ಸಿದ್ದಾಪುರ: ಸಿದ್ದಾಪುರ-ಕುಮಟಾ ಮುಖ್ಯ ರಸ್ತೆಯಿಂದ ಭಾನ್ಕುಳಿ ಶ್ರೀ ರಾಮದೇವಮಠ- ಗೋಸ್ವರ್ಗ ಸಂಪರ್ಕದ ಕಾಂಕ್ರೀಟ್ ರಸ್ತೆಯನ್ನು ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಉದ್ಘಾಟಿಸಿದರು.ನಂತರ ಗೋಸ್ವರ್ಗದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿ ರಾಮಚಂದ್ರಾಪುರ ಮಠಾಧೀಶ ರಾಘವೇಶ್ವರ ಭಾರತೀ ಶ್ರೀಗಳು ದೇಶೀಯ ಗೋ ತಳಿಗಳ ಸಂರಕ್ಷಣೆಗಾಗಿ ದೇಶ ಮಟ್ಟದಲ್ಲಿ ಕೆಲಸ ಮಾಡುತ್ತಿದ್ದಾರೆ. ಭಾನ್ಕುಳಿಯಲ್ಲಿ ಗೋಸ್ವರ್ಗ ನಿರ್ಮಿಸುವ ಮೂಲಕ ಸಹಸ್ರಗೋವುಗಳ ಸ್ವಚ್ಛಂದ ಸಾಮ್ರಾಜ್ಯ ನಿರ್ಮಾಣ ಕಾರ್ಯ ಅವರಿಂದ ನಡೆದಿದ್ದು, ಇಂದು ದೇಶ- ವಿದೇಶಗಳಿಂದ ಜನರು ಇಲ್ಲಿಗೆ ಆಗಮಿಸಿ ಗೋವನ್ನು ಸಾಕುವಲ್ಲಿ ಪ್ರೇರೇಪಣೆ ಹೊಂದುತ್ತಿದ್ದಾರೆ ಎಂದು ಹೇಳಿದರು.
ಗೋಕರ್ಣದಲ್ಲಿ ಗುರುಕುಲ ಮಾದರಿಯ ವಿಶ್ವವಿದ್ಯಾಲಯ ಪ್ರಾರಂಭಿಸಿರುವ ಶ್ರೀಗಳು ಶಂಕರ ಪಂಚಮಿಯಲ್ಲಿ ಸಾಧಕರನ್ನು, ಹಿರಿಯರನ್ನು ಗೌರವಿಸುತ್ತಾ ಧಾರ್ಮಿಕ ಕಾರ್ಯಗಳನ್ನು ನಡೆಸುವ ಮೂಲಕ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಶಂಕರರ ಪರಂಪರೆಯನ್ನು ಮುನ್ನಡೆಸಿಕೊಂಡುಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಈ ತಾಣಕ್ಕೆ ಅತ್ಯಗತ್ಯವಾಗಿದ್ದ ರಸ್ತೆಯನ್ನು ನಿರ್ಮಿಸಲಾಗಿದೆ ಎಂದು ಹೇಳಿದರು.
ಸಭೆಯ ದಿವ್ಯ ಸಾನಿಧ್ಯ ವಹಿಸಿದ್ದ ರಾಮಚಂದ್ರಾಪುರಮಠ ಮಹಾಸಂಸ್ಥಾನದ ರಾಘವೇಶ್ವರ ಭಾರತೀ ಶ್ರೀ ಆಶೀರ್ವಚನ ನೀಡಿ, ಸಮಾಜವನ್ನು ಮುನ್ನಡೆಸಲು ಗುರು-ಪ್ರಭುಶಕ್ತಿ ಅಗತ್ಯ. ಪ್ರಭುಶಕ್ತಿ ಬಹಿರಂಗದಲ್ಲಿ ಕಾರ್ಯ ಮಾಡಿದರೆ ಗುರು ಅಂತರಂಗದಲ್ಲಿ ದಾರಿ ತೋರುತ್ತಾನೆ. ಗುರು ಗೋಸ್ವರ್ಗ ನಿರ್ಮಿಸಿದರೆ ಅದನ್ನು ಸಂಪರ್ಕಿಸುವ ಮಾರ್ಗವನ್ನು ಪ್ರಭುಗಳು ಮಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ವಿಧಾನಸಭಾ ಅಧ್ಯಕ್ಷರು ತಾವೇ ಮುಂದೆ ನಿಂತು ಆ ಸತ್ಕಾರ್ಯವನ್ನು ನೆರವೇರಿಸಿದ್ದಾರೆ. ಹೆಚ್ಚಿನ ರಾಜಕಾರಣಿಗಳಲ್ಲಿ ಹೊರಗೆ ಒಂದು ಮುಖ ಒಳಗೊಂದು ಮುಖ ಕಂಡುಬರುತ್ತದೆ. ಆದರೆ ಕಾಗೇರಿಯವರು ಹೊರ ಒಳಗೆ ಒಂದೇ ಮುಖವನ್ನು ಹೊಂದಿದ್ದು ಸ್ವಾಮಿ ವಿವೇಕಾನಂದರ ರೀತಿಯ ವ್ಯಕ್ತಿತ್ವ ಹೊಂದಿದ್ದಾರೆ. ಜನನಾಯಕರಾದವರು ಆಧ್ಯಾತ್ಮಿಕ ಶಕ್ತಿ ಬೆಳೆಸಿಕೊಳ್ಳದಿದ್ದಲ್ಲಿ ನೀರ ಮೇಲಿನ ಗುಳ್ಳೆಯಂತಾಗುತ್ತಾರೆ. ಆಧ್ಯಾತ್ಮಿಕ ತಳಹದಿಯಲ್ಲಿ ಬದುಕುತ್ತಿರುವ ವಿಶ್ವೇಶ್ವರ ಹೆಗಡೆಯವರು ಪರಮಸತ್ಯ, ಪರಮಾನಂದ ಮಾರ್ಗದ ತುತ್ತ ತುದಿ ಕಾಣುವಂತಾಗಲಿ, ಅವರಿಂದ ಮತ್ತಷ್ಟು ಸತ್ಕಾರ್ಯಗಳು ನಡೆಯುವಂತಾಗಲಿ, ಆದಿಗುರು ಶಂಕರರ ಆಶೀರ್ವಾದ ಸಕಲರಿಗೂ ದೊರೆತು ಶ್ರೇಯಸ್ಸು ಉಂಟಾಗಲಿ ಎಂದು ಹರಸಿದರು.
