ಶಿರಸಿ : ಭೂಮಿಯ ಮೇಲೆ ಪ್ರತಿಯೊಬ್ಬ ಮನುಷ್ಯನ ಜೀವವೂ ಹೇಗೆ ಮುಖ್ಯವೋ ಅದೇ ರೀತಿ ಪ್ರತಿಯೊಂದು ಸಸ್ಯಗಳೂ ಅಷ್ಟೇ ಮುಖ್ಯ ಎಂಬ ಸಂದೇಶದೊಂದಿಗೆ ಸುಮಾರು 52 ಸ್ಕ್ವೇರ್ ಫೀಟಿನ ಪಶ್ಚಿಮ ಘಟ್ಟದ ಕಾಳಿನದಿ ಬೇಡ್ತಿವ್ಯಾಲಿಯ ವಿಹಂಗಮ ನೋಟವನ್ನು ಶಿರಸಿಯ ಅಮರನಾಥ ಸುರೇಶ ರೇವಣಕರ ಚಿತ್ರಿಸಿದ್ದಾರೆ.
ಜಯಶ್ರೀ ಮತ್ತು ಸುರೇಶ ರೇವಣಕರ ದಂಪತಿಯ ಮಗನಾದ ಅಮರನಾಥ್ ಮೊದಲಿನಿಂದಲೂ ಪ್ರಕೃತಿ ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿದ್ದರು. ಇವರು ವೃತ್ತಿಯಲ್ಲಿ ಇಂಜಿನೀಯರ್ ಆಗಿದ್ದು ಇತ್ತೀಚೆಗೆ ಕಾಂಚನ ಗಂಗಾ ಪರ್ವತಾರೋಹಣ ತರಬೇತಿಯಲ್ಲಿ ಚಿನ್ನದ ಪದಕ ಪಡೆದಿದ್ದಾರೆ.
ಕಾಳಿನದೀ ಬೇಡ್ತಿ ವ್ಯಾಲಿಯ ರುದ್ರ ರಮಣೀಯ ಚಿತ್ರಣವನ್ನು ಅರಣ್ಯ ಇಲಾಖೆಯ ಹುಲೇಕಲ್ ವಲಯ ಕಛೇರಿಯಲ್ಲಿ ಶಾಶ್ವತವಾಗಿ ಪ್ರದರ್ಶಿಸಲು ವ್ಯವಸ್ಥೆ ಕಲ್ಪಿಸಿದೆ. ಸುಮಾರು 4 ತಿಂಗಳ ಅವಧಿಯ ಪರಿಶ್ರಮದ ಈ ಚಿತ್ರದಲ್ಲಿ ಪ್ರಕೃತಿಯ ನೈಜತೆ, ಅಮರನಾಥ ಸುರೇಶ ರೇವಣಕರರವರ ಕೈಚಳಕ, ಮತ್ತು ವಲಯ ಅರಣ್ಯಾಧಿಕಾರಿ ಮಂಜುನಾಥ ಎಂ. ಹೆಬ್ಬಾರವರ ಪರಿಸರ ಕಾಳಜಿಯನ್ನು ತೋರಿಸುತ್ತದೆ. ಈ ಕಲೆಗೆ ಅರಣ್ಯ ಇಲಾಖೆಯು ಗೌರವ ಧನ ನೀಡಿ ಪ್ರೋತ್ಸಾಹಿಸಿದೆ.