ಅಂಕೋಲಾ: ಕರ್ನಾಟಕ ಜಾನಪದ ಪರಿಷತ್ ಕರಾವಳಿ ವಿಭಾಗದಿಂದ ನೀಡಲಾಗುವ ಪ್ರಶಸ್ತಿ ಪುರಸ್ಕಾರಕ್ಕೆ ಭಾಜನರಾಗಿರುವ ನಾಟಿ ವೈದ್ಯೆ ಶಾಲಿನಿ ಗೌಡ ಅವರಿಗೆ ಹಾರವಾಡ ಗ್ರಾಮ ಪಂಚಾಯತಿ ಸದಸ್ಯ ಹಾಗೂ ಊರ ನಾಗರಿಕರು ಸನ್ಮಾನಿಸಿ ಗೌರವಿಸಿದರು.
ನಾಟಿ ಔಷಧಿ ನೀಡುವ ಮೂಲಕ ಸಾಕಷ್ಟು ಪ್ರಸಿದ್ಧಿ ಪಡೆದಿರುವ ಹಾರವಾಡದ ಶಾಲಿನಿ ಗೌಡ ಅವರಿಗೆ ಇತ್ತೀಚೆಗೆ ಉಡುಪಿಯಲ್ಲಿ ನಡೆದ ಎರಡನೇ ವರ್ಷದ ರಾಜ್ಯ ಮಟ್ಟದ ಜಲ ಜಾನಪದೋತ್ಸವದಲ್ಲಿ ನಾಟಿ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಶಾಲಿನಿ ಗೌಡ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಈ ಹಿನ್ನಲೆಯಲ್ಲಿ ಹಾರವಾಡ ಗ್ರಾಮ ಪಂಚಾಯತಿ ಸದಸ್ಯ ಸುಭಾಸ್ ನಾಯ್ಕ ಹಾಗೂ ಗ್ರಾಮಸ್ಥರು ಪ್ರಶಸ್ತಿ ಪುರಸ್ಕೃತೆ ಶಾಲಿನಿ ಗೌಡ ಅವರ ಮನೆಗೆ ತೆರಳಿ ಶಾಲು ಹೊದಿಸಿ ಸನ್ಮಾಸಿ ಗೌರವಿಸಿದರು. ಈ ವೇಳೆ ಮಾತನಾಡಿದ ಸುಭಾಸ್ ನಾಯ್ಕ, ನಮ್ಮೂರಿನ ನಾಟಿ ವೈದ್ಯೆ ಆಗಿರುವ ಶಾಲಿನಿ ಗೌಡ ಅವರಿಗೆ ಇದೀಗ ಪ್ರಶಸ್ತಿ ಸಿಕ್ಕಿರುವುದು ಖುಷಿ ತಂದಿದೆ. ಅವರು ತಮ್ಮ ನಾಟಿ ವೈದ್ಯ ಕಲೆಯಿಂದ ಅದೆಷ್ಟೋ ಜನರು ಗುಣಮುಖರಾಗುವಂತೆ ಮಾಡುವ ಮೂಲಕ ಅವರ ಜೀವ ಉಳಿಸಿದ್ದಾರೆ. ಆದರೆ ಇಂದು ಶಾಲಿನಿ ಗೌಡ ಅವರನ್ನ ಕನ್ನಡ ಜಾನಪದ ಪರಿಷತ್ತು ಗುರುತಿಸಿ ಪ್ರಶಸ್ತಿ ನೀಡಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ. ಶಾಲಿನಿ ಗೌಡ ಅವರು ಈ ಮೂಲಕ ಮುಂದಿನ ದಿನದಲ್ಲಿ ಇನ್ನಷ್ಟು ಪ್ರಶಸ್ತಿ ಸ್ವೀಕರಿಸುವಂತಾಗಲಿ ಎಂದು ಹಾರೈಸಿದರು.