ಹೊನ್ನಾವರ: ಕಾಮಕೋಡ ದುರ್ಗಮ್ಮ ದೇವಸ್ಥಾನ, ಕಾಮಕೋಡ ಪರಿಸರ ಕೂಟ ಹಾಗೂ ಅರಣ್ಯ ಇಲಾಖೆ ಇವುಗಳ ಆಶ್ರಯದಲ್ಲಿ ಹೆರಾವಲಿ ಗ್ರಾಮದ ಹಾಚಲಮಕ್ಕಿಯ ಕಾಮಕೋಡ ದೇವರಕಾಡಿನಲ್ಲಿರುವ ಶ್ರೀ ಕಾಮಕೋಡ ದುರ್ಗಮ್ಮ ದೇವಸ್ಥಾನದಲ್ಲಿ ಮೇ 10 ಹಾಗೂ 11ರಂದು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಶ್ರೀದೇವರ ವಾರ್ಷಿಕ ವರ್ಧಂತಿ ಉತ್ಸವದ ಅಂಗವಾಗಿ ಕಟ್ಟೆ ಶಂಕರ ಭಟ್ಟ ಅವರ ನೇತೃತ್ವದಲ್ಲಿ ಹೋಮ, ಕಲಶಾಭಿಷೇಕ, ಸಾಮೂಹಿಕ ಸತ್ಯನಾರಾಯಣ ವೃತ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು 10 ಹಾಗೂ 11ರಂದು ನಡೆಯಲಿವೆ.
11ರಂದು ಸಂಜೆ 5ಕ್ಕೆ ‘ಕಾಡು-ಬೆಳದಿಂಗಳಲ್ಲಿ ಭಾವಲಹರಿ’ ಎಂಬ ಪರಿಸರ ಸ್ನೇಹಿ ಸಾಂಸ್ಕೃತಿಕ ಉತ್ಸವ ನಡೆಯಲಿದೆ.
ಶಾಸಕ ಸುನೀಲ ನಾಯ್ಕ, ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ ಕೆ.ವಿ., ಖ್ಯಾತ ವಿಮರ್ಶಕ ಡಾ.ಎಂ.ಜಿ.ಹೆಗಡೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವಾನಂದ ಹೆಗಡೆ ಕಡತೋಕಾ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಮಾಜಿ ಶಾಸಕ ಮಂಕಾಳ ವೈದ್ಯ ಅವರನ್ನು ಸನ್ಮಾನಿಸಲಾಗುವುದು. ದೇವಸ್ಥಾನ ಸಮಿತಿಯ ಅಧ್ಯಕ್ಷ ಗಣೇಶ ನಾಯ್ಕ ಉಪಸ್ಥಿತರಿರುವರು.
ಸಂಜೆ 6ಕ್ಕೆ ಸಿದ್ದಾಪುರ ಹಿತ್ಲಕೈನ ಒಡ್ಡೋಲಗ ರಂಗ ಪರ್ಯಟನ ತಂಡದಿಂದ ‘ಧರಣಿ ಮಂಡಲ’ ನಾಟಕ ಪ್ರದರ್ಶನ ನಡೆಯಲಿದ್ದು ಡಾ.ಎಚ್.ಎಸ್.ವೆಂಕಟೇಶಮೂರ್ತಿ ರಚಿಸಿರುವ ಪ್ರಸ್ತುತ ನಾಟಕಕ್ಕೆ ಸಂಗೀತ ಮತ್ತು ವಿನ್ಯಾಸದೊಂದಿಗೆ ಡಾ.ಶ್ರೀಪಾದ ಭಟ್ ನಿರ್ದೇಶನವಿದೆ. ಗಣೇಶ ಭೀಮನಕೋಣೆ ಸಹ ನಿರ್ದೇಶಕರು. ಗಣಪತಿ ಬಿ.ಹಿತ್ತಲಕೈ ಸಂಯೋಜಿಸಿದ್ದು, ಅನುಷ್ ಮತ್ತು ಮುನ್ನಾ ಸಂಗೀತ ನೆರವು ನೀಡುವರು. ಅರ್ಚನಾ ತೆಂಗಿನಮನೆ, ಸಂಗೀತಾ ಬಿಡೆ, ಕೇಶವ ಹೆಗಡೆ ಕಿಬ್ಳೆ, ಸುಮಂತ್ ಅನಾಮಿಕ, ಯೋಗೀಶ ಕುಣಬಿ, ಧಾತ್ರಿ ಹಿತ್ತಲಕೈ, ನವ್ಯಾ ಉಪಾಧ್ಯಾಯ, ನವೀನ ಕುಣಬಿ, ಸಿದ್ಧು ಬಂಥನಾಳ ನಾಟಕದ ಪಾತ್ರಧಾರಿಗಳು. ಗುರುಮೂರ್ತಿ ವರದಾಮೂಲ, ಮುರುಗೇಶ ಬಸ್ತಿಕೊಪ್ಪ, ಗಣಪತಿ ಹೆಗಡೆ ವಡ್ಡಿನಗದ್ದೆ ಹಾಗೂ ಗೋಪಿನಾಥ ಆಚಾರ್ ನಾಟಕಕ್ಕೆ ತಾಂತ್ರಿಕ ನೆರವು ನೀಡುವರು.
ಜನರಲ್ಲಿ ಅರಣ್ಯ, ಪರಿಸರದ ಕುರಿತು ಕಾಳಜಿ ಹಾಗೂ ಪ್ರೀತಿ ಮೂಡಿಸುವ ಉದ್ದೇಶದೊಂದಿಗೆ ಪ್ರಾಕೃತಿಕ ಸೊಬಗಿನ ಮಡಿಲಲ್ಲಿ ನಡೆಯುವ ಪ್ರಸ್ತುತ ಪರಿಸರ ಸ್ನೇಹಿ ಉತ್ಸವದಲ್ಲಿ ಪಾಲ್ಗೊಂಡು ಪರಿಸರ ರಕ್ಷಣೆಯ ಪ್ರಯತ್ನದಲ್ಲಿ ಕೈಜೋಡಿಸಬೇಕು ಎಂದು ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.