ಶಿರಸಿ: ನಗರ ಪ್ರದೇಶದ ಅತಿಕ್ರಮಣದಾರರಿಗೂ ಮನೆ ನೀಡಲು ಎಲ್ಲ ಪ್ರಯತ್ನ ಮಾಡುತ್ತಿರುವುದಾಗಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಭರವಸೆ ನೀಡಿದರು.
ನಗರಸಭೆಯ ಅಟಲಜಿ ಸಭಾಭವನದಲ್ಲಿ ನಡೆದ ನಗರ ಆಶ್ರಯ ಸಮಿತಿ ಸಭೆಯಲ್ಲಿ ಮಾತನಾಡುತ್ತ, ನಗರ ಪ್ರದೇಶದಲ್ಲಿದ್ದು ಮನೆ ಕಟ್ಟಲು ಜಾಗ ಇಲ್ಲದವರಿಗೂ ಮನೆ ಕಟ್ಟಿ ಕೊಡಲು ಈ ಹಿಂದೆ ಯೋಜನೆ ರೂಪಿಸಿ ಜಾಗದ ಹುಡುಕಾಟ ನಡೆದಿತ್ತು. ಆದರೆ ಅರಣ್ಯ ಪ್ರದೇಶವಾಗಿರುವುದರಿಂದ ಎಲ್ಲೂ ನಗರಸಭೆಯ ಜಾಗ ದೊಡ್ಡ ಪ್ರಮಾಣದಲ್ಲಿಲ್ಲ. ಖಾಸಗಿಯವರಿಂದ ಜಾಗ ಪಡೆಯೋಣವೆಂದರೆ ಸರಕಾರ ನೀಡುವ ಹಣ ಸಾಕಾಗುವುದಿಲ್ಲ. ಆದ್ದರಿಂದ ಅತಿಕ್ರಮಣದಾರಿಗೆ ಮನೆ ನಂಬರ್ ಮೇಲೆ ಮನೆ ನೀಡಿದರೆ ಅವರಿಗೆ ಬಹುದೊಡ್ಡ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ನನ್ನ ಪ್ರಯತ್ನಸಾಗಿದೆ ಎಂದರು.
2015-16ನೇ ಸಾಲಿನಿಂದ ಇಲ್ಲಿಯವರೆಗೆ 124 ಆಶ್ರಯ ಮನೆಗಳಿಗೆ 1.5 ಲಕ್ಷ ಹಣ ಕೇಂದ್ರ ಸರಕಾರದಿಂದ ಬಿಡುಗಡೆಯಾಗದೆ ಇದ್ದು, ಬಾಕಿ ಉಳಿದ ಹಣವು ಒಂದು ತಿಂಗಳಲ್ಲಿ ಬಿಡುಗಡೆಯಾಗಲಿದೆ ಎಂದರು. ಇದೇ ಸಂದರ್ಭದಲ್ಲಿ ಸ್ಪೀಕರವರು ಡಾ.ಬಿ ಆರ್ ಅಂಬೇಡ್ಕರ್ ನಿವಾಸ್ ಯೋಜನೆಯಡಿ ಹಾಗು ವಾಜಪೇಯಿ ವಸತಿ ಯೋಜನೆಯಡಿ ನಗರ ಪ್ರದೇಶದ ವಸತಿರಹಿತರಿಗೆ ವಸತಿ ಕಲ್ಪಿಸಲು ಅರ್ಜಿ ಬಂದ 27 ಫಲಾನುಭವಿಗಳಿಗೆ ಮಂಜೂರಿ ನೀಡಿದರು.
ಸಭೆಯಲ್ಲಿ ನಗರಸಭೆ ಅದ್ಯಕ್ಷ ಗಣಪತಿ ನಾಯ್ಕ, ಉಪಾಧ್ಯಕ್ಷೆ ವೀಣಾ ಶೆಟ್ಟಿ, ಪೌರಾಯುಕ್ತ ಕೇಶವ ಚೌಗುಲೆ ಹಾಜರಿದ್ದರು.