ಶಿರಸಿ : ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ವತಿಯಿಂದ ನಮ್ಮೂರು ನಮ್ಮ ಕೆರೆ ಯೋಜನೆ ಅಡಿಯಲ್ಲಿ ತಾಲೂಕಿನ ಕಲ್ಲಾಪುರ ಕೆರೆ ಅಭಿವೃದ್ಧಿಗೆ ಮುನ್ನುಡಿ ಬರೆಯಲಾಗಿದೆ.
ಕಳೆದ ಹಲವು ವರ್ಷಗಳಿಂದ ಹೂಳು ತುಂಬಿ ಯಾರ ಉಪಯೋಗಕ್ಕೂ ಬಾರದಂತಿದ್ದ ಕುಳವೆ ಗ್ರಾಮ ಪಂಚಾಯತ ವ್ಯಾಪ್ತಿಯ ಕಲ್ಲಾಪುರ ಕೆರೆಯನ್ನು ಧರ್ಮಸ್ಥಳ ಸಂಘದ ಸಹಕಾರದೊಂದಿಗೆ ಗ್ರಾಮಸ್ಥರು ಅಭಿವೃದ್ಧಿಗೊಳಿಸಿದ್ದು, ಗುರವಾರ ಗುದ್ದಲಿ ಪೂಜೆ ನೆರವೇರಿಸಲಾಯಿತು.
ಅಂದಾಜು ೩ ಎಕರೆ ಪ್ರದೇಶ ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ಕೆರೆಗೆ ಸಂಘದಿಂದ ೪.೩೦ ಲಕ್ಷ ರೂ ನೀಡಲಾಗುತ್ತಿದೆ. ಅಲ್ಲಿ ಬರುವ ಹೂಳು ವಿಲೇವಾರಿಯ ಜವಾಬ್ದಾರಿಯನ್ನು ಗ್ರಾಮಸ್ಥರು ಹೊತ್ತಿಕೊಂಡಿದ್ದು, ಮಳೆಗಾಲ ಪೂರ್ವದಲ್ಲಿ ಸಂಪೂರ್ಣ ಅಭಿವೃದ್ಧಿಗೆ ತಯಾರಿ ನಡೆಸಲಾಗಿದೆ.
ಗುರವಾರ ಕಲ್ಲಾಪುರ ಕೆರೆಯಲ್ಲಿ ಉದ್ಯಮಿ ಉಪೇಂದ್ರ ಪೈ, ಧರ್ಮಸ್ಥಳ ಸಂಘದ ನಿರ್ದೇಶಕ ಏ.ಬಾಬು ಸೇರಿ ಗುದ್ದಲಿ ಪೂಜೆ ನೆರವೇರಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಪೈ, ಕಲ್ಲಾಪುರ ಕೆರೆ ಹಾಗೂ ಅದಕ್ಕೆ ತಾಗಿಕೊಂಡಿರುವ ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ ಅಗತ್ಯವಿರುವ ಎಲ್ಲಾ ಸಹಕಾರ ನೀಡುವುದಾಗಿ ಆಶ್ವಾಸನೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕುಳವೆ ಗ್ರಾಮ ಪಂಚಾಯತ ಅಧ್ಯಕ್ಷ ವಿನಯ ಭಟ್ ಮಾತನಾಡಿ, ಕೆರೆ ಅಭಿವೃದ್ಧಿಯ ಕುರಿತಾಗಿ ಗ್ರಾಮ ಪಂಚಾಯತ ಸದಾ ಸಹಕಾರ ನೀಡಲಿದೆ. ಸಾಕಷ್ಟು ಜನರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಅಂತಿಮವಾಗಿ ಗ್ರಾಮಸ್ಥರಿಗೆ ಅನುಕೂಲ ಆಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಕೆರೆ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ನಾಗೇಂದ್ರ ನಾಯ್ಕ, ಕುಳವೆ ಗ್ರಾಪಂ ಸದಸ್ಯರಾದ ಶ್ರೀನಾಥ ಶೆಟ್ಟಿ, ಸಂದೇಶ ಭಟ್ ಬೆಳಖಂಡ, ಉಂಚಳ್ಳಿ ಗ್ರಾಪಂ ಸದಸ್ಯ ರವಿತೇಜ ರೆಡ್ಡಿ ಮುಂತಾದವರು ಇದ್ದರು.