ಕಾರವಾರ: ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿಯೇ ಅತಿ ಹೆಚ್ಚು ಪ್ರವಾಸಿ ತಾಣಗಳನ್ನ ಹೊಂದಿರುವ ಜಿಲ್ಲೆ ಎನ್ನುವ ಹೆಗ್ಗಳಿಕೆಯನ್ನ ಪಡೆದಿದೆ. ಆದರೆ ಜಿಲ್ಲೆಯ ಪ್ರವಾಸೋದ್ಯಮ ಬೆಳವಣಿಗೆಗೆ ಕಾರ್ಯನಿರ್ವಹಿಸುವ ಪ್ರವಾಸೋದ್ಯಮ ಇಲಾಖೆಗೆ ಕಳೆದ ಏಳು ವರ್ಷದಿಂದ ಇಲಾಖೆಯಿಂದ ಅಧಿಕಾರಿಯನ್ನೇ ನೇಮಕ ಮಾಡದೇ ಸರ್ಕಾರ ನಿರ್ಲಕ್ಷ ತೋರಿದೆ ಎನ್ನುವ ಆರೋಪ ಕೇಳಿ ಬಂದಿದೆ.
ವಿಭಿನ್ನ ಪ್ರಾಕೃತಿಕ ಸೌಂದರ್ಯವನ್ನ ಹೊಂದಿರುವ ಜಿಲ್ಲೆಯಲ್ಲಿ ಒಂದು ಕಡೆ ಕಡಲ ತೀರ, ಮತ್ತೊಂದು ಕಡೆ ಅರಣ್ಯ ಪ್ರದೇಶಗಳು, ಇದರ ನಡುವೆ ಜಲಪಾತ, ಅನೇಕ ಪ್ರಸಿದ್ದ ದೇವಾಲಯ ಹೀಗೆ ಹತ್ತು ಹಲವು ಪ್ರವಾಸಿ ತಾಣಗಳಿದ್ದು ದೇಶ ವಿದೇಶಗಳಿಂದ ಪ್ರವಾಸಿಗರು ಜಿಲ್ಲೆಯತ್ತ ಆಗಮಿಸುತ್ತಾರೆ. ಇನ್ನು ಜಿಲ್ಲೆಯಲ್ಲಿನ ಪ್ರವಾಸಿ ತಾಣಗಳ ಅಭಿವೃದ್ಧಿ ಮಾಡುವ ಜವಾಬ್ದಾರಿ ಪ್ರವಾಸೋದ್ಯಮ ಇಲಾಖೆಗೆ ಇರುತ್ತದೆ.
ಆದರೆ ಜಿಲ್ಲೆಯಲ್ಲಿ ಕಳೆದ ಏಳು ವರ್ಷದಿಂದ ಪ್ರವಾಸೋದ್ಯಮ ಇಲಾಖೆಯಿಂದ ಅಧಿಕಾರಿಯನ್ನೇ ನೇಮಕ ಮಾಡಿಲ್ಲ. 2010ರಿಂದ 2012 ರವರೆಗೆ ಇಲಾಖೆಯ ಜಿತೇಂದ್ರ ನಾಥ್ ಎನ್ನುವ ಅಧಿಕಾರಿಯನ್ನ ನೇಮಕ ಮಾಡಲಾಗಿತ್ತು. ಇದಾದ ನಂತರ ಅವರು ವರ್ಗಾವಣೆಯಾಗಿದ್ದು, ಮೋತಿಲಾಲ್ ಎನ್ನುವ ಅಧಿಕಾರಿ ಆಗಮಿಸಿದ್ದರು. ಅಂದು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ದೇಶಪಾಂಡೆಯವರು ಪ್ರವಾಸೋದ್ಯಮ ಸಚಿವರು ಸಹ ಆಗಿದ್ದು ಅವರ ಕಾಲದಲ್ಲಿ 2015ರವರೆಗೆ ಇಲಾಖೆಯ ಅಧಿಕಾರಿಯಾಗಿ ಮೋತಿಲಾಲ್ ಕಾರ್ಯನಿರ್ವಹಿಸಿದ್ದು ನಂತರ ವರ್ಗಾವಣೆಯಾಗಿದ್ದರು.
