ಶಿರಸಿ: ಜಿಲ್ಲೆಯ ಜನತೆಯನ್ನು ಕಾಡುತ್ತಿರುವ ಇ ಸೊತ್ತು ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ನಿರ್ಧರಿಸಿದ್ದೇವೆ. ಮೆ 11 ರಂದು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಕ್ಯಾಬಿನೆಟ್ ಉಪ ಸಮಿತಿ ಅಂತಿಮ ಸುತ್ತಿನ ಸಭೆ ಕರೆಯಲಾಗಿದ್ದು ಈ ಸಮಸ್ಯೆಗೆ ಒಂದು ಸ್ಪಷ್ಟ ಅಂತ್ಯ ಸಿಗಲಿದೆ ಎಂದು ಕಾರ್ಮಿಕ ಇಲಾಖೆ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.
ತಾಲೂಕಿನ ಬಿಸಲಕೊಪ್ಪದಲ್ಲಿ ಮಂಗಳವಾರ ನಡೆದ ವ್ಯವಸಾಯ ಸೇವಾ ಸಹಕಾರಿ ಸಂಘದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಇ ಸೊತ್ತಿನ ಸಮಸ್ಯೆ ಬಗ್ಗೆ ಕ್ಯಾಬಿನೆಟ್ ಸಮಿತಿ ಈಗಾಗಲೇ 6 ಸಭೆ ಮುಗಿಸಿ ಅಂತಿಮಸ್ವರೂಪಕ್ಕೆ ಬಂದಿದೆ. ಇ ಸೊತ್ತಿನಿಂದಾಗಿ ಕುಟುಂಬಗಳ ಹಿಸೆ ಪ್ರಕ್ರಿಯೆ, ಹೊಸ ಮನೆ ನಿರ್ಮಿಸಲು ಸಾಧ್ಯವಾಗಿಲ್ಲ. ತಾತ್ವಿಕ ಅಂತ್ಯ ಹಾಡಲೇ ಬೇಕು ಎಂಬ ಕಾರಣದಿಂದ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ. ಕಾನೂನಿಗೆ ಮೂರು ತಿದ್ದುಪಡಿ ತಂದು ಸಮಸ್ಯೆ ಬಗೆಹರಿಸುತ್ತೇವೆ. ನಮ್ಮ ಜಿಲ್ಲೆ ಈ ಕಾನೂನಿನಿಂದ ಹೊರಗಿಡಬೇಕಾದ ಅಗತ್ಯತೆ ಇದೆ ಎಂದರು.
ರಾಜ್ಯದಲ್ಲಿ ಸಹಕಾರಿ ಕ್ಷೇತ್ರ ಜೀವಂತವಾಗಿರುವ ಜಿಲ್ಲೆಗಳಲ್ಲಿ ರೈತರ ಬದುಕು ಜೀವಂತವಾಗಿದೆ. ನಮ್ಮ ಪಕ್ಕದ ಜಿಲ್ಲೆ ಹಾವೇರಿಯೇ ಇದಕ್ಕೆ ಸಾಕ್ಷಿ. ರಾಜ್ಯದಲ್ಲಿ ಕೇವಲ 8 ಜಿಲ್ಲೆಗಳಲ್ಲಿ ಸಹಕಾರಿ ಕ್ಷೇತ್ರ ಉತ್ತಮವಾಗಿದೆ. ನಮ್ಮ ಜಿಲ್ಲೆಯ 50 ಕ್ಕೂ ಅಧಿಕ ಸಂಘಗಳು ಶತಮಾನ ಪೂರೈಸಿದೆ. ಡಿಸಿಸಿ ಬ್ಯಾಂಕ್ ಶತಮಾನಗಳ ಕಾಲ ಲಾಭದಲ್ಲಿಯೇ ನಡೆದಿರುವುದು ಜಿಲ್ಲೆಯ ಸಹಕಾರಿ ತತ್ವಕ್ಕೆ ಮಾದರಿ. ಅಡಕೆ ಬೆಳೆಗೆ ದರ ಇರದ 1972-73 ರ ಅವಧಿಯಲ್ಲಿ ಸಹಕಾರಿ ಸಂಘಗಳು ಪ್ರಬಲವಾಗಿರದಿದ್ದರೆ ಅನೇಕ ರೈತರ ಜಮೀನು ಹರಾಜಾಗಿರುತ್ತಿತ್ತು. ಆದರೆ, ನಮ್ಮ ಸಹಕಾರಿ ರಂಗ ಇದಕ್ಕೆ ಅವಕಾಶ ನೀಡದ ಕಾರಣ ರೈತರ ಬದುಕು ಹಸನಾಗಿದೆ ಎಂದರು.
ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ನಮ್ಮ ಊರನ ಯುವಕರು ನಮ್ಮೂರಲ್ಲಿಯೇ ಇರುವಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಸಹಕಾರಿ ಸಂಘಗಳು ವಹಿಸಿಕೊಳ್ಳಬೇಕು. ಕೃಷಿ, ಅರಣ್ಯ ಉತ್ಪಾನೆಯನ್ನು ಗುಡಿ ಕೈಗಾರಿಕೆ ಮೂಲಕ ಅಭಿವೃದ್ಧಿಪಡಿಸಬೇಕು. ಸೊಸೈಟಿಯ ವ್ಯಾಪ್ತಿಯ ಯುವಕರನ್ನು, ಪ್ರತಿಭೆಗಳನ್ನು ಗುರುತಿಸಿ, ತಮ್ಮ ಬಂಡವಾಳದಿಂದ ಉದ್ಯಮಗಳನ್ನು ಆರಂಭಿಸಬೇಕು. ಸರ್ಕಾರಕ್ಕೂ ಸಲಹೆಕೊಡಿ, ತಂತ್ರಜ್ಞಾನದ ಬಳಕೆ ಮಾಡಿ ಸ್ಥಳೀಯ ಉತ್ಪನ್ನ ಸಿದ್ಧಪಡಿಸಬೇಕು. ನಮ್ಮೂರಿನ ಯುವಕರಿಗೆ ಆತ್ಮ ವಿಶ್ವಾಸ ತುಂಬಬೇಕು ಎಂದರು.
ಸೊಸೈಟಿ ವ್ಯಾಪ್ತಿಯಲ್ಲಿ ಸ್ಥಳೀಯ ಸಂಘಗಳ ಸಹಕಾರ ಪಡೆದು ಸ್ವದೇಶಿ ವಸ್ತು ಬಳಕೆ, ಸರಳ ಜೀವನದ ವಾತಾವರಣ ನಿರ್ಮಿಸಬೇಕು. ಪ್ಲಾಸ್ಟಿಕ್ ರಹಿತ ಗ್ರಾಮ ಪಂಚಾಯಿತಿ ರಚನೆಗೆ ಪ್ರತಿಯೊಬ್ಬರೂ ಮುಂದಾಗಬೇಕು. ಸಲ ನೀಡುವಿಕೆ, ಮರುಪಾವತಿಗೆ ಮಾತ್ರ ಸಂಘ ಸಂಸ್ಥೆಗಳು ಸೀಮಿಯಮತವಾಗಬಾರದು ಎಂದರು.
ಸಂಘದ ಅಧ್ಯಕ್ಷ ಎಸ್ ಎನ್ ಭಟ್ ಪ್ರಾಸ್ತಾವಿಕ ಮಾತನಾಡಿದರು. ವಾಯವ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ವಿ ಎಸ್ ಪಾಟೀಲ, ಎಪಿಎಂಸಿ ಅಧ್ಯಕ್ಷ ಶಿವಕುಮಾರ ದೇಸಾಯಿಗೌಡರ್, ಸದಸ್ಯ ಸುನೀಲ ನಾಯ್ಕ, ರಾಘವೇಂದ್ರ ನಾಯ್ಕ ಇತರರಿದ್ದರು.