ಶಿರಸಿ: ರೈತರ ಬೆಳವಣಿಗೆಯ ಜೊತೆಗೆ ಸಂಸ್ಥೆ ಬೆಳೆಯುವುದು ಆದರ್ಶದ ವಿಚಾರವಾಗಿದೆ. ಸಹಕಾರಿ ಸಂಘಗಳು ಆ ಹಾದಿಯಲ್ಲಿ ನಡೆತುತ್ತಿರುವುದು ಶ್ಲಾಘನೀಯ ಎಂದು ಶ್ರೀ ಸ್ವರ್ಣವಲ್ಲೀ ಮಠಾಧೀಶ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ನುಡಿದರು.
ಅವರು ಮಂಗಳವಾರ ಶಿರಸಿ ಟಿಎಂಎಸ್ ನ ನೂತನ ಗ್ರೇಡಿಂಗ್ ವಿಭಾಗದ ಕಟ್ಟಡ ಉದ್ಘಾಟಿಸಿ ಆಶೀರ್ವದಿಸಿದರು. ರೈತರ ಜೀವನ ಪರಾಧೀನ ಆಗದೇ ಸಾಲವಿಲ್ಲದ ಜೀವನವಾಗಬೇಕು. ದೇವರೆಡೆಗಿನ ಭಕ್ತಿಯಿಂದ ಮನುಷ್ಯನಿಗೆ ಗಟ್ಟಿಯಾಗಿ, ಸೋಲನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ಬರುತ್ತದೆ. ವ್ಯಾವಹಾರಿಕ ಪ್ರಯತ್ನದ ಜೊತೆಗೆ ಭಕ್ತಿ ಜೊತೆಯಾದಾಗ ಅದ್ಭುತ ಸಾಧನೆಯಾಗುತ್ತದೆ ಎಂದರು.
ಹೆಸರಿನಲ್ಲಿ ಮಾರಾಟ ಸಂಘವಿದ್ದರೂ, ಕೇವಲ ವ್ಯಾಪಾರಿ ಸಂಘವಾಗಿ ಉಳಿದಿಲ್ಲ. ಸಹಕಾರಿ ಸಂಘಗಳು ಜನತೆಯ ಸರ್ವ ಆಶಯವನ್ನು ಈಡೇರಿಸುತ್ತಾ ಬಂದಿವೆ. ಜಿಲ್ಲೆಯ ಬೆಳವಣಿಗೆಯಲ್ಲಿ ಸಹಕಾರಿ ಕ್ಷೇತ್ರದ ಪಾಲು ಅಗ್ರಗಣ್ಯವಾಗಿದೆ. ರೈತರ ಬೆಳೆಯನ್ನು ಸುರಕ್ಷಿತವಾಗಿಡುವುದು ಕೂಡ ಬೆಳೆಗಾರರಿಗೆ ನೀಡುವ ಉತ್ತಮ ಸೇವೆಯಾಗಿದೆ.
ಅಡಿಕೆಗೆ ಉತ್ತಮ ದರ ಬಂದರೂ ಸಹ ರೈತರ ಸಾಲ ಹೆಚ್ಚಾಗುತ್ತಿದೆ. ಯೋಜನಾಬದ್ಧವಾಗಿ ಕೃಷಿ ಕೆಲಸವನ್ನು ಮಾಡುವ ಮೂಲಕ ಸಾಲದ ಹೊರೆಯನ್ನು ಕಡಿಮೆ ಮಾಡಿಕೊಳ್ಳಬೇಕಿದೆ ಎಂದರು. ಸಾರ್ವಜನಿಕವಾಗಿ ಹಳ್ಳಿಗಳಲ್ಲಿ ಸಹಕಾರಿ ತತ್ವ ಹೆಚ್ಚುತ್ತಿದ್ದರೂ ಸಹ ಮನೆಗಳಲ್ಲಿ ಸಹಕಾರ ತತ್ವ ಕಡಿಮೆಯಾಗುತ್ತಿದೆ. ಮನೆಯಲ್ಲಿರುವ ಮನಸ್ಸುಗಳಲ್ಲಿ ಸಹಕಾರಿ ಮನೋಭಾವ ಹೆಚ್ಚಬೇಕು ಎಂದರು.
ವಿಧಾನಸಭಾಧ್ಯ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಜಿಲ್ಲೆಯ ಜನರ ನಿಸ್ವಾರ್ಥ ಸೇವೆಯೇ ಸಹಕಾರ ಕ್ಷೇತ್ರದ ಯಶಸ್ಸಿಗೆ ಕಾರಣ. ಜಿಲ್ಲೆಯ ಸಹಕಾರಿ ಸಮೃದ್ಧತೆಯನ್ನ ಇಲ್ಲಿನ ಸಹಕಾರಿ ಸಾಧಕರು ಪ್ರತಿಬಿಂಬಿಸುತ್ತಿದ್ದಾರೆ ಎಂದು ಹೇಳಿದರು.
