ಯಲ್ಲಾಪುರ: ಪ್ರತಿಭೆಗಳು ಬೆಳೆಯಲು ಉತ್ತಮ ಶಿಕ್ಷಣ ಅಗತ್ಯ ಎಂದು ಸೋಂದಾ ಶ್ರೀ ಸ್ವರ್ಣವಲ್ಲಿ ಸಂಸ್ಥಾನದ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.
ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸಭಾ ಭವನ ಉದ್ಘಾಟನಾ ಕಾರ್ಯಕ್ರಮದ ಸಾನಿಧ್ಯವಹಿಸಿ ಅವರು ಆಶೀರ್ವಚನ ನೀಡಿ ನಮಗೆ ಬೇಕಾದ ಶಿಕ್ಷಣ ವ್ಯವಸ್ಥೆಯನ್ನು ಪಡೆದುಕೊಳ್ಳಲು ನಾವು ಕಷ್ಟಪಡಬೇಕಾಗಿ ಬಂದಿದೆ. ಸಾಕಷ್ಟು ಪ್ರತಿಭಾನ್ವಿತರಿರುವ ಉತ್ತರ ಕನ್ನಡದವರಿಗೆ ಉತ್ತಮ ಶಿಕ್ಷಣ ದೊರೆಯುತ್ತಿಲ್ಲ ಎಂಬ ಕೊರಗಿತ್ತು. ಆ ಕೊರಗು ಇದೀಗ ದೂರವಾಗಿದೆ. ದೇಶಕ್ಕೆ ಕೊಡುಗೆ ನೀಡಬಹುದಾದ ಸಾಮರ್ಥ್ಯವುಳ್ಳ ಉತ್ತರ ಕನ್ನಡ ಜಿಲ್ಲೆಯವರಿಗೆ ಸೂಕ್ತ ತರಬೇತಿ ಅಗತ್ಯವಿದ್ದು, ಆ ತರಬೇತಿ ನೀಡಲು ವಿಶ್ವದರ್ಶನ ಸಂಸ್ಥೆ ಮುಂದಾಗಿರುವುದು ಸಂತಸದ ವಿಷಯ. ಎಲ್ಲರೂ ಸಂಸ್ಕೃತ ಭಾಷೆಯನ್ನು ಕೈಬಿಡುವ ಸಂದರ್ಭದಲ್ಲಿ ವಿಶ್ವದರ್ಶನ ಶಿಕ್ಷಣ ಸಂಸ್ಥೆ ಸಂಸ್ಕೃತಕ್ಕೆ ಆದ್ಯತೆ ನೀಡಿ ಶಿಕ್ಷಣ ನೀಡುತ್ತಿದೆ. ಇಲ್ಲಿನ ಪ್ರತಿಭೆಗಳಿಗೆ ನೆಲೆ ಕೊಡುವ ಕೆಲಸ ಆಗುತ್ತಿದೆ. ಶೈಕ್ಷಣಿಕವಾಗಿ ಹೊಸ ಹೊಸ ವಿಚಾರಗಳನ್ನು ರೂಪಿಸಿ ಸಂಸ್ಥೆ ಮುನ್ನಡೆಯಲಿ ಎಂದು ಹಾರೈಸಿದರು.
ಸಭಾ ಭವನ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ರಾಜ್ಯದ ಒಟ್ಟು ಬಜೇಟ್‍ನಲ್ಲಿ 20ಸಾವಿರ ಕೋಟಿ ರೂ ಶಿಕ್ಷಣಕ್ಕೆ ಮೀಸಲಿದೆ. ಆದರೂ, ವಿಶ್ವದರ್ಶನದಂತಹ ಒಂದು ಶಾಲೆ ನಡೆಸಲು ಆಗಲಿಲ್ಲ. ಇಂದು ಮಕ್ಕಳಿಗೆ ಎಂತಹ ಶಿಕ್ಷಣ ಕೊಡಬೇಕು ಎಂಬ ಜಿಜ್ಞಾಸೆ ಎಲ್ಲರಿಗೂ ಕಾಡುತ್ತಿದೆ. ಸಂಸ್ಕಾರಯುತ ಶಿಕ್ಷಣದ ಕೊರತೆ ಎದ್ದು ತೋರುತ್ತಿದೆ ಎಂದರು. ಶಿವರಾಮ ಕಾರಂತರು ಹೇಳಿದಂತೆ, ಶಿಕ್ಷಣ ಅಂದರೆ ಶಾಲಾ ಕೊಠಡಿಯಿಂದ ಹೊರಗೂ ಯೋಜನೆ ರೂಪಿಸುವಂತಿರಬೇಕು. ಶಿಕ್ಷಣದ ಮೂಲಕ ಉತ್ತಮ ನಾಗರಿಕತ್ವ ಸೃಷ್ಟಿಯಾಗಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷರಾದ ಹರಿಪ್ರಕಾಶ ಕೋಣೆಮನೆ, ಸಂಸ್ಕಾರಯುತ ಶಿಕ್ಷಣಕ್ಕಾಗಿ ಸಂಸ್ಥೆ ಶ್ರಮಿಸುತ್ತಿದೆ. ಮುಂದಿನ ವರ್ಷದಿಂದ 300 ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್ ವ್ಯವಸ್ಥೆ ಮಾಡಲಾಗುತ್ತದೆ ಎಂದರು. ಜಿಲ್ಲಾಧಿಕಾರಿ ಮುಲೈ ಮುಹಿಲಿನ್ ಮಾತನಾಡಿ, ಅತ್ಯುತ್ತಮ ಶಿಕ್ಷಣಕ್ಕೆ ಹೆಸರಾದ ಉತ್ತರ ಕನ್ನಡದಲ್ಲಿ ಉನ್ನತ ಶಿಕ್ಷಣ ವ್ಯವಸ್ಥೆ ಇಲ್ಲದಿರುವುದು ವಿಷಾದನೀಯ. ಉನ್ನತ ಶಿಕ್ಷಣಕ್ಕೆ ಇಲ್ಲಿನವರು ಬೇರೆಡೆ ತೆರಳುವುದು ತಪ್ಪಬೇಕು ಎಂದರು.
ಗ್ರಾಮೀಣಾಭಿವೃದ್ದಿ ಪಂಚಾಯತರಾಜ್ ಉಪ ಸಮಿತಿಯ ಉಪಾಧ್ಯಕ್ಷರಾದ ಪ್ರಮೋದ ಹೆಗಡೆ, ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀನಿವಾಸ ಹೆಬ್ಬಾರ್ ವೇದಿಕೆಯಲ್ಲಿದ್ದರು. ಸಂಸ್ಥೆಯ ವ್ಯವಸ್ಥಾಪಕರಾದ ಗುರುರಾಜ ಕುಂದಾಪುರ ಹಾಗೂ ವಿವಿಧ ಅಂಗಸಂಸ್ಥೆಯ ಮುಖ್ಯಸ್ಥರು ಭಾಗವಹಿಸಿದ್ದರು. ಕರಿಯರ್ ಅಕಾಡೆಮಿ ವತಿಯಿಂದ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸಂಸ್ಥೆಯ ಕಾರ್ಯದರ್ಶಿಗಳಾದ ನರಸಿಂಹ ಕೋಣೆಮನೆ ಅವರು ಸ್ವಾಗತಿಸಿದರು. ಡಾ. ಡಿ ಕೆ ಗಾಂವ್ಕರ್ ನಿರ್ವಹಿಸಿದರು.