ಭಟ್ಕಳ: ಸಂಸ್ಥೆಯು ಮೀನುಗಾರರ ಸಮಸ್ಯೆಗಳಿಗೆ ಸ್ಪಂದಿಸಿ ಅಗತ್ಯ ಪರಿಕರಗಳನ್ನು ರಿಯಾಯಿತಿ ದರದಲ್ಲಿ ಒದಗಿಸುವುದರ ಜೊತೆಗೆ ಮೀನುಗಾರಿಕಾ ತಂತ್ರಜ್ಞಾನಗಳನ್ನು ಪರಿಚಯಿಸುವುದರ ಮೂಲಕ ಉತ್ಪಾದನೆಯನ್ನು ಹೆಚ್ಚಿಸಿ, ಆರ್ಥಿಕ ಮಟ್ಟವನ್ನು ಸುಧಾರಿಸುವ ಕೆಲಸ ಮಾಡುವುದಾಗಿದೆ ಎಂದು ಶಾಸಕ ಸುನೀಲ ನಾಯ್ಕ ಹೇಳಿದರು
ತಾಲೂಕಿನ ಮಾವಿನಕುರ್ವಾ ಗ್ರಾಮದ ಶ್ರೀಅಮರಲಿಂಗೇಶ್ವರ ಯುವಕ ಮಂಡಳಿ ಸಂಕೀರ್ಣದಲ್ಲಿ ಜಲಾನಯನ ಅಭಿವೃದ್ಧಿ ಇಲಾಖೆ, ಮೀನುಗಾರಿಕಾ ಇಲಾಖೆ ಮತ್ತು ಶಿರಸಿ ಸ್ಕೊಡ್‍ವೆಸ್ ಸಂಸ್ಥೆಯ ಸಹಯೋಗದಲ್ಲಿ ಓಶಿಯನ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್‍ನ ನೂತನ ಕಛೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರದ ಈ ಯೋಜನೆಯ ಗುರಿ ಮತ್ತು ಉದ್ದೇಶ ಪ್ರತಿಯೊಬ್ಬ ಮೀನುಗಾರರಿಗೆ ತಲುಪುವ ಕಾರ್ಯವಾಗಬೇಕು. ಪ್ರತಿಯೊಬ್ಬ ನಿರ್ದೇಶಕರು ಸಹಕಾರ ತತ್ವದ ಆಧಾರದ ಮೇಲೆ ಕೆಲಸ ನಿರ್ವಹಿಸುವುದರ ಮೂಲಕ ಕಂಪನಿಯ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.
ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಚೇತನಕುಮಾರ ಮಾತನಾಡಿ, ತನ್ನದೇ ಆದ ವ್ಯವಸ್ಥಿತ ವ್ಯವಹಾರ ಯೋಜನೆಯನ್ನು ಸಿದ್ಧಪಡಿಸಿ ಮಧ್ಯವರ್ತಿಗಳ ಹಾವಳಿ ತಪ್ಪಿಸಿ ನೇರ ಮಾರುಕಟ್ಟೆ ಸಂಪರ್ಕ ಸಾಧಿಸುವುದರ ಮೂಲಕ ಕಂಪನಿಯು ಲಾಭವನ್ನು ಹೊಂದಿ ತನ್ನ ಸದಸ್ಯ ಶೇರುದಾರರಿಗೆ ಅಗತ್ಯ ಸೇವೆಗಳನ್ನು ಸರಿಯಾದ ಸಮಯಕ್ಕೆ ತಲುಪಿಸುವಂತಾಗಬೇಕು ಎಂದು ಹೇಳಿದರು.
ಸ್ಕೋಡ್‍ವೆಸ್ ಸಂಸ್ಥೆಯ ಕ್ಷೇತ್ರಾಧಿಕಾರಿ ಮಣಿಕಂಠ ನಾಯರ, ಸ್ಕೊಡ್‍ವೆಸ್ ಸಂಸ್ಥೆಯು ಮೀನುಗಾರಿಕಾ ಇಲಾಖೆ ಹಾಗೂ ಕಂಪನಿಯ ಮಧ್ಯೆ ಕೊಂಡಿಯಾಗಿ ಕಾರ್ಯನಿರ್ವಹಿಸುವ ಮೂಲಕ ಕಂಪನಿಗೆ ಅಗತ್ಯ ಮಾಹಿತಿ, ತರಬೇತಿ ಅಧ್ಯಯನ ಪ್ರವಾಸ, ದಾಖಲಾತಿಗಳ ನಿರ್ವಹಣೆ, ತಂತ್ರಜ್ಞಾನಿಗಳ ಮಾಹಿತಿ ಒದಗಿಸಿ, ಕಡಲ ಉತ್ಪನ್ನಗಳನ್ನು ಮೌಲ್ಯವರ್ಧಿಸಿ ಬ್ರಾಂಡ್ ಮಾಡುವ ಮೂಲಕ ಉತ್ಪನ್ನಗಳನ್ನು ಮಾರಾಟ ಮಾಡಿ ಹೆಚ್ಚು ಲಾಭ ಗಳಿಸಬಹುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮಾವಿನಕುರ್ವಾ ಗ್ರಾಮ ಪಂಚಾಯತಿ ಉಪಾಧ್ಯಕ್ಷ ದಾಸ ನಾಯ್ಕ, ಕೊಂಕಣ ಖಾರ್ವಿ ಸಮಾಜದ ತಾಲೂಕಾಧ್ಯಕ್ಷ ಸುಬ್ರಾಯ ಖಾರ್ವಿ, ಕೆಎಫ್‍ಡಿಸಿ ವ್ಯವಸ್ಥಾಪಕ ದತ್ತಾತ್ರೇಯ ಮುಕ್ರಿ, ಕಂಪನಿಯ ನಿರ್ದೇಶಕರು, ಶಶಿಧರ್ ಮೊಗೇರ, ಕೃಷ್ಣ ಹರಿಕಾಂತ ಮುಂತಾದವರು ಇದ್ದರು.