ಮುಂಡಗೋಡ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ವಿಶೇಷ ತಂಡ ಶುಕ್ರವಾರ ರಾತ್ರಿ ದಾಳಿ ನಡೆಸಿ ಐಪಿಎಲ್ ಬೆಟ್ಟಿಂಗ್‍ನಲ್ಲಿ ತೊಡಗಿದ್ದ ನಾಲರನ್ನು ವಶಕ್ಕೆ ಪಡೆದಿದ್ದಾರೆ.
ಪಟ್ಟಣದ ನೂರಾನಿಗಲ್ಲಿ ನಿವಾಸಿ ಜಮೀರಹ್ಮದ ನಜೀರಅಹ್ಮದ ದರ್ಗಾವಾಲೆ, ಕಿಲ್ಲೇ ಓಣಿಯ ಮಹ್ಮದಸಾಧಿಕ ಮಾಬುಬಲಿ ಚಾವೂಸ್, ಹುಬ್ಬಳ್ಳಿಯ ಗೋಕುಲ ರಸ್ತೆಯ ನಿವಾಸಿ ಧರ್ಮದಾಸ ಅಂಬಾಸ ಕಬಾಡಿ, ಹುಬ್ಬಳ್ಳಿ ದುರ್ಗದಬೈಲ್ ಗೌಳಿಗಲ್ಲಿಯ ರಾಕೇಶ ಎಕನಾಥ ಕೊಳೇಕರ ವಶದಲ್ಲಿರುವವರು.
ಪಟ್ಟಣದ ಮುಂಡಗೋಡ-ಕಲಘಟಗಿ ರಸ್ತೆಯ ಕರ್ಮಾಪೌಂಡೇಶನ್ ಪಕ್ಕದ ಸಾರ್ವಜನಿಕ ಕಚ್ಚಾ ರಸ್ತೆಯಲ್ಲಿ ಕುಳಿತುಕೊಂಡು ಶುಕ್ರವಾರ ರಾತ್ರಿ ಗುಜರಾತ್ ಟೈಟನ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ಮಧ್ಯ ನಡೆಯುತ್ತಿರುವ ಐಪಿಎಲ್ ಲೀಗ್ ಪಂದ್ಯದ ಮೇಲೆ ಫೋನ್ ಮೂಲಕ ಜನರನ್ನು ಸಂಪರ್ಕಿಸಿ ಬೆಟ್ಟಿಂಗ್ ನಡೆಸುತ್ತಿದ್ದ ವೇಳೆ ಎಸ್‍ಪಿ ಸ್ಕ್ವಾಡ್‍ನ ಪಿಎಸೈ ಪ್ರೇಮನ್‍ಗೌಡ ಪಾಟೀಲ ನೇತೃತ್ವದ ತಂಡ ದಾಳಿ ನಡೆಸಿ ಕೃತ್ಯದಲ್ಲಿ ತೊಡಗಿದ್ದವರನ್ನು ವಶಕ್ಕೆ ಪಡೆದಿದೆ.
ಆರೋಪಿಗಳಿಂದ 52,350 ನಗದು ಹುಂಡೈ ಮ್ಯಾಹ್ನಾ ಕಾರು, ಎಕ್ಸೆಸ್ ಸ್ಕೂಟಿ ಹಾಗೂ ಇನ್ನಿತರ ವಸ್ತುಗಳನ್ನು ಜಪ್ತಿಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.