
ಯಲ್ಲಾಪುರ: ತಾಲೂಕಿನ ಕಳಚೆಯಲ್ಲಿ ಗುರುವಾರ ರಾತ್ರಿ ಗುಡ್ಡ ಕುಸಿದು ಮನೆಯೊಳಗೆ ಬಿದ್ದಿದೆ. ಆರ್.ವಿ.ಭಟ್ ಹೊಸಕುಂಬ್ರಿ ಎಂಬುವವರ ಮನೆಯ ಹಿಂಬದಿಯ ಸುಮಾರು ಒಂದು ಎಕರೆ ಅಡಿಕೆ ತೋಟ ಮತ್ತು ಎರಡು ಎಕರೆ ಗೇರು ನೆಡುತೋಪು ನೆಲಸಮವಾಗಿದೆ.
ಮನೆಗಳಿಗೆ ಬರುವ ರಸ್ತೆ ಸಂಪೂರ್ಣವಾಗಿ ಮುಚ್ಚಿ ಹೋಗಿದೆ. ಇನ್ನು ಮನೆ ಕುಸಿಯುವ ಆತಂಕವಿದ್ದು, ಜೀವದ ಭಯವಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಸಮೀಪದಲ್ಲಿ ಹರಿಯುತ್ತಿರುವ ಹಳ್ಳ ತುಂಬಿ ಹರಿಯುತ್ತಿದ್ದು, ಗುಡ್ಡದಿಂದ ನೀರು ಹರಿದು ಬರುತ್ತಿದೆ. ಇದರಿಂದ ಮತ್ತಷ್ಟು ಆತಂಕ ಮೂಡಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಕಳಚೆಯ ನಾರಾಯಣ ಎನ್ನುವವರ ಮನೆ ಸಂಪೂರ್ಣವಾಗಿ ಕುಸಿದುಬಿದ್ದಿದೆ. ಮಹಿಳೆಯೊಬ್ಬರು ಕುಸಿದುಬಿದ್ದ ಮನೆಯಲ್ಲಿ ಮನೆಯಲ್ಲಿ ಸಿಲುಕಿಕೊಂಡಿರಬಹುದು ಎನ್ನಲಾಗುತ್ತಿದೆ. ಮಕ್ಕಳನ್ನು ರಕ್ಷಿಸಲಾಗಿದೆ ಹಾಗೂ ಪಿ.ಜಿ.ಹೆಗಡೆ ಎನ್ನುವವರ ದನದ ಕೊಟ್ಟಿಗೆಯ ಸಂಪೂರ್ಣ ನೆಲಸಮವಾಗಿದ್ದು ಕರು ಸಿಲುಕಿಕೊಂಡು ಅಸುನೀಗಿದೆ.