ಇದಾದ ನಂತರದಿಂದ ಇಲಾಖೆಯಲ್ಲಿ ಈ ವರೆಗೆ ಕಾರವಾರಕ್ಕೆ ಅಧಿಕಾರಿಯನ್ನೇ ನೇಮಕ ಮಾಡಿಲ್ಲ. ಜಿಲ್ಲಾಧಿಕಾರಿಗಳು ಬೇರೆ ಬೇರೆ ಇಲಾಖೆಯ ಅಧಿಕಾರಿಗಳನ್ನ ಪ್ರಭಾರರನ್ನಾಗಿ ನೇಮಕ ಮಾಡುತ್ತಿದ್ದು ಇಲಾಖೆಯ ಮೂಲದ ಅಧಿರಾರಿಗಳಿದ್ದರೇ ಮಾತ್ರ ಇಲಾಖೆಯ ವಿಚಾರಗಳು ತಿಳಿಯಲಿದೆ. ಜೊತೆಗೆ ಪ್ರವಾಸೋದ್ಯಮ ಅಭಿವೃದ್ದಿಗೆ ಹೆಚ್ಚು ಒತ್ತು ಕೊಡುತ್ತಾರೆ. ಬೇರೆ ಇಲಾಖೆಯಿಂದ ಬಂದ ಅಧಿಕಾರಿಗಳು ನೆಪಮಾತ್ರಕ್ಕೆ ಬಂದು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದ್ದು ಇದರಿಂದ ಜಿಲ್ಲೆಯ ಪ್ರವಾಸೋದ್ಯಮ ಬೆಳವಣಿಗೆ ಮೇಲೆ ಹೊಡೆತ ಬೀಳುತ್ತಿದೆ ಎನ್ನುವುದು ಸಾರ್ವಜನಿಕರ ಆರೋಪ.
2015ರಲ್ಲಿ ಮೋತಿಲಾಲ್ ಪ್ರವಾಸೋದ್ಯಮ ಇಲಾಖೆಯಿಂದ ವರ್ಗಾವಣೆಯಾದ ನಂತರ ಇಲಾಖೆಯ ಜವಬ್ದಾರಿಯನ್ನ ಕೈಗಾರಿಕಾ ಇಲಾಖೆಯ ಅಂದಿನ ಉಪನಿರ್ದೇಶಕರಾಗಿದ್ದ ಬೇಕಲ್ ಎನ್ನುವವರಿಗೆ ನೀಡಲಾಗಿತ್ತು. ಇನ್ನು ಅಂದಿನ ಸರ್ಕಾರದಲ್ಲಿ ಸಚಿವರಾಗಿದ್ದ ದೇಶಪಾಂಡೆ ಇಲಾಖೆಗೆ ಅಧಿಕಾರಿಗಳನ್ನ ನೇಮಿಸುವ ಪ್ರಯತ್ನ ನಡೆಸಿದ್ದರು ಇದು ಸಾಧ್ಯವಾಗಿರಲಿಲ್ಲ. ಅಂದಿನಿಂದ ಇಂದಿನ ವರೆಗೆ ಇಲಾಖೆಗೆ ಅಧಿಕಾರಿಯನ್ನೇ ನೇಮಕ ಮಾಡಿಲ್ಲ. ಕೇವಲ ಬೇರೆ ಇಲಾಖೆಯ ಪ್ರಭಾರಿ ಅಧಿಕಾರಿಗಳೇ ಇಲಾಖೆಯ ಜವಬ್ದಾರಿ ಹೊತ್ತಿದ್ದು ಅತಿ ಹೆಚ್ಚು ಪ್ರವಾಸಿ ತಾಣವಿರುವ ಜಿಲ್ಲೆಯಲ್ಲಿಯೇ ಪ್ರವಾಸೋದ್ಯಮ ಅಧಿಕಾರಿ ಇಲ್ಲದಿದ್ದರೇ ಪ್ರವಾಸೋದ್ಯಮ ಅಭಿವೃದ್ಧಿ ಹೇಗೆ ಎನ್ನುವುದು ಸಾರ್ವಜನಿಕರ ಪ್ರಶ್ನೆ.
