ದಾಂಡೇಲಿ: ಪ್ರವಾಸಕ್ಕೆಂದು ಬಂದಿದ್ದ ಪ್ರವಾಸಿಗರು ಹೊಡೆದಾಡಿಕೊಂಡು ದಾಂಧಲೆ ಎಬ್ಬಿಸಿದ ಘಟನೆ ಮೌಳಂಗಿ ಇಕೋ ಪಾರ್ಕಿನಲ್ಲಿ ನಡೆದಿದೆ.
ಮೌಳಂಗಿ ಇಕೋ ಪಾರ್ಕಿಗೆ ಬಂದಿದ್ದ ಬೆಳಗಾವಿ ಜಿಲ್ಲೆಯ ಖಾನಪುರ ತಾಲ್ಲೂಕಿನ ನಿವಾಸಿಗಳಾದ ಮಹಮ್ಮದ್ ಯಾಸೀನ ಅಬ್ದುಲ್ ಖಾದರ್ ಮಕಾಂದಾರ, ಜೇಮ್ಸ್ ಲೋಬೋ, ಶಾರೂಕ್ ಶೌಕತ್ ಸನದಿ, ಹುಸೇನ ಇಸ್ಮಾಯಿಲ್ ಕಿತ್ತೂರ್ ಮತ್ತು ಮಾಬೂಬ್ ಸುಭಾನಿ ನಜೀರ್ ಸಾಬ ಹಂದೂರ್ ಎಂಬವರುಗಳೆ ಒಬ್ಬರಿಗೊಬ್ಬರು ಕೈ ಕೈ ಮಿಲಾಯಿಸಿಕೊಂಡು, ಹೊಡೆದಾಟ ನಡೆಸಿ, ಸಾರ್ವಜನಿಕ ಸ್ಥಳದಲ್ಲಿ ಶಾಂತಿ ಕದಡಿದ್ದಾರೆ.
ಈ ಬಗ್ಗೆ ಮೌಳಂಗಿ ಇಕೋ ಪಾರ್ಕಿನ ಭದ್ರತಾ ಸಿಬ್ಬಂದಿ ಸೋಮನಾಥ ಪ್ರಕಾಶ ತಳವಾರ ಅವರು ತಿಳುವಳಿಕೆ ನೀಡಿದರೂ, ಅದನ್ನು ಲೆಕ್ಕಿಸದೇ ಹೊಡೆದಾಟ ನಡೆಸಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಶಾಂತತಾ ಭಂಗವನ್ನುಂಟುಪಡಿಸಿದ ಐವರ ಮೇಲೆ ದಾಂಡೇಲಿ ಗ್ರಾಮೀಣ ಠಾಣೆಯಲ್ಲಿ ಇಕೋಪಾರ್ಕಿನ ಭದ್ರತಾ ಸಿಬ್ಬಂದಿ ಸೋಮನಾಥ ಪ್ರಕಾಶ ತಳವಾರ ಅವರು ದೂರು ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪಿಎಸೈ ಐ.ಆರ್.ಗಡ್ಡೇಕರ ಅವರು ಪರಿಶೀಲನೆ ಹಾಗೂ ವಿಚಾರಣೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.