ಸಿದ್ದಾಪುರ:ತಾಲೂಕಿನ ಭಾನ್ಕುಳಿ ಶ್ರೀರಾಮದೇವ ಮಠ-ಗೋಸ್ವರ್ಗದಲ್ಲಿ ಶ್ರೀಮಠದ ಕಾಮದುಘಾ ಟ್ರಸ್ಟ ಹಾಗೂ ದಿನೇಶ ಶಹ್ರಾ ಫೌಂಡೇಶನ್ ಮುಂಬೈ ಸಂಯುಕ್ತ ಆಶ್ರಯದಲ್ಲಿ ಶಂಕರಪಂಚಮೀ ಉತ್ಸವ ಕಾರ್ಯಕ್ರಮವನ್ನು ಸಂಘಟಿಸಲಾಗಿತ್ತು. ಕಾರ್ಯಕ್ರಮದಲ್ಲಿ ಗೋವಿನ ಸಂರಕ್ಷಣೆಯಲ್ಲಿ ಹತ್ತಾರು ರೀತಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ನಾಡಿನ ವಿವಿಧ ಭಾಗಗಳ ಐವರು ಸಾಧಕರಿಗೆ ‘ಗೋಪಾಲ ಗೌರವ- 2022’ ಪ್ರಶಸ್ತಿಯನ್ನು ಶ್ರೀರಾಮಚಂದ್ರಾಪುರ ಮಠ ಮಹಾಸಂಸ್ಥಾನದ ರಾಘವೇಶ್ವರ ಭಾರತೀ ಶ್ರೀಗಳು ಪ್ರದಾನ ಮಾಡಿ ಆಶೀರ್ವಚನ ನೀಡಿದರು.
ಈ ಜಗತ್ತನ್ನು ಉಳಿಸಿರುವ ಸಪ್ತ ತತ್ವಗಳಲ್ಲಿ ಮೊದಲ ಸ್ತಂಭವೇ ಗೋವು. ಇಂತಹ ಗೋವಿನ ಸೇವೆ ಈ ಜಗದಲ್ಲಿ ನಡೆಯಬೇಕು ಎಂದು ಹೇಳಿದರು. ಗೋಪಾಲ ಗೌರವ ಪ್ರಶಸ್ತಿಯನ್ನು ಪ್ರದಾನ ಮಾಡುವ ಮೂಲಕ ಗೋಸಂರಕ್ಷಣೆಯಲ್ಲಿ ಉಳಿದವರಿಗೂ ಆಸಕ್ತಿ ಹೆಚ್ಚಲಿ ಎಂಬ ಉದ್ದೇಶವೂ ಅಡಗಿದೆ. ಇಂದು ಇಂಧನದ ಕೊರತೆ ತಲೆದೋರುತ್ತಿದ್ದು 20 ಕಿ.ಮಿ.ವರೆಗಿನ ದೂರ ಕ್ರಮಿಸಲು ಹಿಂದಿನಂತೆ ಎತ್ತಿನ ಗಾಡಿ ಬಳಸುವುದು ಸೂಕ್ತ. ಇದರಿಂದ ಪರಿಸರಕ್ಕೂ ಹಾನಿಯಾಗುವುದಿಲ್ಲ ಎಂದರು. ಗೋಸ್ವರ್ಗ ನಮ್ಮೆಲ್ಲರ ಸಂಪತ್ತು. ದೇಶಕ್ಕೆ ಗೋವುಗಳನ್ನು ಸಾಕಲು ಪ್ರೇರೇಪಣೆ ನೀಡುವ ತಾಣ ಗೋಸ್ವರ್ಗ. ಇಂತಹ ಗೋಸ್ವರ್ಗಗಳು ಜಿಲ್ಲೆ ಜಿಲ್ಲೆಗಳಲ್ಲೂ ತಲೆಯೆತ್ತುವಂತಾಗಲಿ. ಗೋ ಸಂತತಿಯಿಂದ ದೇಶಕ್ಕೆ ಸುಭಿಕ್ಷ ಲಭಿಸಲಿ. ಎಲ್ಲರಿಗೂ ಶುಭ ಶ್ರೇಯಸ್ಸು ಉಂಟಾಗಲಿ ಎಂದು ಶ್ರೀಗಳು ಹರಸಿದರು.
