ಶಿರಸಿ: ಕೆಡಿಸಿಸಿ ಬ್ಯಾಂಕ್ ಗೆ ಸಿದ್ದಾಪುರ ತಾಲೂಕಿನ ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳ ಪ್ರತಿನಿಧಿ ಸ್ಥಾನಕ್ಕೆ ಸೋಮವಾರ ನಡೆದ ಮರು ಚುನಾವಣೆಯಲ್ಲಿ ಬಿಳಗಿ ಸೊಸೈಟಿಯ ರಾಘವೇಂದ್ರ ಶಾಸ್ತ್ರಿ16 ಮತ ಪಡೆದು ಗೆಲುವಿನ ನಗೆ ಬೀರಿದ್ದಾರೆ.
ಇವರು ತಮ್ಮ ನೇರ ಎದುರಾಳಿ ವಿವೇಕ ಭಟ್ಟ ಗಡಿಹಿತ್ಲು ವಿರುದ್ಧ 8 ಮತಗಳ ಅಂತರದಿಂದ ಗೆಲುವನ್ನು ದಾಖಲಿಸಿದ್ದಾರೆ. ಈ ಹಿಂದೆ ಆಯ್ಕೆ ಆಗಿದ್ದ ಷಣ್ಮುಖ ಗೌಡ ಅವರ ಅಕಾಲಿಕ ನಿಧನದಿಂದ ತೆರವಾದ ಸ್ಥಾನಕ್ಕೆ ಈಗ ಚುನಾಚಣೆ ನಡೆದಿದೆ. ಸಮ ಮತಗಳನ್ನು ಪಡೆದು ಚೀಟಿ ಎತ್ತಿದಾಗ ಸೋಲುಂಡ ಷಣ್ಮುಖ ಗೌಡರ ಒಂದು ಕಾಲದ ಪಟ್ಟಾ ಶಿಷ್ಯನಾಗಿದ್ದ ವಿವೇಕ ಭಟ್ಟ ಗಡಿಹಿತ್ಲು ನೇರವಾಗಿ ಸ್ಪರ್ಧೆ ಒಡ್ಡಿದ್ದರು.
ಸಿದ್ದಾಪುರ ತಾಲೂಕಿನ ಒಟ್ಟೂ 24 ಪ್ರಾಥಮಿಕ ಪತ್ತಿನ ಸೊಸೈಟಿಯಲ್ಲಿ ಕಳೆದ ಬಾರಿ ಗಡಿಹಿತ್ಲು ಗುರುವಿಗೇ ಸಡ್ಡು ಹೊಡೆದು 12 ಮತ ಪಡೆದಿದ್ದರು. ಆದರೆ ಈ ಬಾರಿ ಕೇವಲ 8 ಮತಗಳನ್ನು ಮಾತ್ರ ಪಡೆಯುವಲ್ಲಿ ಸಫಲರಾಗಿದ್ದಾರೆ.
ಗೆದ್ದ ನಂತರದಲ್ಲಿ ಅಭಿಪ್ರಾಯ ಹಂಚಿಕೊಂಡ ರಾಘವೇಂದ್ರ ಶಾಸ್ತ್ರಿ, ಇದು ವಯಕ್ತಿಕ ಗೆಲುವಲ್ಲ, ಬದಲಿಗೆ ಎಲ್ಲರ ಕೆಲಸದಿಂದ ಸಾಧ್ಯವಾಗಿದೆ. ಶಣ್ಮುಖ ಗೌಡರ ಬೆಂಬಲಿಗರ ಸಹಕಾರದ ಫಲವಾಗಿ ಈ ಗೆಲುವು ಸಾಧ್ಯವಾಗಿದೆ ಎಂದರು.
ವಿಧಾನಸಭಾಧ್ಯಕ್ಷ ಕಾಗೇರಿ ಬಲ: ರಾಘವೇಂದ್ರ ಶಾಸ್ತ್ರಿಗೆ ಸ್ಪೀಕರ್, ಕ್ಷೇತ್ರದ ಶಾಸಕ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಬಲ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಅಂದಾಜಿಸಲಾಗಿದೆ.