ಸಿದ್ದಾಪುರ: ಅಭಿವೃದ್ಧಿ ಕೆಲಸಗಳು ಎಂದರೆ ಹಾಗೇ ಆಗುವುದಿಲ್ಲ. ನಿರಂತರವಾದ ಪ್ರಯತ್ನಗಳನ್ನು ಮಾಡಿರುವುದರಿಂದ ಸಾಧ್ಯವಾಗುತ್ತದೆ. ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಆದರೆ ನಾನೆ ಹೇಳಿಕೊಳ್ಳಬೇಕಾಗಿದೆ. ನನಗೆ ನಾನೇ ಡಂಗೂರ ಹೊಡೆದು ಕೊಳ್ಳುವುದಕ್ಕೆ ಬರುವುದಿಲ್ಲ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಅವರು ಪಟ್ಟಣದ ನೂತನ ಬಸ್ ನಿಲ್ದಾಣದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ ತಾಲೂಕು ನಂಜುಡಪ್ಪನವರ ವರದಿಯಂತೆ ಹಿಂದುಳಿದ ತಾಲೂಕುಗಳ ಪಟ್ಟಿಯಲ್ಲಿದೆ. ಆದರೆ ಈಗ ಸರ್ವೆ ಮಾಡಿದರೆ ತಾಲೂಕು ಖಂಡಿತವಾಗಿಯೂ ಮುಂದುವರಿದಿರುವುದು ತಿಳಿಯುತ್ತದೆ. ಅಭಿವೃದ್ಧಿಯ ವೇಗ ಪಡೆದುಕೊಂಡಿದೆ. ಆನರ ಬೇಡಿಕೆಗಳನ್ನು ಅರಿತು ಎಲ್ಲಾ ಕೆಲಸ ಮಾಡುತ್ತೇನೆ. ನನಗೆ ತಾಲೂಕಿಗೆ ಏನು ಮಾಡಬೇಕು ಎನ್ನುವುದು ಗೊತ್ತಿದೆ. ಅದೆಲ್ಲವನ್ನು ಮಾಡುತ್ತೇನೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಸಾರಿಗೆ ಸಚಿವ ಬಿ.ಶ್ರೀರಾಮುಲು ಮಾತನಾಡುತ್ತಾ, ವಿಧಾಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಸಂವಿಧಾನಾತ್ಮಕವಾಗಿ ಅತ್ಯಂತ ಎತ್ತರದ ಸ್ಥಾನದಲ್ಲಿ ಇದ್ದಾರೆ. ಇಂದು ಪ್ರಪಂಚ ಕೆಟ್ಟು ಹೋಗಿದೆ. ಒಳ್ಳೆಯವರಿಗೆ ಕಾಲವಿಲ್ಲ. ಇಂದಿನ ಪ್ರಪಂಚದಲ್ಲಿ ಇವರಂತ ಒಳ್ಳೆಯ ಜನರು ಸಿಗುವುದಿಲ್ಲ. ಇವರನ್ನು ಕಳೆದುಕೊಳ್ಳಬೇಡಿ. ಇಂದು ಸ್ವಕ್ಷೇತ್ರದಲ್ಲಿ ಜೋಶ್‍ನಿಂದ ಮಾತಾಡಿದ್ದಾರೆ. ಆದರೆ ಆರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ ಎಂದರೆ ಸುಲಭವಲ್ಲ. ಅವರು ಹೇಳಿರುವ, ಸೂಚಿಸಿದ ಕೆಲಸ ಕಾರ್ಯವನ್ನು ಮಾಡುವಂತೆ ಮುಖ್ಯಮಂತ್ರಿಗಳು ಎಲ್ಲಾ ಸಚಿವರಿಗೆ ಸೂಚಿಸಿದ್ದಾರೆ. ವಿಶ್ವೇಶ್ವರರನ್ನು ಕಿತ್ತೂರು ಕರ್ನಾಟಕದ ಗಾಂಧಿ ಎಂದು ಹೇಳಬಹುದು ಎಂದು ವಿಶ್ವೇಶ್ವರ ಹೆಗಡೆ ಕಾಗೇರಿಯವರ ಗುಣಗಾನ ಮಾಡಿದರು.
ಡಿಪೋ ವ್ಯವಸ್ಥಾಪಕ ಸರ್ವೇಶ್ ನಾಯ್ಕ ಸ್ವಾಗತಿಸಿದರು. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷರಾದ ವಿ.ಎಸ್.ಪಾಟಿಲ್ ಮಾತನಾಡಿದರು. ವೇದಿಕೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಬಸವರಾಜ ಎಸ್ಕಲಗಾರ, ನಿರ್ದೇಶಕ ಅಶೋಕ ಮಳಗಿ, ಸಿದ್ದು ಮಠದ,ಪಟ್ಟಣ ಪಂಚಾಯತ ಅಧ್ಯಕ್ಷೆ ಚಂದ್ರಕಲಾ ಸುರೇಶ ನಾಯ್ಕ, ಸ್ಥಳೀಯ ವೈದ್ಯರಾದ ಡಾ.ಕೆ.ಶ್ರೀಧರ ವೈದ್ಯ, ಸಾರಿಗೆ ಇಲಾಖೆಯ ವಿವಿಧ ಸ್ತರದ ಅಧಿಕಾರಿಗಳು ಉಪಸ್ಥಿತರಿದ್ದರು.
ಕೋಟ್:
ಪಟ್ಟಣದಲ್ಲಿರು ಹಳೆ ಬಸ್ ನಿಲ್ದಾಣದ ಸ್ಥಳದಲ್ಲಿ ಸಾರ್ವಜನಿಕ ಬಳಕೆಯಾಗುವಂತೆ ವಾಣೀಜ್ಯ ಸಂಕಿರ್ಣ ನಿರ್ಮಾಣ ಮಾಡಿ. ಇಲ್ಲ ಅದನ್ನು ನಮಗೆ ಬಿಟ್ಟುಕೊಟ್ಟರೆ ಅಗತ್ಯ ಬಳಕೆಗೆ ಬಳಸಿಕೊಳ್ಳುತ್ತೇವೆ.–ವಿಶ್ವೇಶ್ವರ ಹೆಗಡೆ ಕಾಗೇರಿ, ಸ್ಪೀಕರ್
ಹಳೆ ಬಸ್ ನಿಲ್ದಾಣದಲ್ಲಿ ಸಂಕೀರ್ಣ ನಿರ್ಮಾಣಕ್ಕೆ ಬೇಕಾಗುವ ಅಗತ್ಯವಾದ ಅನುದಾನವನ್ನು ಪ್ರಸ್ತಾವನೆ ಪಡೆದ ತಕ್ಷಣ ಬಿಡುಗಡೆ ಮಾಡುತ್ತೇನೆ. ಡೀಪೋ ನಿರ್ಮಾಣಕ್ಕೆ ಬೇಕಾಗಿರುವ ಹಣವನ್ನು ಮಂಜೂರಿ ಮಾಡುತ್ತೇನೆ.– ಬಿ.ಶ್ರೀರಾಮುಲು, ಸಾರಿಗೆ ಸಚಿವ