ಸಿದ್ದಾಪುರ: ಸ್ಥಳೀಯ ಲಯನ್ಸ್ ಕ್ಲಬ್ ಸುವರ್ಣ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದು, ಆ ಕುರಿತಾದ ಕಾರ್ಯಕ್ರಮಗಳು ಮೇ 13 ಮತ್ತು 14ರಂದು ಲಯನ್ಸ್ ಕ್ಲಬ್ ಆವಾರದಲ್ಲಿ ನಡೆಯಲಿದೆ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷೆ ಶ್ಯಾಮಲಾ ಹೆಗಡೆ ಹೂವಿನಮನೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮೇ 13ರ ಸಂಜೆ 4.30ಕ್ಕೆ ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಲಯನ್ಸ್ ಅಂತರರಾಷ್ಟ್ರೀಯ ನಿರ್ದೇಶಕ ವಂಶೀಧರ ಬಾಬು ಸುವರ್ಣ ಮಹೋತ್ಸವ ಭವನದ ನೀಲನಕ್ಷೆಯನ್ನು ಬಿಡುಗಡೆಗೊಳಿಸುವರು. ಮಾಜಿ ಅಂತರರಾಷ್ಟ್ರೀಯ ನಿರ್ದೇಶಕ ವಿ.ವಿ.ಕೃಷ್ಣಾರೆಡ್ಡಿ ಸ್ಥಳೀಯ ಲಯನ್ಸ್ ಕ್ಲಬ್‍ನ ಹಿಂದಿನ ಅಧ್ಯಕ್ಷರುಗಳಿಗೆ ಗೌರವ ಸಮರ್ಪಿಸುವರು. ಅಧ್ಯಕ್ಷತೆಯನ್ನು ಶ್ಯಾಮಲಾ ಹೆಗಡೆ ವಹಿಸಲಿದ್ದು, ಲಯನ್ಸ್ ಜಿಲ್ಲಾ ಗವರ್ನರ್ ಶ್ರೀಕಾಂತ ಮೋರೆ ಸಂಸ್ಥಾಪಕ ಅಧ್ಯಕ್ಷ ಎಂ.ಪಿ.ಶೆಟ್ಟಿಯವರ ಫೋಟೊ ಅನಾವರಣಗೊಳಿಸುವರು. ಗೌರವ ಅತಿಥಿಗಳಾಗಿ ಎಸ್.ರಾಮಚಂದ್ರನ್, ಸುಗಲಾ ಯೆಳಮಲಿ, ಅರ್ಲ ಬಿಟ್ಟೊ, ಅಗ್ನೆಲೊ ಅಲ್ಕಾಸಾಸ, ಎಚ್.ಕೆ.ಗಿರಿಧರ, ಎಚ್.ಟಿ.ಸೀತಾರಾಮ, ನಾಗರಾಜ ಬೈರಿ, ಎಚ್.ಎಸ್.ಮಂಜಪ್ಪ, ಎನ್.ಕುಮಾರ ಹಾಗೂ ವಿವಿಧ ಲಯನ್ಸ್ ಜಿಲ್ಲೆಗಳ ಮಾಜಿ ಗವರ್ನರ್‍ಗಳು ಪಾಲ್ಗೊಳ್ಳುವರು. ಆಂಧ್ರಪ್ರದೇಶದ ಲಿಂಗಗುಟ್ಲು ಸುಬ್ಬರಾವ್ ಅವರಿಂದ ಧರ್ನುವಿದ್ಯಾ ವಿಶೇಷ ಕಾರ್ಯಕ್ರಮ, ಸಹಚೇತನ ನಾಟ್ಯಾಲಯದ ನೃತ್ಯ ವೈವಿಧ್ಯ ನಡೆಯಲಿದೆ ಎಂದರು.
14ರ ಸಂಜೆ ಸ್ಮರಣ ಸಂಚಿಕೆ ಬಿಡುಗಡೆ, ಸಮಾಜದ ಗಣ್ಯರಿಗೆ ಸನ್ಮಾನ, ಕ್ಲಬ್ ಅಧ್ಯಕ್ಷರುಗಳ ಫೋಟೊ ಅನಾವರಣ, ನೇತ್ರದಾನ ಮಾಡಲಿರುವ ವ್ಯಕ್ತಿಗಳಿಗೆ ಪ್ರಮಾಣಪತ್ರ ವಿತರಣೆ ಕಾರ್ಯಕ್ರಮಗಳಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಚಲನಚಿತ್ರ ನಟ, ವಿಧಾನ ಪರಿಷತ್ ನಿಕಟಪೂರ್ವ ಸದಸ್ಯ ಶ್ರೀನಾಥ್ ಪಾಲ್ಗೊಳ್ಳಲಿದ್ದು, ಶ್ಯಾಮಲಾ ಹೆಗಡೆ ಅಧ್ಯಕ್ಷತೆ ವಹಿಸುವರು. ಆರ್.ಎಂ.ಹೆಗಡೆ, ಡಾ.ಬಿ.ಪಿ.ವೀರಭದ್ರಪ್ಪ, ಕ್ಯಾ.ರಾಜೇಶ ನಾಯಕ, ರಾಮಮೋಹನ ಹೆಗಡೆ ಹೂವಿನಮನೆ, ಡಾ.ಎಸ್.ಆರ್.ಹೆಗಡೆ, ಜಿ.ಜಿ.ಹೆಗಡೆ ಬಾಳಗೋಡ, ತಮ್ಮಣ್ಣ ಬೀಗಾರ, ಸಂಪೂರ್ಣ ಹೆಗಡೆ ಮುಂತಾದವರನ್ನು ಗೌರವಿಸಲಾಗುವದು. ನಂತರ ಗಧಾಯುದ್ಧ ಯಕ್ಷಗಾನ ಜರುಗಲಿದೆ ಎಂದರು.
ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಡಾ.ರವಿ ಹೆಗಡೆ ಹೂವಿನಮನೆ ಮಾತನಾಡಿ, ಸ್ಥಳೀಯ ಲಯನ್ಸ್ ಕ್ಲಬ್ ಕಳೆದ 50 ವರ್ಷಗಳಿಂದ ಶಿಕ್ಷಣ, ಆರೋಗ್ಯ, ಸಾಮಾಜಿಕ ಅಗತ್ಯ ಸೌಲಭ್ಯಗಳನ್ನು ಜನತೆಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತ ಬಂದಿದೆ. ಇದೊಂದು ಮೈಲಿಗಲ್ಲು. ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಮೇ 14ರಂದು ಶಿವಮೊಗ್ಗದ ನಾರಾಯಣ ಹೃದಯಾಲಯದ ಸಹಕಾರದಲ್ಲಿ ಉಚಿತ ಹೃದಯ ತಪಾಸಣೆ ಶಿಬಿರ ಆಯೋಜಿಸಲಾಗಿದೆ ಎಂದರು.
ಲಯನ್ಸ್ ಪದಾಧಿಕಾರಿಗಳಾದ ಡಾ.ರವಿ ಹೆಗಡೆ ಹೂವಿನಮನೆ, ಜಿ.ಜಿ.ಹೆಗಡೆ ಬಾಳಗೋಡ, ರಾಘವೇಂದ್ರ ಭಟ್ಟ ಕಲ್ಲಾಳ, ಪ್ರಶಾಂತ ಶೇಟ್, ವೀಣಾ ಶೇಟ್, ಸತೀಶ ಗೌಡರ್ ಇದ್ದರು.