ಸದ್ಯ ಪ್ರವಾಸೋದ್ಯಮ ಸಚಿವರಾಗಿ ಆನಂದ್ ಸಿಂಗ್ ಇದ್ದು, ಜಿಲ್ಲೆಯ ಪ್ರವಾಸೋದ್ಯಮ ಬೆಳವಣಿಗೆಯ ಬಗ್ಗೆ ಸಚಿವರಾದ ಶಿವರಾಮ್ ಹೆಬ್ಬಾರ್ ಹಾಗೂ ಕೋಟಾ ಶ್ರೀನಿವಾಸ ಪೂಜಾರಿ ಆಸಕ್ತಿ ವಹಿಸಿದ್ದರು. ಸರ್ಕಾರದ ಮಟ್ಟಿಗೆ ಜಿಲ್ಲೆಯ ಪರಿಸ್ಥಿತಿಯ ಬಗ್ಗೆ ತಿಳಿಸಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಇನ್ನಷ್ಟು ಬೆಳವಣಿಗೆಗೆ ಇಲಾಖೆಯಿಂದಲೇ ಅಧಿಕಾರಿಯನ್ನ ನೇಮಕ ಮಾಡಲು ಕ್ರಮ ಕೈಗೊಳ್ಳಬೇಕು ಎನ್ನುವುದು ಸ್ಥಳೀಯರ ಆಗ್ರಹ.
ಹಲವು ಇಲಾಖೆಗಳಿಗೆ ಅಧಿಕಾರಿಗಳಿಲ್ಲ: ಗಡಿ ಜಿಲ್ಲೆಯಾದ ಉತ್ತರ ಕನ್ನಡ ದಲ್ಲಿ ಜಿಲ್ಲಾ ಮಟ್ಟದ ಕಚೇರಿಗಳಲ್ಲಿ ಅಧಿಕಾರಿಗಳೇ ಇಲ್ಲದಂತಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಈ ಹಿಂದೆ ಬಸವರಾಜ್ ಹೂಗಾರ್ ಎನ್ನುವ ಅಧಿಕಾರಿಯಿದ್ದರು. ಅವರ ವರ್ಗಾವಣೆಯಾದ ನಂತರ ಈ ವರೆಗೆ ಅಧಿಕಾರಿಗಳನ್ನೇ ನೇಮಕ ಮಾಡಿಲ್ಲ. ಜಿಲ್ಲಾಡಳಿತ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಬೇರೆ ಬೇರೆ ಇಲಾಖೆಯ ಅಧಿಕಾರಿಗಳಿಗೆ ಪ್ರಭಾರ ಜವಾಬ್ದಾರಿ ನೀಡಲಾಗುತ್ತಿದೆ.
ಇದೇ ರೀತಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೂ ಅಧಿಕಾರಿಗಳಿಲ್ಲ. ಇನ್ನು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರು ಕಾರ್ಯನಿರ್ವಹಿಸುತ್ತಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಸಹ ಅಧಿಕಾರಿ ಇಲ್ಲದಂತಾಗಿದೆ. ಹೀಗೆ ಹಲವು ಇಲಾಖೆಗಳಿಗೆ ಅಧಿಕಾರಿಗಳಿಲ್ಲದಂತಾಗಿದ್ದು ಗಡಿ ಜಿಲ್ಲೆಯಾದ ಉತ್ತರ ಕನ್ನಡದಲ್ಲಿ ಇದು ಅಭಿವೃದ್ದಿಯ ಮೇಲೂ ಪರಿಣಾಮ ಬೀಳಲಿದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.