ಶಿರಸಿ : ತಾಲೂಕಿನ ಸೋಂದಾ ಸ್ವರ್ಣವಲ್ಲೀ ಮಠದಲ್ಲಿ ಪರಮಪೂಜ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಬೇಡ್ತಿ ಅಘನಾಶಿನಿಕೊಳ್ಳ ಸಂರಕ್ಷಣಾ ಸಮಿತಿ ಸಭೆಯು ಮೇ 10 ರಂದು ನಡೆಯಿತು. ಕಾರ್ಯಕ್ರಮದ ಆರಂಭದಲ್ಲಿ ಬೇಡ್ತಿ ಸಮಿತಿ ಅಧ್ಯಕ್ಷ ಶ್ರೀ ವಿ.ಎನ್.ಹೆಗಡೆ ಬೊಮ್ಮನಳ್ಳಿ ಸ್ವಾಗತ ಪ್ರಾಸ್ತಾವಿಕ ಮಾತನಾಡಿದರು.
ಸಮಿತಿಯ ಕಾರ್ಯದರ್ಶಿ ಅನಂತ ಹೆಗಡೆ ಅಶೀಸರ ಬೇಡ್ತಿ-ವರದಾ ನದೀ ಜೋಡಣೆ ಯೋಜನೆಯ ಡಿಪಿಆರ್ ಪ್ರಕಟವಾದ ಸಂಗತಿ ತಿಳಿಸಿದರು ಹಲವು ಲೋಪದೋಷಗಳಿವೆ. ಸಮೀಕ್ಷೆ ನಡೆಸದೇ ವಿವರ ಯೋಜನಾ ವರದಿ ಹೇಗೆ ಸಿದ್ಧ ಪಡಿಸಲಾಗಿದೆ? ಎಂದು ಪ್ರಶ್ನಿಸಿದರು. ಸರ್ಕಾರ ಡಿ.ಪಿ.ಆರ್ ರದ್ದು ಮಾಡಬೇಕು ಎಂದು ಆಗ್ರಹ ಮಾಡಿದರು.
ಭೂ ವಿಜ್ಞಾನಿ ಡಾ|| ಜಿ.ವಿ. ಹೆಗಡೆ, ನೀರಿಲ್ಲದ ನದಿಗಳಿಂದ ನದಿ ತಿರುವು ಯೋಜನೆ ವ್ಯರ್ಥ ಎತ್ತಿನ ಹೊಳೆ ಯೋಜನೆ ವಿಫಲ ಯೋಜನೆ ಆಗಿದೆ. ಪುನಃ ಇಂಥ ಯೋಜನೆ ಯಾಕೆ? ಎಂದು ಪ್ರಶ್ನಿಸಿದರು.
ಶಾಲ್ಮಲಾ & ಬೇಡ್ತಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ ಬೇಡ್ತಿ ವರದಾ ಯೋಜನೆ ಜಾರಿ ಅಸಾಧ್ಯ. ಅಪಾರ ಅರಣ್ಯ ನಾಶವಾಗಲಿದೆ, ಮುಳುಗಡೆ ಪ್ರಮಾಣ ಕಡಿಮೆ ತೋರಿಸಿದ್ದಾರೆ ಎಂದು ವಾನಳ್ಳಿಯ ಯುವ ಮುಖಂಡ ರಮಾಕಾಂತ ಮಂಡೇಮನೆ ಆಕ್ರೋಶ ವ್ಯಕ್ತ ಮಾಡಿದರು.
ಪ್ರೋ. ಕೆ.ವಿ. ಭಟ್, ಜಿ. ಟಿ ಹೆಗಡೆ ಹೊಸಬಾಳೆ, ನಾರಾಯಣ ಭಟ್ರಕೇರಿ, ಅನಂತ ಭಟ್ ಹುಳಗೋಳ, ಡಾ|| ಗೋಪಾಲ ಹೆಗಡೆ ಕೋಸಗುಳಿ, ಸುರೇಶ, ಸುಬ್ಬಣ್ಣ ಬೋಳ್ಮನೆ, ಡಿ.ಟಿ. ಹೆಗಡೆ ಗುಂದ, ಪ್ರಸನ್ನ ಗಾಂವ್ಕರ್ ವಾಗಳ್ಳಿ ಮುಂತಾದವರು ಹೋರಾಟಕ್ಕೆ ಮುಂದಾಗಬೇಕು ಎಂದರು. ಈ ಸಂದರ್ಭದಲ್ಲಿ ಯಲ್ಲಾಪುರ, ಜೋಯಿಡಾ, ಶಿರಸಿ, ಸಿದ್ದಾಪುರ, ಅಂಕೋಲಾ ತಾಲೂಕುಗಳ ರೈತ ಮುಖಂಡರು ಭಾಗವಹಿಸಿದ್ದರು.
ಪೂಜ್ಯ ಸ್ವರ್ಣವಲ್ಲೀ ಸ್ವಾಮೀಜಿ ಅವರು “ಸರ್ಕಾರ ಬೇಡ್ತಿ-ವರದಾ ಯೋಜನೆ ಕೈ ಬಿಡಬೇಕು. ಜನಾಂದೋಲನ ನ್ಯಾಯಾಲಯ, ಒತ್ತಡ ನಿರ್ಮಾಣ, ಜನ ಜಾಗೃತಿ ಕಾರ್ಯಗಳ ಮೂಲಕ ಬೇಡ್ತಿ ಕಣಿವೆ ಸಂರಕ್ಷಣೆಗೆ ಮುಂದಾಗಬೇಕು. ಜೂನ್ ಮೊದಲವಾರ ಜನ ಜಾಗೃತಿ ಅಭಿಯಾನ, ಜನ ಸಮಾವೇಶ ನಡೆಸಬೇಕು” ಎಂದು ಬೇಡ್ತಿ ಸಮಿತಿಯ ನಿರ್ಣಯ ಪ್ರಕಟಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಆರ್. ಎಸ್. ಹೆಗಡೆ ಬೈರುಂಬೆ ವಂದನೆ ಹೇಳಿದರು.