ಸಮಾಜದಲ್ಲಿ ಹಕವರ ಸಂಘಟಿತ ಪ್ರಯತ್ನದಿಂದ ವ್ಯವಸ್ಥೆಯೊಂದರ ಹುಟ್ಟು ಸಾಧ್ಯವಾಗುತ್ತದೆ. ನಾವು ಸಂಘಟಿತವಾಗಿ ಪ್ರಯತ್ನಿಸಿದಾಗ ಮಾತ್ರ ಯಶಸ್ಸು ಸಾಧ್ಯ ಎಂದರು.
ಸಿದ್ದಾಪುರ ಟಿಎಂ ಎಸ್ ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ ಅವರು ಮಾತನಾಡಿ, ರೈತರ ಜೀವನವನ್ನು ಹಸನುಗೊಳಿಸಲು ಸಹಕಾರಿ ಕ್ಷೇತ್ರ ಸಹಕಾರಿಯಾಗಿದೆ. ಜಿಲ್ಲೆಯ ಶಿರಸಿ, ಸಿದ್ದಾಪುರ, ಯಲ್ಲಾಪುರ ತಾಲೂಕುಗಳಲ್ಲಿ ಈ ಕ್ಷೇತ್ರ ಹೆಚ್ಚು ಪ್ರಬಲವಾಗಿ ಬೆಳೆದಿದೆ ಎಂದರು. ಹಿಂದೆ ವ್ಯಾಪಾರಿ ಕ್ಷೇತ್ರ ಖಾಸಗೀ ವರ್ತಕರ ಹಿಡಿತದಲ್ಲಿತ್ತು. ಅದನ್ನು ತಪ್ಪಿಸುವಲ್ಲಿ ಸಹಕಾರಿ ಸಂಘಗಳು ಯಶಸ್ವಿಯಾಗಿವೆ ಎಂದರು. ಅದರಲ್ಲೂ ಶಿರಸಿ ರಾಜ್ಯದಲ್ಲೇ ಸಹಕಾರಿ ಕ್ಷೇತ್ರಕ್ಕೇ ಮಾದರಿಯಾದ ಊರು. ಇದನ್ನು ಉಳಿಸಿಕೊಳ್ಳಬೇಕು. ಅಡಿಕೆಗೆ ಇಷ್ಟು ಬೆಲೆ ಬಂದರೂ ಸಾಲ ಹೆಚ್ಚುತ್ತಿದೆ ಎಂದು ಬೇಸರಿಸಿದರು.
ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಕದಂಬ ಸಹಕಾರಿ ಸಂಘದ ಅಧ್ಯಕ್ಷ ಶಂಭುಲಿಂಗ ಹೆಗಡೆ, ಅಡಿಕೆ ಮಾರಾಟ ಮಂಡಳದ ಅಧ್ಯಕ್ಷ ಎಚ್.ಎಸ್.ಮಂಜಪ್ಪ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಟಿ.ಎಂ.ಎಸ್ ಅಧ್ಯಕ್ಷ ಜಿ.ಎಂ. ಹೆಗಡೆ ಹುಳಗೋಳ, ಉಪಾಧ್ಯಕ್ಷ ಎಂ.ಪಿ. ಹೆಗಡೆ ಹೊನ್ನೇಕಟ್ಟಾ, ನಿರ್ದೇಶಕರಾದ ಜಿ.ಟಿ.ಹೆಗಡೆ ತಟ್ಟೀಸರ, ಟಿ.ಎಂಎಸ್ ಮುಖ್ಯಕಾರ್ಯನಿರ್ವಾಹಕ ಎಂ.ಎ. ಹೆಗಡೆ, ಕದಂಬ ಸಹಕಾರಿ ಸಂಘದ ಅಧ್ಯಕ್ಷ ಶಂಭುಲಿಂಗ ಹೆಗಡೆ, ಅಡಿಕೆ ಮಾರಾಟ ಮಂಡಳದ ಅಧ್ಯಕ್ಷ ಎಚ್. ಎಸ್. ಮಂಜಪ್ಪ, ಜಿ.ಟಿ.ಹೆಗಡೆ ತಟ್ಟೀಸರ, ನಿರ್ದೇಶಕ ಎಂ.ಪಿ. ಹೆಗಡೆ ಹೊನ್ನೆಕಟ್ಟಾ, ಎಪಿಎಂಸಿ ಅಧ್ಯಕ್ಷ ಶಿವಕುಮಾರ ದೇಸಾಯಿ ಗೌಡರ್, ಸಹಕಾರಿ ಉಪನಿಬಂಧಕ ನಿಂಗರಾಜು ಎಸ್, ಎಪಿಎಂಸಿ ಕಾರ್ಯದರ್ಶಿ ಡಾ. ಕೆ. ಕೋಡಿಗೌಡ ಇದ್ದರು.