ಕರ್ನಾಟಕ ರಾಜ್ಯ ಗ್ರಾಮೀಣ ಅಭಿವೃದ್ಧಿ ವಿಕೇಂದ್ರೀಕರಣ ಸಮಿತಿಯ ಪ್ರಮೋದ ಹೆಗಡೆ ಯಲ್ಲಾಪುರ, ಹವ್ಯಕ ಮಹಾಮಂಡಲ ಅಧ್ಯಕ್ಷ ಆರ್.ಎಸ್.ಹೆಗಡೆ ಹರಗಿ, ನಿರ್ಮಿತಿ ಪರಿಷತ್ತಿನ ಉಪಾಧ್ಯಕ್ಷ ಆರ್.ಜಿ.ಭಟ್ಟ, ಅಧಿಕಾರಿಗಳಾದ ವೈ.ಎಚ್.ಇದ್ದಲಗಿ, ಮೌನೇಶ ಬಡಿಗೇರ, ವಿಜಯಕುಮಾರ, ಗುತ್ತಿಗೆದಾರ ಗಣೇಶ ನಾಯ್ಕ, ವಿಧಾನಸಭಾಧ್ಯಕ್ಷರ ಆಪ್ತಸಹಾಯಕ ಕಲ್ಲಪ್ಪ ಮಳಗ್ಯಾನವರ ಉಪಸ್ಥಿತರಿದ್ದು ಶ್ರೀ ರಾಘವೇಶ್ವರಭಾರತೀ ಶ್ರೀಗಳವರಿಂದ ಆಶೀರ್ವಾದ ಪಡೆದರು. ಸಿದ್ದಾಪುರ ಮಂಡಲ ಅಧ್ಯಕ್ಷ ಮಹೇಶ ಭಟ್ಟ ಚಟ್ನಳ್ಳಿ ನಿರ್ವಹಿಸಿ, ವಂದಿಸಿದರು.
ಕೋಟ್…
ಗೋಶಾಲೆಯನ್ನು ಸರಕಾರವೇ ನಡೆಸುವ ಮೂಲಕ ಗೋವನ್ನು ಸಂರಕ್ಷಿಸಬೇಕಿತ್ತು. ಆ ಕಾರ್ಯವನ್ನು ಮಠ ಮಂದಿರಗಳು ಮಾಡುತ್ತಿವೆ. ಗೋಸ್ವರ್ಗದಂತಹ ಕೇಂದ್ರಗಳು ಇದ್ದಲ್ಲಿ ಗೋಹತ್ಯೆ ಕಡಿಮೆಯಾಗುತ್ತಿದೆ. ಭಾನ್ಕುಳಿ ಗೋಸ್ವರ್ಗದಿಂದ ಪ್ರೇರಣೆ ಪಡೆದು ಅನೇಕ ಗೋಶಾಲೆಗಳು ತಲೆಯೆತ್ತಿವೆ. ಮನೆಮನೆಗಳಲ್ಲೂ ಗೋವನ್ನು ಸಾಕಲು ಜನರು ಮುಂದಾಗುತ್ತಿದ್ದಾರೆ.–ರಾಘವೇಶ್ವರ ಭಾರತೀ, ರಾಮಚಂದ್ರಾಪುರ ಮಠಾಧೀಶ
ನಾವು ನಿತ್ಯ ಜೀವನದ ಅಗತ್ಯತೆಯನ್ನಷ್ಟೇ ಯೋಚಿಸದೇ ಸೃಷ್ಟಿಯ ಸತ್ಯತೆ ಅರಿಯಲು ಮುಂದಾಗಬೇಕು. ವೇದ ಉಪನಿಷತ್ತುಗಳಲ್ಲಿಯ ಜ್ಞಾನ ಅರಿಯಬೇಕು. ಆಧ್ಯಾತ್ಮಿಕ ವಿಚಾರ ಅರಿತು ಆತ್ಮೋದ್ಧಾರ ಮಾಡಿಕೊಳ್ಳಬೇಕು. ಶಂಕರರ ತತ್ವದ ಅರಿವು ಮೂಡಿಸಿಕೊಂಡು ಆ ಜ್ಞಾನದ ಬೆಳಕನ್ನು ಜಗತ್ತಿಗೇ ನೀಡಬೇಕು.–ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಸಭಾಧ್ಯಕ್ಷ