ಕಾರವಾರ: ಇಲ್ಲಿನ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳ ಘಟಿಕೋತ್ಸವ-ಆದ್ಯಂತ್ಯ ಸಮಾರಂಭವು ಅದ್ಧೂರಿಯಾಗಿ ಕಿಮ್ಸ್ ನ ಸಭಾಂಗಣದಲ್ಲಿ ನಡೆಯಿತು.
ಘಟಿಕೋತ್ಸವದ ಸಭಾ ಕಾರ್ಯಕ್ರಮಕ್ಕೂ ಮುನ್ನ ಡೊಳ್ಳು, ಭಜಂತ್ರಿ ಮೂಲಕ ಗಣ್ಯರನ್ನು ಸ್ವಾಗತಿಸಿಕೊಳ್ಳಲಾಯಿತು. ವಿದ್ಯಾರ್ಥಿಗಳು ಹಾಗೂ ಅತಿಥಿ ಗಣ್ಯರು ಘಟಿಕೋತ್ಸವದ ಧಿರಿಸಿನಲ್ಲಿ ಮಿಂಚಿದರು.
ಕಾರ್ಯಕ್ರಮವನ್ನ ದೀಪ ಬೆಳಗಿಸಿ ಉದ್ಘಾಟಿಸಿದ ಬೆಂಗಳೂರು ನಿಮ್ಹಾನ್ಸ್ ನ ವಿಶ್ರಾಂತ ನಿರ್ದೇಶಕ ಪದ್ಮಶ್ರೀ ಡಾ.ಬಿ.ಎನ್.ಗಂಗಾಧರ್, ರೋಗಿಯೇ ವೈದ್ಯ ವೃತ್ತಿಗೆ ಮುಖ್ಯ ಶಿಕ್ಷಕ, ಅವರಿದ್ದಾಗ ಮಾತ್ರ ಉತ್ತಮ ಶಿಕ್ಷಣ ಸಿಗುತ್ತದೆ. ವೃತ್ತಿ ಜೀವನದಲ್ಲಿ ಅಂಥವರ ಸೇವೆ ಮಾಡುವುದು ನಮ್ಮೆಲ್ಲರ ಹೊಣೆಗಾರಿಕೆ ಮತ್ತು ಋಣ. ವಿದ್ಯಾರ್ಥಿಗಳು ವೈದ್ಯರಾಗುವುದು ಹೊಸ ಪಟ್ಟ ಎನ್ನುವುದಕ್ಕಿಂತ ಹೊಸ ಜವಾಬ್ದಾರಿ ಎನ್ನುವುದು ಸೂಕ್ತ ಎಂದರು.
ಅತಿಥಿಗಳ ಪರಿಚಯದಲ್ಲಿ ಮಾತನಾಡಿದ ಕಿಮ್ಸ್ ನಿರ್ದೇಶಕ ಡಾ.ಗಜಾನನ ನಾಯಕ, ಕೋವಿಡ್ ಸಮಯದಲ್ಲಿ ಎಂಬಿಬಿಎಸ್ ವಿದ್ಯಾರ್ಥಿಗಳು ನಿರ್ವಹಿಸಿದ ಕರ್ತವ್ಯ ನೆನೆದು, ಶ್ಲಾಘಿಸಿದರು. ಕೋವಿಡ್ ನಿಮ್ಮ ಸೇವೆಗೆ ಸಿಕ್ಕ ಅವಕಾಶ. ಅದನ್ನು ನಮ್ಮ ವಿದ್ಯಾರ್ಥಿಗಳು ಉತ್ತಮವಾಗಿ ನಿರ್ವಹಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಘಟಿಕೋತ್ಸವದಲ್ಲಿ 143 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ವೈದ್ಯ ಪದವಿ ಪಡೆದ ವಿದ್ಯಾರ್ಥಿಗಳು ಹಬ್ಬದ ಸಂಭ್ರಮವನ್ನು ಆಚರಿಸಿದರು. ಇದೇ ವೇಳೆ ಎಂಬಿಬಿಎಸ್‍ನಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪದಕ ವಿತರಣೆ ಮಾಡಿ ಗೌರವ ಸಲ್ಲಿಸಲಾಯಿತು.
ಹುಬ್ಬಳ್ಳಿ ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ, ಐಎನ್‍ಎಚ್‍ಎಸ್ ಪತಂಜಲಿಯ ಕಮಾಂಡಿಂಗ್ ಆಫೀಸರ್ ಸರ್ಜನ್ ಕ್ಯಾಪ್ಟನ್ ಜಸ್ಕಿರಣ್ ಸಿಂಗ್ ರಾಂಧವ ಸೇರಿದಂತೆ ಕಿಮ್ಸ್ ನ ಉಪನ್ಯಾಸಕ ಹಾಗೂ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಹಾಗೂ ಪಾಲಕರು ಹಾಜರಿದ್ದರು.
ಕೋಟ್…
ನಾವು ಮಾಡುವ ಕೆಲಸದಲ್ಲಿ ಶ್ರದ್ಧೆ ಹಾಗೂ ಶ್ರಮ ಇರಬೇಕು. ಹಾಗಿದ್ದಾಗ ಮಾತ್ರ ವರತ್ತಿ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯ.-· ಡಾ.ವಿಶಾಲ್‍ರಾಜ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ
ವಿದ್ಯಾರ್ಥಿಗಳು ಸಾಧಿಸಿದ ಯಶಸ್ಸಿನ ನಂತರ ನಿಮ್ಮ ನಿಜವಾದ ಕೆಲಸ ಪ್ರಾರಂಭವಾಗುತ್ತದೆ. ನೀವು ಗಳಿಸುವ ಹಣ ಪರೋಕ್ಷವಾಗಿ ಒಬ್ಬ ಬಡವ ಕೊಟ್ಟಿರುತ್ತಾನೆ. ಹೀಗಾಗಿ ದಿನಕ್ಕೆ ಒಂದು ತಾಸು ಬಡ ರೋಗಿಗಳ ಸೇವೆಯನ್ನು ಮಾಡಲು ಮೀಸಲಿಡಿ.–· ಡಾ.ವಿ.ಎನ್.ಬಿರಾದರ್, ಹುಬ್ಬಳ್ಳಿ ಕಿಮ್ಸ್ ವಿಶ್ರಾಂತ ನಿರ್ದೇಶಕ
ಪದವಿ ಪಡೆದ ನಂತರ ಹೇಗೆ ನಿಮ್ಮ ಕರ್ತವ್ಯ ನಿರ್ವಹಿಸುತ್ತೀರಿ ಎನ್ನುವುದು ಮುಖ್ಯ. ನೀವು ಮಾಡುವ ಕೆಲಸಗಳು ನಿಮ್ಮ ವ್ಯಕ್ತಿತ್ವ ಮಾತ್ರವಲ್ಲದೇ ನಿಮ್ಮ ಶಿಕ್ಷಕರು ಹಾಗೂ ಕಾಲೇಜುನ್ನು ಪ್ರತಿನಿಧಿಸುತ್ತದೆ. ಈ ನಿಟ್ಟಿನಲ್ಲಿ ನೀವು ಕಲಿತ ಸಂಸ್ಥೆಯ ಗೌರವವನ್ನು ಹೆಚ್ಚಿಸಿ.–ಮುಲ್ಲೈ ಮುಗಿಲನ್, ಜಿಲ್ಲಾಧಿಕಾರಿ