ಕಾರವಾರ: ಕಾರವಾರ- ಬೆಂಗಳೂರು ರಾತ್ರಿ ರೈಲಿನ ಬಹು ಕಾಲದ ವೇಗ ಹೆಚ್ಚಳದ ಬೇಡಿಕೆ ಈಡೇರಿದ್ದು, ಇನ್ನುಮುಂದೆ ಬೆಳಿಗ್ಗೆ 6.45ಕ್ಕೆ ಯಶವಂತಪುರಕ್ಕೆ, 7.15ಕ್ಕೆ ಮೆಜೆಸ್ಟಿಕ್ ನಿಲ್ದಾಣಕ್ಕೂ ಕಾರವಾರ- ಬೆಂಗಳೂರು ರಾತ್ರಿ ರೈಲು ತಲುಪಲಿದೆ.
ಸಂಜೆ ಇನ್ನೂ ಹತ್ತು ನಿಮಿಷ ವಿಳಂಬವಾಗಿ ಆರಂಭವಾಗಲಿರುವ ರೈಲು 6.40ರ ಬದಲು 6.50ಕ್ಕೆ ಮೆಜೆಸ್ಟಿಕ್ ಹಾಗು 7ಕ್ಕೆ ಯಶವಂತಪುರ ನಿಲ್ದಾಣದಿಂದ ಕಾರವಾರ ಕಡೆ ಹೊರಡಲಿದೆ. ಈ ಬಗ್ಗೆ ಸಾರ್ವಜನಿಕರ ಅಗತ್ಯಗಳನ್ನು ರೈಲ್ವೇ ಇಲಾಖೆಗೆ ತಲುಪಿಸಿದ ಸಂಸದ ಅನಂತ್‍ಕುಮಾರ್ ಹೆಗಡೆ ಹಾಗೂ ಕುಮಟಾ ಶಾಸಕ ದಿನಕರ ಶೆಟ್ಟಿಯವರ ಪ್ರಯತ್ನಕ್ಕೆ ಫಲ ದೊರೆತಿದೆ.
ಪ್ರತಿದಿನ ಸಂಜೆ 6 ಗಂಟೆಗೆ ಕಾರವಾರದಿಂದ ಹೊರಡುವ ರೈಲು ಬೆಳಿಗ್ಗೆ ಬೆಂಗಳೂರು ಹೊರವಲಯವನ್ನು ಬೇಗನೆ ತಲುಪಿಯೂ ಮೆಜೆಸ್ಟಿಕ್ ತಲುಪಲು ವಿಳಂಬ ಮಾಡುತ್ತಿತ್ತು. 8 ಗಂಟೆಯ ಸುಮಾರಿಗೆ ಮೆಜೆಸ್ಟಿಕ್ ತಲುಪುತ್ತಿದ್ದ ಈ ರೈಲಿನ ಪ್ರಯಾಣಿಕರು ಬೆಂಗಳೂರು ಟ್ರಾಫಿಕ್‍ನಲ್ಲಿ ಸಿಲುಕಬೇಕಾದ ಸ್ಥಿತಿಯಿಂದ ಕಚೇರಿ ಕೆಲಸಗಳಿಗೆ ವಿಳಂಬವಾಗ ಬೇಕಾದ ಒತ್ತಡದಲ್ಲಿರುತ್ತಿದ್ದರು. ಆದರೆ ಈಗ ಒಂದು ಗಂಟೆಯಷ್ಟು ಸಮಯ ಉಳಿತಾಯವಾಗಿದ್ದು, ಅತ್ಯಂತ ನೆಮ್ಮದಿಯಿಂದ ಪ್ರಯಾಣಿಕರು 6.30ಕ್ಕೆ ಯಶವಂತಪುರ ಹಾಗೂ 7 ಗಂಟೆಗೆ ಮೆಜೆಸ್ಟಿಕ್ ತಲುಪಿ ನೆಮ್ಮದಿಯಿಂದ ಮನೆಗೆ, ಕಚೇರಿಗೆ ತಲುಪಬಹುದಾಗಿದೆ.