ಈ ಸಂದರ್ಭದಲ್ಲಿ ಗೋಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ತುಮಕೂರ ಜಿಲ್ಲೆ ತಿಪಟೂರಿನ ವಿನಯ ಮಡೆನೂರು, ಗೋಆಧಾರಿತ ಕೃಷಿಯಲ್ಲಿ ಸಾಧನೆ ಮಾಡಿರುವ ಮಂಗಳೂರ ಜಿಲ್ಲೆ ಪುತ್ತೂರಿನ ಪ್ರವೀಣ ಸರಳಾಯ, ಪಾರಂಪರಿಕ ಗೋಸಾಕಣೆ ಮಾಡುತ್ತಿರುವ ಚಿತ್ರದುರ್ಗಜಿಲ್ಲೆ ಸೂರಮ್ಮನಹಳ್ಳಿಯ ಕಿಲಾರಿ ಎತ್ತಿನ ಸಣ್ಣೊಬ್ಬಯ್ಯ, ಗೋತಳಿ ಸಂವರ್ಧನೆ ಮಾಡುತ್ತಿರುವ ಮಂಡ್ಯದ ರವಿ ಪಟೇಲ, ಗೋ ಆಧಾರಿತ ಉದ್ಯಮವನ್ನು ಯಶಸ್ವಿಯಾಗಿ ನಡೆಸುತ್ತಿರುವ ಮೈಸೂರ ಕೆ.ಆರ್.ನಗರದ ದೇಸಿರಿ ಸಂಸ್ಥೆ ಇವರುಗಳಿಗೆ ರಾಘವೇಶ್ವರಭಾರತೀ ಶ್ರೀಗಳು ಗೋಪಾಲಗೌರವ ಪ್ರಶಸ್ತಿ ಅನುಗ್ರಹಿಸಿದರು. ಮುಂಬೈನ ದಿನೇಶ ಶಹ್ರಾ ಫೌಂಡೇಶನ್ನ ಮುಖ್ಯಸ್ಥ ದಿನೇಶ ಶಹ್ರಾ, ಕಾಮದುಘಾ ಟ್ರಸ್ಟಿನ ಡಾ.ವೈ.ವಿ.ಕೃಷ್ಣಮೂರ್ತಿ ಪಾಲ್ಗೊಂಡಿದ್ದರು.
ಗೋಪಾಲ ಗೌರವ ಸ್ವೀಕರಿಸಿದ ವಿನಯ ಮಡೆನೂರ ಮಾತನಾಡಿ, ದೇಶೀಯ ಗೋವನ್ನು ಸಂರಕ್ಷಿಸುವ ಆಲೋಚನೆ ನನ್ನಲ್ಲಿ ಮೊಳೆತು ಶ್ರೀರಾಮಚಂದ್ರಾಪುರ ಮಠದ ರಾಜ್ಯ ಗೋಪರಿವಾರದ ಸದಸ್ಯನಾದ ನಾನು ರಾಘವೇಶ್ವರ ಭಾರತೀ ಶ್ರೀಗಳವರನ್ನು ಮಾರ್ಗದರ್ಶನ ಮಾಡುವಂತೆ ಕೋರಿದೆ. ಅವರ ಆಶೀರ್ವಾದ ಬಲದಿಂದ ‘ಶ್ರೀರಾಘವೇಶ್ವರ ಗೋಶಾಲೆ’ಯನ್ನು ಪ್ರಾರಂಭಿಸಿ ಅಲ್ಲಿ 108 ಗೋವುಗಳನ್ನು ಸಾಕುತ್ತಿದ್ದೇನೆ. ಕಸಾಯಿಖಾನೆಗೆ ಸಾಗಿಸುತ್ತಿದ್ದ 1300 ಗೋವುಗಳನ್ನು ರಕ್ಷಿಸಿದ್ದೇನೆ. ಈವರೆಗೆ 450 ಹಸುಗಳನ್ನು, 40 ಜತೆ ಎತ್ತುಗಳನ್ನೂ ಪ್ರೀತಿಯಿಂದ ಸಾಕುವವರಿಗೆ ದಾನ ಮಾಡಿದ್ದೇನೆ. ಯಾವುದೇ ಟ್ರಸ್ಟ ವಗೈರೆ ಮಾಡಿಕೊಳ್ಳದೇ ಶ್ರೀಗಳ ಪ್ರೇರೇಪಣೆಯಿಂದ ಈ ಎಲ್ಲಾ ಕಾರ್ಯಗಳನ್ನೂ ನಡೆಸಿದ್ದು, ಇಂದಿನ ಗೋಪಾಲ ಗೌರವದಿಂದಾಗಿ ಮತ್ತಷ್ಟು ಗೋಸೇವೆಗೆ ತೊಡಗಿಕೊಳ್ಳುವ ಬಯಕೆ ಹೆಚ್ಚಿಸುವಂತಾಗಿದೆ ಎಂದರು.
