ಶಿರಸಿ: ಶಿರಸಿ ಶೈಕ್ಷಣಿಕ ಜಿಲ್ಲೆಯ 102 ಸರ್ಕಾರಿ ಶಾಲೆಗಳಲ್ಲಿ ಒಬ್ಬರೂ ಕಾಯಂ ಶಿಕ್ಷಕರಿಲ್ಲ. ಈ ಪೈಕಿ ಬಹುತೇಕ ಕುಗ್ರಾಮದ ಶಾಲೆಗಳೇ ಆಗಿವೆ.
ಗುಡ್ಡಗಾಡು ಜಿಲ್ಲೆ ಎಂಬ ಹಣೆಪಟ್ಟಿ ಹೊತ್ತಿರುವ ಜಿಲ್ಲೆಯಲ್ಲಿ ಕಾಡು ಪ್ರದೇಶದಲ್ಲಿರುವ ಶಾಲೆಗಳು ಹೆಚ್ಚಿವೆ. ಈ ಪೈಕಿ ಜೋಯಿಡಾ ತಾಲ್ಲೂಕು ಅಗ್ರ ಪಂಕ್ತಿಯಲ್ಲಿದೆ. ಈ ತಾಲ್ಲೂಕಿನ 42 ಶಾಲೆಗಳಿಗೆ ಈವರೆಗೂ ಕಾಯಂ ಶಿಕ್ಷಕರ ನಿಯೋಜನೆಯಾಗಿಲ್ಲ.
ಗೋಡಸೇತ, ಭಾಮಣೆ, ಪಾತಾಗುಡಿ, ಶಿರೋಳಿ, ತೇಲೋಲಿ, ಕುಮಗಾಳಿ ಸೇರಿದಂತೆ ಹಲವು ಕುಗ್ರಾಮಗಳಲ್ಲಿ ವಿದ್ಯಾರ್ಥಿಗಳಿದ್ದರೂ ಶಿಕ್ಷಕರಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಪರದಾಡುವ ಸ್ಥಿತಿ ಇದೆ.
ಶಿರಸಿ ತಾಲ್ಲೂಕಿನ 22, ಸಿದ್ದಾಪುರದ 13, ಹಳಿಯಾಳದ 11, ಯಲ್ಲಾಪುರದ 10 ಹಾಗೂ ಮುಂಡಗೋಡದ 4 ಶಾಲೆಗಳಲ್ಲೂ ಇಂತದ್ದೇ ಸ್ಥಿತಿ ಇದೆ. ಸ್ಥಳೀಯ ಅತಿಥಿ ಶಿಕ್ಷಕರನ್ನೇ ಪತ್ತೆ ಹಚ್ಚಿ ಅವರನ್ನು ಶಾಲೆಗಳನ್ನು ನಡೆಸಲಾಗುತ್ತಿದೆ. ಅಕ್ಕಪಕ್ಕದ ಶಾಲೆಗಳಿಂದ ಖಾಯಂ ಶಿಕ್ಷಕರನ್ನು ಸೀಮಿತ ದಿನಕ್ಕೆ ನಿಯೋಜನೆಯ ಮೇಲೆ ಕಳುಹಿಸಲಾಗುತ್ತಿದೆ.
‘ಜೋಯಿಡಾ, ಸಿದ್ದಾಪುರ, ಶಿರಸಿ ತಾಲ್ಲೂಕಿನ ಕೆಲವು ಶಾಲೆಗಳು ತೀರಾ ಹಿಂದುಳಿದ ಕುಗ್ರಾಮಗಳಲ್ಲಿವೆ. ಅಲ್ಲಿ ನೆಟ್‌ವರ್ಕ್, ಬಸ್ ಸೌಕರ್ಯ ಸಿಗದು. ಪಕ್ಕಾ ರಸ್ತೆಯಂತೂ ಇಲ್ಲವೇ ಇಲ್ಲ. ಬಾಡಿಗೆ ಮನೆ ಸಿಗುವುದೂ ದೂರದ ಮಾತು. ಹೀಗಾಗಿ ಅಂತಹ ಶಾಲೆಗೆ ತೆರಳಲು ಬಹುತೇಕರು ಒಪ್ಪುವುದಿಲ್ಲ’ ಎಂದು ಹಿರಿಯ ಶಿಕ್ಷಕರೊಬ್ಬರು ಸಮಸ್ಯೆ ಬಗ್ಗೆ ವಿವರಿಸಿದರು.
