ಕಾರವಾರ: ಸರಕಾರದ ಯೋಜನೆಗಳು ಸಾಮಾನ್ಯ ಜನರಿಗೆ, ನಿರುದ್ಯೋಗಿ ಯುವಕ ಯುವತಿಯರಿಗೆ, ಬಡವರಿಗೆ, ಅಶಕ್ತರಿಗೆ ತಲುಪಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ಬುಧವಾರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಉತ್ತರ ಕನ್ನಡ ಜಿಲ್ಲೆ ಹೇರಳ ಜಲಸಂಪನ್ಮೂಲವನ್ನು ಹೊಂದಿದ್ದು ಅದರ ಸದುಪಯೋಗವಾಗಬೇಕು. ಮೀನುಗಾರಿಕೆಗೆ ಪ್ರಾಶಸ್ತ್ಯ ನೀಡಿ ಮೀನು ಉತ್ಪಾದನೆ, ಮಾರಾಟದಲ್ಲಿ ಅಭಿವೃದ್ಧಿ ಸಾಧಿಸಬೇಕು. ಮೀನುಗಾರರಿಗೆ ಸಬ್ಸಿಡಿಯಲ್ಲಿ ಇಂಧನ, ದೋಣಿ ನೀಡುವಂತಹ ಯೋಜನೆ ಹೆಚ್ಚಿನ ಪ್ರಮಾಣದಲ್ಲಿ ಸಾಕಾರವಾಗಬೇಕು. ಮೀನುಗಾರಿಕೆ ಹಿನ್ನೆಲೆ ಹೊಂದಿದ ಕುಟುಂಬದ ಯುವಕರಿಗೆ ತರಬೇತಿ ನೀಡಿ ಸ್ವ ಉದ್ಯೋಗ ಕೈಗೊಳ್ಳಲು ಸಹಾಯ ಮಾಡಬೇಕು. ಮೂಲಭೂತ ಸವಲತ್ತುಗಳಾದ ವಸತಿ, ನೀರು, ಆಹಾರ ಪೂರೈಕೆಯಲ್ಲಿ ಮುತುವರ್ಜಿವಹಿಸಿ ಕಾರ್ಯನಿರ್ವಹಿಸಬೇಕು ಎಂದು ಮೀನುಗಾರಿಕಾ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಯುವಕರಿಗೆ ಕೆರೆ ನಿರ್ವಹಣೆ ಕುರಿತು ತರಬೇತಿ ನೀಡಬೇಕು, ಕೆರೆ ಹೂಳೆತ್ತುವ ಮೂಲಕ ಮೀನುಗಾರರಿಗೆ ಮೀನುಗಾರಿಕೆಯಲ್ಲಿ ಉತ್ಪಾದನೆ ಹೆಚ್ಚುವಂತೆ ಮಾಡಬೇಕು. ಮೀನುಗಾರರಿಗೆ ಕಿಸಾನ್ ಕಾರ್ಡ್ ಮಾಡಿಕೊಡಬೇಕು. ದೋಣಿ ನೀಡುವ ವ್ಯವಸ್ಥೆಯಾಗಬೇಕು. ಕೆರೆ, ಚೆಕ್‍ಡ್ಯಾಮ್, ಜಲಾಶಯಗಳನ್ನು ಬಳಸಿಕೊಂಡು ಮೀನುಗಾರಿಕೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಟೆಂಡರ್ ನೀಡುವ ಮೂಲಕ ಜಲಾಶಯಗಳಲ್ಲಿ ಮೀನು ಉತ್ಪಾದನೆ ಹೆಚ್ಚಾಗುವಂತೆ ನೋಡಿಕೊಳ್ಳಬೇಕೆಂದು ಹಾಗೂ ಇದಕ್ಕೆ ಬೇಕಾದ ಸಂಪನ್ಮೂಲಗಳ ಖರ್ಚುವೆಚ್ಚದ ವರದಿ ತಯಾರಿಸಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗಣಿ ಇಲಾಖೆಗೆ ಸಂಬಂಧಿಸಿದಂತೆ ಕಾನೂನು ಚೌಕಟ್ಟಿನೊಳಗೆ ಆಸಕ್ತ ಜನರಿಗೆ ಮರಳು ತೆಗೆಯುವ ಲೈಸೆನ್ಸ್ ನೀಡಬೇಕು ಆ ಮೂಲಕ ಸರಕಾರದ ಯೋಜನೆಗಳು ಹಾಗೂ ಸಾಮಾನ್ಯ ಜನರ ಕಟ್ಟಡ ಸಂಬಂಧಿತ ಕಾರ್ಯಗಳು ಸುಗಮವಾಗಿ ಪೂರ್ಣಗೊಳ್ಳಲು ಶ್ರಮವಹಿಸಬೇಕು. ಸ್ಥಳೀಯ ಮಟ್ಟದಲ್ಲಿ ಸಿಗುವಂತಹ ಮರಳನ್ನು ನಿಗದಿತ ಶುಲ್ಕ ವಿಧಿಸಿ ಬಳಸಿಕೊಳ್ಳಲು ಅವಕಾಶ ನೀಡಿ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಹಾಗೂ ಮೇ. 11ನೇ ತಾರೀಕು ಸಭೆ ನಡೆಸಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ವಿಮಾನ ನಿಲ್ದಾಣ ಕಾಮಗಾರಿಗೆ ಸಂಬಂಧಿಸಿದಂತೆ ಯೋಜನೆಯಿಂದ ಬಾಧಿತವಾದ ಜನರಿಗೆ ಬೇರೆ ಜಾಗದ ಬೇಡಿಕೆ, ನಿವೇಶನ ನೀಡುವಲ್ಲಿ ನಿಯಾಮಾನುಸಾರ ಸರಿಯಾದ ಪರಿಹಾರ ನೀಡಬೇಕು. ರಸ್ತೆ ಸಂಪರ್ಕಗಳು ಕಡಿತಗೊಳ್ಳುವ ಪ್ರದೇಶದಲ್ಲಿ ಪಥ ಬದಲಾವಣೆ ಮಾಡಬೇಕು. ಅಂತಹ ರಸ್ತೆಗಳ ವಿವರವಾದ ಮಾಹಿತಿ ಪಡೆದು ಪುನಃ ಸಂಪರ್ಕ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದರು. ಪುರಾತತ್ವ, ಪ್ರವಾಸೋದ್ಯಮ, ನಗರಸಭೆ ಹಾಗೂ ಇನ್ನಿತರ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಯ ಕುರಿತು ವರದಿ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಿಯಾಂಗಾ ಎಮ್., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ ಪೆನ್ನೇಕರ್, ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ, ಎಮ್‍ಎಲ್‍ಸಿ ಗಣಪತಿ ಉಳ್ವೇಕರ್, ಡಾ.ನಿತಿನ್ ಪಿಕಳೆ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.