ಹೊನ್ನಾವರ: ಮಾಗೋಡದ ಶರಾವತಿ ಕ್ರೀಡಾ ಹಾಗೂ ಸಾಂಸ್ಕೃತಿಕ ವೇದಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ತಾಯಿ ಶರಾವತಿಗೆ ಆರತಿ ಹಾಗೂ ಸಂಗೀತ ಸಮಾರಾಧನೆ, ಶರಾವತಿ ನಾದ ನಿನಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಾಹಿತಿ ರಾಜು ಹೆಗಡೆ ತಿಳಿಸಿದ್ದಾರೆ.
ಪತ್ರಿಕಾಗೊಷ್ಟಿಯಲ್ಲಿ ಕಾರ್ಯಕ್ರಮದ ಮಾಹಿತಿ ನೀಡಿದ ಅವರು, ಶರಾವತಿ ಎಡದಂಡೆಯ ಮಾಗೋಡಿನ ತಾರಿಬಾಗಿಲಿನ ಶರಾವತಿ ನದಿಯಲ್ಲಿ ನಿರ್ಮಿಸಿದ ರಮಣೀಯ ವೇದಿಕೆಯ ಮೇಲೆ ಮೇ 8ರಂದು ಸಂಜೆ 6ಕ್ಕೆ ವಿಶಿಷ್ಟವಾದ ಸಂಗೀತ ಕಾರ್ಯಕ್ರಮ ಮತ್ತು ದೀಪಾರಾಧನೆ ನಡೆಯಲಿದೆ. ಕಾರ್ಯಕ್ರಮದ ಸಭಾ ಅಧ್ಯಕ್ಷತೆಯನ್ನು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ವಹಿಸಲಿದ್ದು, ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಸುನೀಲ ನಾಯ್ಕ ಶ್ರೀಮಯ ಕಲಾಕೇಂದ್ರದ ಕೆರೆಮನೆ ಶಿವಾನಂದ ಹೆಗಡೆ, ಪ್ರಶಸ್ತಿ ಪುರಸ್ಕೃತ ಚಲನಚಿತ್ರ ನಿರ್ದೇಶಕ ವಿಶಾಲರಾಜ್, ಹಿರಿಯ ಪತ್ರಕರ್ತರಾದ ಜಿ.ಯು.ಭಟ್ ಉಪಸ್ಥಿತಿಯಲ್ಲಿ ನಡೆಯಲಿದೆ ಎಂದರು.
ಗೋಧೂಳಿ ಮುಹೂರ್ತದಲ್ಲಿ, ಶರಾವತಿ ನದಿಗೆ ದೀಪ ಬೆಳಗಿ, ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಸಾರ್ವಜನಿಕರು ಇದೇ ವೇಳೆ ದೀಪ ಬೆಳಗಿ ನಮನ ಸಲ್ಲಿಸುವರು. ನಂತರ ರಾತ್ರಿ 7ಕ್ಕೆ ಗಾಯನ ಕಾರ್ಯಕ್ರಮವನ್ನು ಸಂಕೇತ್ ಭಟ್ ಗದಗ ನಡೆಸಿಕೊಡಲಿದ್ದುಇವರಿಗೆ ಹಾರ್ಮೊನಿಯಂನಲ್ಲಿ ಗೌರೀಶ ಯಾಜಿ ಕೂಜಳ್ಳಿ ,ತಬಲಾದಲ್ಲಿ ಶೇಷಾದ್ರಿ ಅಯ್ಯಂಗಾರ , ಎನ್.ಜಿ. ಹೆಗಡೆ (ಫಕಾವಜ್) ಸಾಥ್ ನೀಡಲಿದ್ದಾರೆ.
ರಾತ್ರಿ 8ರಿಂದ ಬಾನ್ಸುರಿ ವಾದನವನ್ನು ಪ್ರಕಾಶ ಹೆಗಡೆ ಕಲ್ಲಾರಮನೆ ನಡೆಸಿಕೊಡಲಿದ್ದು ಹಾರ್ಮೋನಿಯಂ ನಲ್ಲಿ ಸತೀಶ ಭಟ್ ಹೆಗ್ಗಾರ್,ಹಾಗೂ ಪಂ. ರಾಜೇಂದ್ರ ನಾಕೋಡ ಇವರ ಜುಗಲ್ಬಂದಿಯಿದೆ. ರಾತ್ರಿ 9.30ರಿಂದ ವಿನಾಯಕ ಹೆಗಡೆ ಮುತ್ಮರ್ಡು ಗಾಯನಕ್ಕೆ ಪಂ ರಘುನಾಥ ನಾಕೋಡ ತಬಲಾ ಸಾಥ್, ಹೇಮಂತ ಭಾಗವತ್ ಹಾರ್ಮೋನಿಯಂ ಸಾಥ್, ಕೃಷ್ಣಪ್ರಸಾದ ಹೆಗಡೆ (ತಾಳ) ಸಾಥ್ ನೀಡುವರು. ಆಗಮಿಸುವ ಎಲ್ಲರಿಗೂ ಊಟೋಪಚಾರದ ವ್ಯವಸ್ಥೆಯಿದೆ ಎಂದು ತಿಳಿಸಿದರು.
ಸಂಘಟಕರಲ್ಲಿ ಓರ್ವರಾದ ಟಿ.ಜೆ.ಹೆಗಡೆ ಮಾಗೋಡ ಮಾತನಾಡಿ, ಸಂಘಟನೆಯು ಇದೇ ಪ್ರಥಮ ಬಾರಿಗೆ ಈ ಕಾರ್ಯಕ್ರಮ ಆಯೋಜಿಸಿದೆ. ಈ ಹಿಂದೆ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ ಜೊತೆ ದಂತಭಾಗ್ಯ ಶಿಬಿರ, ಆರೋಗ್ಯ ಶಿಬಿರದಂತಹ ಹಲವು ಕಾರ್ಯಕ್ರಮ ಯಶಸ್ವಿಯಾಗಿ ಸಂಘಟಿಸಿದೆ ಎಂದರು.
ವೇದಿಕೆಯಲ್ಲಿ ಸ್ಥಳೀಯರಾದ ಟಿ.ಎಸ್.ಹೆಗಡೆ, ವ್ಯವಸಾಯ ಸಂಘದ ನಿರ್ದೇಶಕ ಬಾಬು ನಾಯ್ಕ, ಶಿಕ್ಷಕಿ ವಿಮಲಾ ಹೆಗಡೆ, ಕೃಷಿಕ ಟಿ.ಎನ್.ಹೆಗಡೆ, ಹೊಸಾಕುಳಿ ಗ್ರಾ.ಪಂ. ಸದಸ್ಯ ಎಚ್.ಆರ್.ಗಣೇಶ, ಸ್ಥಳೀಯ ಸುರೇಶ ಅಂಬಿಗ, ಷಣ್ಮುಖ ಹೆಗಡೆ ಇದ್ದರು.