ಅಂಕೋಲಾ: ಕರ್ನಾಟಕ ರಾಜ್ಯ ಸರಕಾರದ ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಇಲಾಖೆಯಿಂದ ಕೊಡಮಾಡುವ ರಾಜ್ಯ ಮಟ್ಟದ ಪುರಸ್ಕಾರವನ್ನು ತಾಲೂಕಿನ ಡಾ.ಸ್ಫೂರ್ತಿ ನಾಯಕ ಅವರಿಗೆ ಇಲಾಖಾ ಸಚಿವ ಡಾ.ಅಶ್ವತ್ಥ್ ನಾರಾಯಣ ಅವರು ಬೆಂಗಳೂರಿನ ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ನಲ್ಲಿ ನಡೆದ ಸಮಾರಂಭದಲ್ಲಿ ಪ್ರದಾನ ಮಾಡಿದರು.
ಡಾ.ಸ್ಫೂರ್ತಿ ನಾಯಕ ಅವರು ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದು, ತಮ್ಮ ಶ್ರೇಷ್ಟ ಮಟ್ಟದ ಸಂಶೋಧನಾ ಪ್ರಕಟಣೆಗಳಿಗಾಗಿ ರಾಜ್ಯ ಮಟ್ಟದ ಪುರಸ್ಕಾರ ಪಡೆದಿದ್ದಾರೆ. ಕರ್ನಾಟಕ ಸರ್ಕಾರದ ವಿ.ಜಿ.ಎಸ್.ಟಿ ಯೋಜನೆಯಡಿ, ಭಾರತ ರತ್ನ ಸಿ.ಎನ್.ಆರ್.ರಾವ್ ಅವರ ಅಧ್ಯಕ್ಷತೆಯ ವಿಷನ್ ಗ್ರೂಪ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ ಆಯ್ಕೆ ಸಮಿತಿಯ ಶಿಫಾರಸುಗಳನ್ನು ಆಧರಿಸಿ ಸದರಿ ಅವರಿಗೆ ಪ್ರತಿಷ್ಠಿತ ನಗದು ಸಹಿತ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಡಾ.ಸ್ಫೂರ್ತಿ ನಾಯಕ ಅವರು ಮೂಲತಃ ತಾಲೂಕಿನ ಸೂರ್ವೆಯ ದಿ.ನಾಗೇಶ ನಾಯಕ ಹಾಗೂ ನಾಗವೇಣಿ ನಾಯಕ ದಂಪತಿ ಪುತ್ರಿಯಾಗಿದ್ದು, ಅಮೆರಿಕಾದ ಯೂನಿವರ್ಸಿಟಿ ಆಫ್ ಫ್ಲೋರಿಡಾ ಹಾಗೂ ಹೈದ್ರಾಬಾದ್ನ ಇಕ್ರಿಸ್ಯಾಟ್ನಲ್ಲಿ ವಿಜ್ಞಾನಿಯಾಗಿ ಕರ್ತವ್ಯ ನಿರ್ವಹಿಸಿದ್ದರು.