ಈ ಹಿಂದೆ ಮಂಗಳೂರು ನಗರದ ಒಳ ಹೋಗಿ ಅಲ್ಲಿ ಗಂಟೆಗಟ್ಟಲೆ ನಿಂತು ಹೋಗುತ್ತಿದ್ದ ಈ ಹಿಂದಿನ ರೈಲಿನ ಸುದೀರ್ಘ 17 ಗಂಟೆಯ ಪ್ರಯಾಣದಿಂದ ಬೇಸತ್ತಿದ್ದ ಜನರಿಗಾಗಿ ಉತ್ತರ ಕನ್ನಡ ಹಾಗೂ ಕುಂದಾಪುರ ರೈಲ್ವೇ ಸಮಿತಿ ಸತತ ಪ್ರಯತ್ನದಿಂದ ಹೊಸ ಪಡೀಲ್ ಬೈಪಾಸ್ ಮಾರ್ಗದ ರೈಲು ಆರಂಭವಾಗಿತ್ತು. ಕರಾವಳಿಯ ಬಹು ವಿಸ್ತಾರವಾದ ಭೂಭಾಗದ ಅಪಾರ ಜನಸಂಖ್ಯೆಗೆ ಸೀಮಿತವಾದ ಈ ಏಕೈಕ ರೈಲು, ನೇರ ಮಾರ್ಗದಲ್ಲಿ ಸಂಚರಿಸುತ್ತಾ ಸುಮಾರು ನಾಲ್ಕು ಗಂಟೆಗಳ ಉಳಿತಾಯ ಮಾಡಿ ಹದಿಮೂರುವರೆ ತಾಸಿನಲ್ಲಿ ಬೆಂಗಳೂರು ತಲುಪುತ್ತದೆ.
ರೈಲಿನ ಪಡೀಲ್ ಬೈಪಾಸ್ ಮಾರ್ಗದ ಪ್ರಯಾಣದ ನೇರ ಲಾಭದಿಂದ ರೈಲು ಮೊದಲ ದಿನದಿಂದಲೇ ಅಪಾರ ಜನಪ್ರಿಯತೆ ಪಡೆದಿದ್ದು, ಉಡುಪಿ ನಿಲ್ದಾಣ ತಲುಪುವ ಹೊತ್ತಿಗೆ ಸಂಪೂರ್ಣ ತುಂಬಿ ತುಳುಕುತ್ತಿದೆ. ಕರಾವಳಿಗರ ಜೀವನಾಡಿಯಾಗಿ ಓಡುವ ಈ ರೈಲನ್ನು ಹಾಳು ಮಾಡಲು ವಿವಿಧ ಭಾಗದ ಲಾಭಿಗಳ ನಿರಂತರ ಪ್ರಯತ್ನದ ಹೊರತಾಗಿಯೂ ಕರಾವಳಿಯ ಏಕೈಕ ರಾತ್ರಿ ರೈಲು ಜನಪ್ರಿಯಗೊಂಡಿರುವುದು ಕರಾವಳಿಗರಿಗೆ ಈ ರೈಲಿನ ಅಗತ್ಯವನ್ನು ತೋರಿಸುತ್ತಿದೆ.
ಈ ಹಿಂದೆ ಗಡಿಗಡಿಗೆ ಇಂಜಿನ್ ಬದಲಾವಣೆ, ಮಾರ್ಗ ಬದಲಾವಣೆಗಾಗಿ ನಿಲ್ಲುತ್ತಾ ತೆವಳುತ್ತಾ ಓಡುತ್ತಿದ್ದ ಹಳೆಯ ರೈಲಿನ ಕಾರಣದಿಂದ ರೈಲು ಪ್ರಯಾಣವೇ ಬೇಡವೆಂದುಕೊಂಡಿದ್ದ ಅಸಂಖ್ಯಾತ ಜನ ಈಗ ಮರಳಿ ರೈಲಿನ ಮೂಲಕವೇ ರಾಜಧಾನಿ ಬೆಂಗಳೂರು ತಲುಪುತ್ತಿದ್ದಾರೆ. ಈಗ ಅತೀ ಅಗತ್ಯವಾಗಿ ಬೇಕಾಗಿದ್ದ ಸಮಯ ಸುಧಾರಣೆಯೂ ಅಗಿರುವ ಕಾರಣ ರೈಲಿನ ಜನಪ್ರಿಯತೆ ಇನ್ನಷ್ಟು ಹೆಚ್ಚಾಗಲಿದೆ ಎಂದು ಉತ್ತರ ಕನ್ನಡ ರೈಲ್ವೇ ಸೇವಾ ಸಮಿತಿ ಅಭಿಪ್ರಾಯಪಟ್ಟಿದೆ.