ಭಟ್ಕಳ: ಇಲ್ಲಿನ ರೈಲ್ವೆ ನಿಲ್ದಾಣದ ಎದುರು ನೋ ಪಾರ್ಕಿಂಗ್ ನಾಮಫಲಕ ಇದ್ದರು ಸಹ ಬೇಕಾಬಿಟ್ಟಿಯಾಗಿ ನಿಲ್ಲಿಸುತ್ತಿದ್ದ ವಾಹನಗಳಿಗೆ ರೈಲ್ವೆ ರಕ್ಷಣಾ ದಳವು (ಆರ್ ಪಿ ಎಫ್) ವಾಹನ ಸರಪಳಿ ಹಾಕಿ ಲಾಕ್ ಮಾಡುತ್ತಿದ್ದು, ದಂಡ ವಿಧಿಸಲು ಮುಂದಾಗಿದೆ.
ನೋ ಪಾರ್ಕಿಂಗ್ ಇದ್ದರು ಸಹ ನಿಲ್ದಾಣದ ಎದುರು ಬೈಕ್, ಕಾರುಗಳನ್ನ ಪಾರ್ಕ್ ಮಾಡಿ ನಿಲ್ದಾಣದೊಳಗೆ ಹೋಗುತ್ತಿದ್ದ ಸಾರ್ವಜನಿಕರು, ಪ್ರಯಾಣಿಕರು, ರೈಲ್ವೆ ರಕ್ಷಣಾ ದಳದ ಯಾವುದೇ ಕ್ರಮಕ್ಕೂ ಕ್ಯಾರೆ ಎನ್ನದೇ ವಾಹನ ನಿಲುಗಡೆ ಮಾಡುತ್ತಿದ್ದರು. ಇದರಿಂದ ಉಳಿದ ಪ್ರಯಾಣಿಕರು ನಿಲ್ದಾಣದೊಳಗೆ ಬರಲು ಹಾಗೂ ಆಟೋ ರಿಕ್ಷಾದಲ್ಲಿ ಬರುವ ವೃದ್ಧರು, ಮಹಿಳೆಯರು, ಮಕ್ಕಳಿಗೆ ನಿಲ್ದಾಣದೊಳಗೆ ಹೋಗಲು ಕಿರಿಕಿರಿಯಾಗುತ್ತಿತ್ತು.
ಈಗಾಗಲೇ ಪ್ರಯಾಣಿಕರಿಗಾಗಿ ವಾಹನ ಪಾರ್ಕಿಂಗ್ ಗಾಗಿ ರೈಲ್ವೆ ನಿಲ್ದಾಣದಿಂದ ಸ್ವಲ್ಪವೇ ದೂರದಲ್ಲಿ ಎರಡು ಕಡೆ ಶೆಡ್ ನಿರ್ಮಿಸಿದ್ದು, ಅಲ್ಲಿ ವಾಹನ ನಿಲ್ಲಿಸದೇ ನಿಲ್ದಾಣದ ಎದುರಿಗೆ ನಿಲ್ಲಿಸುತ್ತಿರುವುದಕ್ಕೆ ಸಂಬಂಧಿಸಿದಂತೆ ರೈಲ್ವೆ ರಕ್ಷಣಾ ದಳಕ್ಕೆ ಸಾಕಷ್ಟು ದೂರುಗಳು ಬಂದ ಹಿನ್ನೆಲೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಲಾಗಿದೆ.
ರೈಲ್ವೆ ನಿಲ್ದಾಣದ ಎರಡೂ ಕಡೆಗಳಲ್ಲಿ ಬೈಕ್, ಕಾರು ಅಥವಾ ಯಾವುದೇ ವಾಹನ ನಿಲ್ಲಿಸಿದ್ದಲ್ಲಿ ವಾಹನಕ್ಕೆ ಸರಪಳಿ ಹಾಕಿ, ಪಾರ್ಕಿಂಗ್ ಮಾಡಿದವರಿಂದ ಹೇಳಿಕೆ ಪಡೆದು, ದಂಡ ತುಂಬಿಸಿಕೊಂಡು ವಾಹನ ಬಿಡುವ ವ್ಯವಸ್ಥೆ ರೂಪಿಸಲಾಗಿದೆ.