
ಶಿರಸಿ: ಜಿಲ್ಲಾದ್ಯಂತ ಅಬ್ಬರದ ಮಳೆ ಸುರಿಯುತ್ತಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ ತಾಲೂಕಿನಲ್ಲಿ 24 ಸೆಂ.ಮೀ. ಮಳೆ ಸುರಿದಿದೆ. ನದಿ, ಕೊಳ್ಳಗಳು ಭರ್ತಿಯಾಗಿದ್ದು ಹಲವೆಡೆ ತೋಟ, ಗದ್ದೆಗಳು ಜಲಾವೃತಗೊಂಡಿವೆ.
ತಾಲೂಕಿನ ಪಟ್ಟಣಹೊಳೆ ಕೆಂಗ್ರೆ ಹೊಳೆ ಭರ್ತಿಯಾಗಿದ್ದು, ಸೇತುವೆ ಮೇಲೆ ತುಂಬಿ ಹರಿಯುತ್ತಿದೆ. ಇದರಿಂದಾಗಿ ಸಂಚಾರ ಸಂಗಿತವಾಗಿದೆ. ಅಲ್ಲದೇ ಮಾದ್ನಕಳ್, ಮಾರಿಗದ್ದೆ, ಸರಕುಳಿ ಸೇತುವೆಗಳ ಮೇಲೆ ನದಿ ಉಕ್ಕಿ ಹರಿಯುತ್ತಿರುವ ಪರಿಣಾಮ ಶಿರಸಿ ಹಾಗೂ ಸಿದ್ದಾಪುರ ತಾಲೂಕುಗಳ ನಡುವಿನ ಸಂಪರ್ಕ ಸ್ಥಗಿತಗೊಂಡಿದೆ.
ಕಕ್ಕಳ್ಳಿ-ವಾನಳ್ಳಿ ನಡುವಿನ ರಸ್ತೆಯಲ್ಲಿ ಗುಡ್ಡ ಕುಸಿತ ಸಂಭವಿಸಿದೆ. ಹಲವೆಡೆ ಮರಗಳು ರಸ್ತೆಗೆ ಉರುಳಿ ಬಿದ್ದಿವೆ. ನೂರಾರು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಗ್ರಾಮೀಣ ಭಾಗದ ಬಹುತೇಕ ಕಡೆಗಳಲ್ಲಿ ವಿದ್ಯುತ್, ದೂರವಾಣಿ ಸಂಪರ್ಕ ಕಡಿತಗೊಂಡಿದೆ.
ಶಿವಳ್ಳಿ ಗ್ರಾಮ ಪಂಚಾಯ್ತಿಯ ಚಿಂಚಳಿಕೆ ಗ್ರಾಮದಲ್ಲಿ ಕೆರೆ ಒಡ್ಡು ಒಡೆದ ಪರಿಣಾಮ 60 ಎಕರೆಗೂ ಹೆಚ್ಚು ಭತ್ತದ ಗದ್ದೆ ಮುಳುಗಡೆಯಾಗಿದೆ. ನಾಟಿಗೆ ಸಿದ್ಧಪಡಿಸಿಟ್ಟುಕೊಂಡಿದ್ದ ಭತ್ತದ ಸಸಿಗಳು ತೇಲಿಹೋಗಿವೆ. ಶಿರಸಿ ನಗರದ ತಗ್ಗು ಪ್ರದೇಶಗಳೆಲ್ಲ ಜಲಾವೃತಗೊಂಡಿವೆ.