ಕುಮಟಾ: ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ತನ್ನೂರಿಗೆ ಮರಳಿದ ಯೋಧನಿಗೆ ಹೃದಯಸ್ಪರ್ಶಿ ಸ್ವಾಗತ ನೀಡಿ ಬರಮಾಡಿಕೊಳ್ಳಲಾಯಿತು.
ಪಟ್ಟಣದ ಮಹಾಸತಿ ದೇವಸ್ಥಾನಕ್ಕೆ ಆಗಮಿಸಿದ ವೀರಯೋಧ ಹೆಗಡೆಯ ಶಾಂತಾರಾಮ ನಾಯ್ಕ ದೇವರಿಗೆ ಪೂಜೆ ಸಲ್ಲಿಸಿದರು. ನಂತರ ಹೆಗಡೆ ಊರಿನ ಸಮಸ್ತ ಯುವಕರು ಹಾಗೂ ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ, ನಿವೃತ್ತ ಯೋಧನಿಗೆ ಪೇಟ ತೋಡಿಸಿ ಶಾಲು ಹೊದಿಸಿ ಹಾರ ಹಾಕಿ ಸ್ವಾಗತ ಕೋರಿ ಶುಭ ಹಾರೈಸಿದರು.
ನಂತರ ಹೆಗಡೆಯ ವಕೀಲ ವಿನಾಯಕ ಪಟಗಾರ, ಸಾಮಾಜಿಕ ಕಾರ್ಯಕರ್ತ ಅಮರನಾಥ ಭಟ್ಟ, ಲಕ್ಷ್ಮೀಕಾಂತ ನಾಯ್ಕ, ವಿನಾಯಕ ನಾಯ್ಕ ಬಿಜೆಪಿ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಯೋಗಿಶ್ ಪಟಗಾರ ಹಾಗೂ ನಿವೃತ್ತ ಸೈನಿಕ ನವೀನ ನಾಯ್ಕ ಬಾಡ ಹಾಗೂ ಇತರರು ಯೋಧನಿಗೆ ಗೌರವ ನೀಡಿ ಶುಭ ಕೋರಿದರು.
ಸೂರಜ್ ನಾಯ್ಕ ಸೋನಿ ಮಾತನಾಡಿ, ದೇಶ ಸೇವೆಯಲ್ಲಿ ನಮ್ಮ ಕುಮಟಾದ ಯುವಕರು ಮುಂಚೂಣಿಯಲ್ಲಿ ಇದ್ದಾರೆ ಇದಕ್ಕೆ ಸಾಕ್ಷಿ ಎಂಬಂತೆ ಕುಮಟಾದ ಅನೇಕ ಸೈನಿಕರು ನಿವೃತ್ತರಾಗಿ ಆಗಮಿಸುತ್ತಿರುವುದು ಬಹಳ ಹೆಮ್ಮೆಯ ವಿಷಯ. ಎಷ್ಟೊಂದು ಯುವಕರು ಕುಮಟಾದಿಂದ ದೇಶದ ಸೇವೆಗಾಗಿ ತೆರಳಿ ಸೇವೆ ಸಲ್ಲಿಸಿ ಸುರಕ್ಷಿತವಾಗಿ ವಾಪಸಾಗುತ್ತಿದ್ದಾರೆ. ಹೇಗೆ ವಾಪಸಾಗುತ್ತಿದ್ದಾರೋ ಹಾಗೆ ಮತ್ತೆ ಹೆಚ್ಚಿನ ಸಂಖ್ಯೆಯಲ್ಲಿ ಸೇರುವಂತಾಗಬೇಕು. ಇದು ನಮ್ಮ ಕುಮಟಾಕ್ಕೆ ಹೆಮ್ಮೆ. ಶಾಂತಾರಾಮ ನಾಯ್ಕರವರ ನಿವೃತ್ತ ಜೀವನ ಸುಖಮಯವಾಗಿರಲಿ ಎಂದು ಶುಭ ಹಾರೈಸಿದರು.
ಯೋಧನ ಪತ್ನಿ ಕವಿತಾ, ತಂದೆ ಪರಮೇಶ್ವರ ನಾಯ್ಕ, ತಾಯಿ ಮಾಸ್ತಿ ಹಾಗೂ ಹೆಗಡೆ ಊರಿನ ನೂರಾರು ಯುವಕರು ಉಪಸ್ಥಿತರಿದ್ದು ಹೆಗಡೆ ತನಕ ಬೈಕ್ ಮೆರವಣಿಗೆ ಮೂಲಕ ಕರೆದೊಯ್ದರು.