ಸಿದ್ದಾಪುರ: ತಾಲೂಕಿನ ಹಾರ್ಸಿಕಟ್ಟಾದಲ್ಲಿ ಯಕ್ಷತರಂಗಿಣಿ ಕಲಾಸಂಘ ಹಾರ್ಸಿಕಟ್ಟಾ ಇವರು ಆಯೋಜಿಸಿದ್ದ ಪ್ರಥಮ ವರ್ಷದ ಬೇಸಿಗೆ ಯಕ್ಷಗಾನ ಶಿಬಿರದ ಸಮಾರೋಪ, ಹಿರಿಯರ ಸಂಸ್ಮರಣೆ, ಅಭಿನಂದನೆ ಹಾಗೂ ಯಕ್ಷಗಾನ ಪ್ರದರ್ಶನ ಹಾರ್ಸಿಕಟ್ಟಾ ಗಜಾನನೋತ್ಸವ ಸಮಿತಿಯಲ್ಲಿ ಭಾನುವಾರ ನಡೆಯಿತು.
ಕಾರ್ಯಕ್ರಮವನ್ನು ಯಕ್ಷಗಾನ ಕಲಾವಿದ ಉದಯ ಕಲ್ಲಾಳ ಉದ್ಘಾಟಿಸಿ ನಮ್ಮ ಸಂಸ್ಕೃತಿ, ಸಂಸ್ಕಾರವನ್ನು ತಿಳಿಸುವ ಯಕ್ಷಗಾನ ಕಲೆಯನ್ನು ಎಲ್ಲರೂ ತಿಳಿದುಕೊಳ್ಳಬೇಕು. ಮಕ್ಕಳಿಗೆ ಯಕ್ಷಗಾನವನ್ನು ಕಲಿಸುವ ಮೂಲಕ ಪಾಲಕರು ಉತ್ತಮ ಶಿಕ್ಷಣ ಹಾಗೂ ಸಂಸ್ಕಾರ ನೀಡುವುದಕ್ಕೆ ಮುಂದಾಗಬೇಕು ಎಂದು ಹೇಳಿದರು.
ಸಂಸ್ಮರಣೆ: ಯಕ್ಷಗುರು ದಿ.ಹೊಸ್ತೋಟ ಮಂಜುನಾಥ ಭಾಗವತ ಅವರ ಸಂಸ್ಮರಣೆ ಕುರಿತು ಪಿ.ವಿ.ಹೆಗಡೆ ಹೊಸಗದ್ದೆ ಹಾಗೂ ದಿ.ವಿಶ್ವನಾಥ ಶೇಟ್ ಹಾರ್ಸಿಕಟ್ಟಾ ಅವರ ಸಂಸ್ಮರಣೆ ಕುರಿತು ಅನಂತ ಶಾನಭಾಗ ಮಾತನಾಡಿದರು.
ಲೀಫ್ ಕಲೆಯಲ್ಲಿ ರಾಷ್ಟ್ರಗೀತೆಯನ್ನು ಬರೆದು ಇಂಡಿಯಾ ಬುಕ್ ಆಫ್ ರೆಕಾರ್ಡ್ ಪುಸ್ತಕದಲ್ಲಿ ದಾಖಲಾಗಿರುವ ತೃಪ್ತಿ ಮಂಜುನಾಥ ನಾಯ್ಕ ಹೊಸ್ಮಂಜು ಅವರನ್ನು ಹಾಗೂ ಯಕ್ಷಗಾನ ಶಿಬಿರದ ಮಕ್ಕಳಿಗೆ ಪ್ರತಿ ವರ್ಷ ಊಟದ ವ್ಯವಸ್ಥೆ ಮಾಡುತ್ತಿರುವ ಎಂ.ವಿ.ಹೆಗಡೆ ಹಾಗೂ ಸುಮಾ ಎಂ.ಹೆಗಡೆ ಹೊನ್ನೆಹದ್ದ ದಂಪತಿಯನ್ನು ಅಭಿನಂದಿಸಲಾಯಿತು..
ಅಶೋಕ ಹೆಗಡೆ ಹಿರೇಕೈ, ಪತ್ರಕರ್ತ ರಮೇಶ ಹೆಗಡೆ ಹಾರ್ಸಿಮನೆ, ಅರುಣ ಬಣಗಾರ,ಮಂಜುನಾಥ ನಾಯ್ಕ, ಮೋಹಿನಿ ನಾಯ್ಕ, ಚಂದ್ರಶೇಖರ ಡಿ.ನಾಯ್ಕ ಅರಶಿನಗೋಡ, ಶ್ರೀಕಾಂತ ಶಾನಭಾಗ ಉಪಸ್ಥಿತರಿದ್ದರು.
ನಂತರ ಶಿಬಿರಾರ್ಥಿಗಳಿಂದ ಕಂಸ ದಿಗ್ವಿಜಯ ಹಾಗೂ ಕಂಸ ವಧೆ ಯಕ್ಷಗಾನ ಪ್ರದರ್ಶನಗೊಂಡಿತು.
ಹಿಮ್ಮೇಳದಲ್ಲಿ ಕೃಷ್ಣ ಮರಾಠಿ ಕಲವೆ,ಮಂಜುನಾಥ ಗುಡ್ಡೆದಿಂಬ, ಗಣೇಶ ಹಾಗೂ ಕು.ಶ್ರೀವತ್ಸ ಸಹಕರಿಸಿದರು.
ಕುಮಾರ ನಾಯ್ಕ ಮೆಣಸಿ, ಮೇದಿನಿ ಹೆಗಡೆ, ಮೈತ್ರಿ ಗೌಡ, ನಂದನ ನಾಯ್ಕ ಅರಶಿನಗೋಡ ಕಾರ್ಯಕ್ರಮ ನಿರ್ವಹಿಸಿದರು.
ಹಾರ್ಸಿಕಟ್ಟಾದಲ್ಲಿ ಬೇಸಿಗೆ ಯಕ್ಷಗಾನ ಶಿಬಿರ ಸಂಪನ್ನ