‘ಹೊಸದಾಗಿ ನೇಮಕಾತಿಯಾದ ಯುವ ಶಿಕ್ಷಕರಲ್ಲಿ ಕೆಲವರು ಜೋಯಿಡಾದ ಶಾಲೆಗೆ ಕರ್ತವ್ಯಕ್ಕೆ ತೆರಳುತ್ತಾರೆ. ಏಳು ವರ್ಷದ ಬಳಿಕ ಅಲ್ಲಿಂದ ವರ್ಗಾವಣೆ ಪಡೆದು ಹೋಗುತ್ತಾರೆ. ವರ್ಗಾವಣೆ ಕೌನ್ಸೆಲಿಂಗ್ ವೇಳೆ ಕುಗ್ರಾಮಗಳ ಶಾಲೆ ಆಯ್ಕೆ ಮಾಡಿಕೊಳ್ಳಲು ಯಾವೊಬ್ಬ ಶಿಕ್ಷಕರೂ ಬಯಸುವುದಿಲ್ಲ’ ಎಂದರು.
‘ಪ್ರತಿ ಬಾರಿ ವರ್ಗಾವಣೆ ಕೌನ್ಸೆಲಿಂಗ್ ವೇಳೆ ಕೆಲವು ಹಳ್ಳಿಗಳಲ್ಲಿರುವ ಶಾಲೆಗಳಿಂದ ವರ್ಗಾವಣೆ ಪಡೆಯಲು ಶಿಕ್ಷಕರು ಮುಂದಾಗುತ್ತಿದ್ದಾರೆ. ಹುದ್ದೆ ಖಾಲಿ ಉಳಿದರೂ ಅಲ್ಲಿಗೆ ನೇಮಕವಾಗಲು ಉಳಿದ ಶಿಕ್ಷಕರು ಬಯಸುತ್ತಿಲ್ಲ. ಒತ್ತಡ ಹೇರಿ ಶಿಕ್ಷಕರನ್ನು ನಿಯೋಜನೆ ಸಾಧ್ಯವಿಲ್ಲದ ಕಾರಣ ಸಮಸ್ಯೆ ಉಂಟಾಗಿದೆ’ ಎನ್ನುತ್ತಾರೆ ಡಿಡಿಪಿಐ ಪಿ.ಬಸವರಾಜ್.
1271 ಶಿಕ್ಷಕರ ಕೊರತೆ: ಏಳು ತಾಲ್ಲೂಕುಗಳ ವ್ಯಾಪ್ತಿ ಒಳಗೊಂಡ ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ 1183 ಸರ್ಕಾರಿ ಶಾಲೆಗಳಿದ್ದು, ಜಿಲ್ಲೆಗೆ 1271 ಶಿಕ್ಷಕರ ಕೊರತೆ ಇದೆ. 67 ಶಾಲೆಗಳಿಗೆ ಕಾಯಂ ಮುಖ್ಯ ಶಿಕ್ಷಕರ ಅಗತ್ಯವಿದೆ. 749 ಕಿರಿಯ ಪ್ರಾಥಮಿಕ, 394 ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ ಅಗತ್ಯವಿದೆ. ಈಚೆಗೆ 606 ಮಂದಿ ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲು ಅನುಮತಿ ಸಿಕ್ಕಿದೆ ಎಂದರು.