮ್ಮ ಎಲ್ಲಾ ಇಲಾಖೆಗಳ ಅಧಿಕಾರಿಗಳು ನರ್ಸರಿ ಕಾಮಗಾರಿಯಲ್ಲಿ ಕೈಜೋಡಿಸಬೇಕು ಎಂದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಪ್ರವೀಣ್ ಬಿ.ಕಟ್ಟಿ, ನರೇಗಾ ಸಹಾಯಕ ನಿರ್ದೇಶಕ ಟಿ.ವೈ.ದಾಸನಕೊಪ್ಪ, ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳು, ಕಾತೂರು ಮತ್ತು ಮುಂಡಗೋಡ ವಲಯ, ಸಾಮಾಜಿಕ ಅರಣ್ಯ ವಲಯ ಅರಣ್ಯಾಧಿಕಾರಿಗಳು, ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ, ನರೇಗಾ ಐಇಸಿ ಸಂಯೋಜಕ, ನರೇಗಾ ಸಹಾಯಕ ಎಂಜಿನಿಯರ್ ಇದ್ದರು.