ಅಂಕೋಲಾ: ಜಾನಪದ ಗಾಯಕಿ, ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ಅವರ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿದ್ದು, ಅವರನ್ನು ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೇ 7ರಂದು ರಾತ್ರಿ ಕಾರವಾರ ಆಸ್ಪತ್ರೆಯಿಂದ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ಒಯ್ಯಲಾಗಿದೆ. ಉಸಿರಾಟ ಸಮಸ್ಯೆ ಕಾರಣದಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ಸಮೀಪವರ್ತಿ ಮೂಲಗಳು ತಿಳಿಸಿದ್ದು ಕೆಎಂಸಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು ಹೇಳಲಾಗಿದೆ.
ಸುಕ್ರಿ ಬೊಮ್ಮಗೌಡ ಉತ್ತರ ಕನ್ನಡ ಜಿಲ್ಲೆಯ ಬಡಿಗೇರಿ ಗ್ರಾಮದವರು,ಬುಡಕಟ್ಟು ಸಮುದಾಯವಾದ ಹಾಲಕ್ಕಿ ಒಕ್ಕಲಿಗೆ ಪಂಗಡಕ್ಕೆ ಸೇರಿದವರು. ಸಾಂಪ್ರಾದಯಿಕ ಬುಡಕಟ್ಟು ಸಂಗೀತ ಕ್ಷೇತ್ರದಲ್ಲಿನ ಅವರ ಕೆಲಸಗಳಿಗೆ ಪದ್ಮಶ್ರೀ, ಪುರಸ್ಕಾರಗಳು ಅವರಿಗೆ ಲಭಿಸಿವೆ. ಅವರು ತಮ್ಮ ಸಮುದಾಯದ ಇತರರಿಗೆ ಸಾಂಪ್ರದಾಯಿಕ ಹಾಡುಗಳನ್ನ ಕಲಿಸಿ ಕೊಡುತ್ತಾರೆ. ಇವರು ಸಾರಾಯಿ ವಿರೋಧಿ ಹೋರಾಟದಲ್ಲಿಯೂ ಮಂಚೂಣಿಯಲ್ಲಿದ್ದರು. ಬುಡಕಟ್ಟು ಜನಾಂಗವಾದ ಹಾಲಕ್ಕಿ ಸಮುದಾಯವನ್ನು ಕೇಂದ್ರ ಸರ್ಕಾರ ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಒತ್ತಾಯಿಸುತ್ತ ಬಂದಿದ್ದಾರೆ.