ಧಾರವಾಡ; ಕರ್ನಾಟಕ ಸರ್ಕಾರ ಬುಧವಾರ 15ಕ್ಕೂ ಅಧಿಕ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಧಾರವಾಡದ ನೂತನ ಜಿಲ್ಲಾಧಿಕಾರಿಯಾಗಿ ಗುರುದತ್ತ ಹೆಗಡೆ ನೇಮಕವಾಗಿದ್ದು, ಅಧಿಕಾರ ಸ್ವೀಕಾರ ಮಾಡಿದರು. ಧಾರವಾಡ ಡಿಸಿಯಾಗಿದ್ದ ನಿತೇಶ್ ಕೆ. ಪಾಟೀಲ ವರ್ಗಾವಣೆಗೊಂಡಿದ್ದಾರೆ.
ಧಾರವಾಡದ ನೂತನ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ 2014ರ ಬ್ಯಾಚ್‌ನ ಐಎಎಸ್ ಅಧಿಕಾರಿ.ಇವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ಹೊನ್ನಗದ್ದೆ ಗ್ರಾಮದವರು. ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ಧಾರವಾಡದ ಕೆಇ ಬೋರ್ಡ ಶಾಲೆಯಲ್ಲಿ ಮಾಡಿದ್ದಾರೆ. ಪಿಯು ಶಿಕ್ಷಣವನ್ನು ಸಹ ಧಾರವಾಡದಲ್ಲಿಯೇ ಪೂರೈಸಿದ್ದಾರೆ. ಧಾರವಾಡದಲ್ಲಿ ವ್ಯಾಸಂಗ ಮಾಡಿದ ಅವರು ಈಗ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದಾರೆ
ಬೆಂಗಳೂರಿನ ಆರ್. ವಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಲೆಕ್ಟ್ರಾನಿಕ್ ಇಂಜಿನಿಯರಿಂಗ್ ಪದವಿ ಪಡೆದಿದು ಬಳಿಕ 2014ರಲ್ಲಿ ಕೇಂದ್ರ ಲೋಕಸೇವಾ ಆಯೋಗ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಭಾರತೀಯ ಆಡಳಿತ ಸೇವೆಗೆ ಆಯ್ಕೆಯಾದರು.
ಹಲವು ಜಿಲ್ಲೆಗಳಲ್ಲಿ ಕೆಲಸ: ಐಎಎಸ್ ಅಧಿಕಾರಿಯಾದ ಬಳಿಕ ಗುರುದತ್ತ ಹೆಗಡೆ ಪ್ರೊಬೇಷನರಿ ಅವಧಿಯನ್ನು ಬೀದರ್ ಜಿಲ್ಲೆಯಲ್ಲಿ ಪೂರೈಸಿದರು. ಕೊಪ್ಪಳದ ಉಪವಿಭಾಗಾಧಿಕಾರಿಯಾಗಿ, ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ, ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
ಧಾರವಾಡ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಬಳಿಕ ಮಾತನಾಡಿದ ಗುರುದತ್ತ ಹೆಗಡೆ, ‘ಜಿಲ್ಲೆಯ ಆಡಳಿತದಲ್ಲಿ ಇನ್ನಷ್ಟು ಪಾರದರ್ಶಕತೆ ತರುವುದು ಸೇರಿದಂತೆ, ತಾಲೂಕು ಹಾಗೂ ಹೋಬಳಿ ಮಟ್ಟದ ಆಡಳಿತದ ಮೇಲೆ ನಿರಂತರ ನಿಗಾವಹಿಸಿ ಜನರಿಗೆ ಸಕಾಲದಲ್ಲಿ ಸ್ಪಂದಿಸಲಾಗುವುದು’ ಎಂದು ಹೇಳಿದ್ದಾರೆ.
ಅವಳಿ ನಗರದ ಸಂಪರ್ಕ ಚೆನ್ನಾಗಿದೆ: ಗುರುದತ್ತ ಹೆಗಡೆ ಅವರು ಹುಬ್ಬಳ್ಳಿಯಲ್ಲಿರುವ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಹುದ್ದೆಯೊಂದಿಗೆ ಹೆಚ್ಚುವರಿಯಾಗಿ ವಾಯವ್ಯ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಹಾಗೂ ಬಿಆರ್‌ಟಿಎಸ್ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಕರ್ನಾಟಕ ಸರ್ಕಾರ ಇದೀಗ ಗುರುದತ್ತ ಹೆಗಡೆಯನ್ನು ಧಾರವಾಡ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಿದ್ದು, ಅಧಿಕಾರ ಸ್ವೀಕಾರ ಮಾಡಿದರು.
ಮಾಧ್ಯಮಗಳ ಜೊತೆ ಮಾತನಾಡಿದ ಗುರುದತ್ತ ಹೆಗಡೆ, ‘ಕಳೆದ ಸುಮಾರು ಒಂದು ವರ್ಷದಿಂದ ಜಿಲ್ಲೆಯಲ್ಲಿಯೇ ವಿವಿಧ ಹುದ್ದೆಗಳನ್ನು ನಿಭಾಯಿಸಿರುವುದು ಹಾಗೂ ಸ್ಥಳೀಯವಾಗಿ ಸಂಪೂರ್ಣ ವ್ಯಾಸಂಗ ಮಾಡಿರುವುದು, ವಾಸದ ಪರಿಚಯವಿರುವುದರಿಂದ ಆಡಳಿತ ನಿರ್ವಹಣೆಗೆ ನೆರವಾಗಬಹುದು’ ಎಂದರು
ನೀರಿನ ಪೂರೈಕೆಗೆ ಆದ್ಯತೆ: ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಗುರುದತ್ತ ಹೆಗಡೆ, ‘ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಪ್ರಾಮಾಣಿಕತೆ ಹೆಚ್ಚಿಸುವುದು ಮೊದಲ ಧ್ಯೇಯವಾಗಿದೆ. ಹುಬ್ಬಳ್ಳಿ-ಧಾರವಾಡ ಅವಳಿ ನಗರಕ್ಕೆ ಈಗ ಸಾಕಷ್ಟು ಪ್ರಮಾಣದಲ್ಲಿ ನೀರು ಲಭ್ಯವಿದೆ. ನಾಗರಿಕರಿಗೆ ಅದನ್ನು ಸಮರ್ಪಕವಾಗಿ ಪೂರೈಸಲು ಕೈಗೊಳ್ಳಬಹುದಾದ ಕ್ರಮಗಳ ಕುರಿತು ಮಹಾನಗರಪಾಲಿಕೆ ಆಯುಕ್ತರೊಂದಿಗೆ ಚರ್ಚಿಸಿದ್ದೇನೆ. ಮಂಗಳವಾರ ಸರ್ಕಾರದ ಕಾರ್ಯದರ್ಶಿಗಳೊಂದಿಗೆ ಈ ಬಗ್ಗೆ ಸಭೆ ನಡೆಯಲಿದೆ’ ಎಂದು ಹೇಳಿದರು.