ಕ್ಯಾಂಪ್ಕೋ ಸಂಸ್ಥೆಯ ಅಧ್ಯಕ್ಷ ಕಿಶೋರ ಕುಮಾರ ಕೊಡ್ಗಿ, ಚೆನ್ನೈನ ಎಸ್ಕೈ ಹೋಂ ಕ್ರಾಫ್ಟ್ಸ ಪಾಲುದಾರ ಎಸ್.ವಿಜಯರಾಘವನ್, ಯುಎಇಯ ಎಕ್ಸಪೋವೈಡ್ ಗ್ಲೋಬಲ್ ಟ್ರೇಡಿಂಗ್ ನಿರ್ದೇಶಕ ಶ್ರೀನಾಥ ವೆಂಕಟರಮಣನ್, ಚೆನ್ನೈನ ಎಸ್ಕೈ ಕಾರ್ಟೋನ್ಸ ನಿರ್ದೇಶಕ ಎ.ಗಣೇಶನ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಪ್ರಶಸ್ತಿ ಪತ್ರವನ್ನು ಭಾಗ್ಯಶ್ರೀ ಭಟ್ಟ ವಾಚಿಸಿದರು. ಮಂಡಲ ಅಧ್ಯಕ್ಷ ಮಹೇಶ ಭಟ್ಟ ಚಟ್ನಳ್ಳಿ ಇತರರು ನಿರ್ವಹಿಸಿದರು. ಹವ್ಯಕ ಮಹಾಮಂಡಲ ಅಧ್ಯಕ್ಷ ಆರ್.ಎಸ್.ಹೆಗಡೆ ಹರಗಿ, ಶಂಕರಪಂಚಮೀ ಸಮಿತಿ ಅಧ್ಯಕ್ಷ ಕೆ.ಎನ್.ಮಂಜುನಾಥ ಭಟ್ಟ ಕವ್ಲಮನೆ ಇತರರು ಉಪಸ್ಥಿತರಿದ್ದರು.
ಪ್ರತಿಭಾವಂತ ವಿದ್ಯಾರ್ಥಿಗೆ ಪ್ರಶಂಸಾ ಪತ್ರ: ತಾಲೂಕಿನ ಭಾನ್ಕುಳಿಯಲ್ಲಿ ನಡೆದ ಶಂಕರಪಂಚಮೀ ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿಯಲ್ಲಿ ಎಲ್ಲಾ ವಿಷಯಗಳಿಗೂ ನೂರಕ್ಕೆ ನೂರು ಅಂಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಪ್ರತಿಭಾವಂತ ವಿದ್ಯಾರ್ಥಿ ತಾಲೂಕಿನ ದೊಡ್ಮನೆಯ ಕಾರ್ತಿಕ ಭಟ್ಟ ಸಾರಂಗ ಅವರನ್ನು ರಾಘವೇಶ್ವರ ಭಾರತೀ ಶ್ರೀಗಳು ಪ್ರಶಂಸಾ ಪತ್ರ ಅನುಗ್ರಹಿಸಿ, ಆಶೀರ್ವದಿಸಿದರು. ಭವಿಷ್ಯದಲ್ಲಿ ಮತ್ತೂ ಹೆಚ್ಚಿನ ಸಾಧನೆ ಮಾಡಿ ದೇಶಸೇವೆಗೆ ಮುಂದಾಗುವಂತೆ ಕರೆನೀಡಿದರು.