ಹೊನ್ನಾವರ: ಶರಾವತಿ ನದಿ ಕವಲಾಗಿ ಕುರ್ವೆ ನಡುಗಡ್ಡೆಯನ್ನು ಸೃಷ್ಟಿಸಿ ಮಾಗೋಡು ಕೋಡಿಯನ್ನು ತನ್ನ ಒಡಲಿಗೆ ಸೇರಿಸಿಕೊಳ್ಳುವ ತವಕದಲ್ಲಿರುವ ಮಾಗೋಡ ತಾರಿಬಾಗಿಲಿನಲ್ಲಿ ತಾಯಿ ಶರಾವತಿಗೆ ಗಣ್ಯರು ಮತ್ತು ಸ್ಥಳೀಯರು ಬಾಗಿನ ಅರ್ಪಿಸಿ, ದೀಪ- ಆರತಿ ತೇಲಿಬಿಟ್ಟು ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ನಾಡಿನ ಪ್ರಸಿದ್ಧ ಕಲಾವಿದರಿಂದ ‘ನಾದ-ನಿನಾದ’ ಎಂಬ ಕಾರ್ಯಕ್ರಮವನ್ನು ಶರಾವತಿಯ ಮಡಿಲಲ್ಲಿ ನಿರ್ಮಿಸಲಾದ ವಿಶೇಷ ವೇದಿಕೆಯಲ್ಲಿ ಏರ್ಪಡಿಸಿದ್ದರು. ತಂಪಾದ ಗಾಳಿ, ಮಂದವಾಗಿ ಹರಿಯುವ ಶರಾವತಿಯ ನೀರು, ಮೋಡ ತುಂಬಿದ ಆಕಾಶದ ವಾತಾವರಣದಲ್ಲಿ ಬೆಳಕು ಮತ್ತು ಧ್ವನಿಯ ಆಟ ಮಧ್ಯರಾತ್ರಿ ಸರಿದರೂ ನಡೆದಿರುವುದು ವಿಶೇಷವಾಗಿತ್ತು.
ಶರಾವತಿಯಲ್ಲಿ ತೇಲುದೀಪದ ಸಾಲನ್ನು ಬಿಟ್ಟು ಉದ್ಘಾಟನೆ ನೆರವೇರಿಸಿದ ಶಾಸಕ ಸುನೀಲ ನಾಯ್ಕ ಮಾತನಾಡಿ, ಅದ್ಭುತ ವಾತಾವರಣ ಹೆಜ್ಜೆಹೆಜ್ಜೆಗೂ ಇರುವ ನೀರು, ಗಾಳಿ, ಬೆಳಕು, ಹಸಿರಿನಿಂದ ಸಮೃದ್ಧವಾದ ಈ ಭಾಗ ಅನುಪಮವಾದದ್ದು. ಇಲ್ಲಿಯವರ ಸಂಘಟನೆ ಅಪರೂಪವಾದದ್ದು. ಇಲ್ಲಿ ನಡೆದ ಸಂಗೀತ ಕಾರ್ಯಕ್ರಮ ಸುವರ್ಣ ಪುಷ್ಪಕ್ಕೆ ಪರಿಮಳ ಬಂದಂತೆ. ಜಿಲ್ಲೆಯ ನಿಸರ್ಗವನ್ನು ಬಳಸಿಕೊಂಡು, ಉಳಿಸಿಕೊಂಡು, ಬೆಳೆಸಿಕೊಂಡು ಜೊತೆಯಲ್ಲಿ ಜಿಲ್ಲೆಯ ಕಲೆ, ಸಂಸ್ಕೃತಿಯ ಹಿರಿಮೆಯನ್ನು ಸಾರುವ ಇಂತಹ ಕಾರ್ಯಕ್ರಮಗಳು ಆಗಾಗ ನಡೆಯಲಿ. ಸಾಂಸ್ಕೃತಿಕ ಕಾರ್ಯಕ್ರಮ ಜನರನ್ನು ಸುಸಂಸ್ಕೃತರನ್ನಾಗಿ ಮಾಡುತ್ತದೆ. ಇಂತಹ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರವಿದೆ ಎಂದು ಘೋಷಿಸಿದರು.
ಹಿರಿಯ ಕಲಾವಿದ ನಿವೃತ್ತ ಪ್ರಾಂಶುಪಾಲ ಪ್ರೊ.ಶಂಭು ಭಟ್ ಮಾತನಾಡಿ, ಜಿಲ್ಲೆಯಲ್ಲಿ ಸಂಗೀತ, ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಹೆಚ್ಚುತ್ತಿರುವುದು, ಹೆಚ್ಚು ಕಲಾವಿದರು ಬೆಳೆಯುತ್ತಿರುವುದು ಸಂಭ್ರಮದ ಸಂಗತಿ. ನಮ್ಮಂಥವರ ಶ್ರಮ ಸಾರ್ಥಕ ಎಂದರು.
ಚಲನಚಿತ್ರ ನಿರ್ದೇಶಕ ವಿಶಾಲ್ ರಾಜ್ ಮಾತನಾಡಿ ಉತ್ತರಕನ್ನಡ ಜಿಲ್ಲೆಯ ನಿಸರ್ಗ ಅಪೂರ್ವವಾದದ್ದು. ಕ್ಯಾಮೆರಾಕ್ಕೆ ಹೇಳಿ ಮಾಡಿಸಿದ ಪ್ರಕೃತಿ ಇಲ್ಲಿಯದು. ಇದನ್ನು ಬಳಸಿಕೊಂಡು ಸಿನಿಮಾ ನಿರ್ಮಿಸಿ ಜಿಲ್ಲೆಯ ಕೀರ್ತಿ ಬೆಳೆಸಬೇಕು ಎಂದರು.
ಮಾಗೋಡು ತಿಮ್ಮಣ್ಣ ಹೆಗಡೆ ಸ್ವಾಗತಿಸಿದರು. ಶ್ರೀಮತಿ ತಾರಾ ಭಟ್ ಪ್ರಾರ್ಥನ ಗೀತೆ ಹಾಡಿದರು. ಪ್ರಶಾಂತ ಮೂಡಲಮನೆ ಕಾರ್ಯಕ್ರಮ ನಿರ್ವಹಿಸಿದರು. ಗಣೇಶ ಮಾಗೋಡ ವಂದಿಸಿದರು. ಪತ್ರಕರ್ತ ಜಿ.ಯು.ಭಟ್ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ವಿವಿಧ ಪ್ರಸಿದ್ಧ ಕಲಾವಿದರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಕಲಾವಿದರಾದ ಪಂ.ರಘುನಾಥ ನಾಕೋಡ ಮತ್ತು ರೇಣುಕಾ ನಾಕೋಡ ಇವರ ವಿವಾಹದ 45ನೇ ವಾರ್ಷಿಕೋತ್ಸವದ ಸಂಭ್ರಮವನ್ನು ವೇದಿಕೆಯಲ್ಲಿ ಆಚರಿಸಲಾಯಿತು. ಜಿಲ್ಲೆಯ ನಾನಾಭಾಗದಿಂದ ಬಂದ ಸಂಗೀತಪ್ರಿಯರು ಈ ವೇಳೆ ಹಾಜರಿದ್ದರು.