ಸಿದ್ದಾಪುರ:ತಾಲೂಕಿನ ಹಣಜೀಬೈಲಿನ ಶ್ರೀಮಹಾಗಣಪತಿ ಯಕ್ಷಗಾನ ಮಂಡಳಿಯವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಬಿದ್ರಕಾನ ಗೋಳಿಕೈ ಕೆರೆಯ ಆವರಣದಲ್ಲಿ ಸಂಘಟಿಸಿದ್ದ ‘ಯಕ್ಷೋತ್ಸವ- 2022’ ಕಾರ್ಯಕ್ರಮವನ್ನು ಪತ್ರಕರ್ತ ಕೆಕ್ಕಾರ ನಾಗರಾಜ ಭಟ್ಟ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಕನ್ನಡ ನಾಡಿನ ಮೇರು ಕಲೆಯಾದ ಯಕ್ಷಗಾನವು ಸಮಾಜದ ಹಿತವನ್ನು ಬಯಸುವ ಸಂದೇಶ ನೀಡುತ್ತದೆಯೇ ವಿನಾ ಸಮಾಜಘಾತುಕ ಪ್ರಕ್ರಿಯೆಯನ್ನು ಪ್ರಚೋದಿಸುವುದಿಲ್ಲ. ನವರಸಗಳನ್ನೂ ಒಳಗೊಂಡ ಇಂತಹ ಅಪ್ರತಿಮ ಕಲೆಯನ್ನು ಫೆವಿಕಾಲ್‍ನಂತಹ ಅಂಟಿನ ಮಾರಾಟಕ್ಕೆ ಜಾಹೀರಾತಿನ ಮೂಲವಾಗಿ, ಕಳಪೆಯಾಗಿ ಬಳಸುವುದು ಖಂಡನೀಯ ಎಂದರು.
ಹಲವು ಶತಮಾನಗಳಿಂದ ಹಿರಿಯರು ಯಕ್ಷಗಾನ ಕಲೆಯನ್ನು ಅದರ ಚೌಕಟ್ಟಿನೊಳಗೆ ಸಂಪ್ರದಾಯಬದ್ಧವಾಗಿ ಅಚ್ಚ ಕನ್ನಡದಲ್ಲಿ ಕಾಪಿಟ್ಟುಕೊಂಡುಬಂದಿದ್ದು, ಕನ್ನಡಿಗರೊಂದಿಗೆ ಕರಳುಬಳ್ಳಿಯ ಸಂಬಂಧ ಹೊಂದಿದ ಈ ಕಲೆಯನ್ನು ಕಲುಷಿತಗೊಳಿಸಿದರೆ ಯಕ್ಷಗಾನ ಕಲಾವಿದರು, ಅಕಾಡೆಮಿಯ ಪ್ರಮುಖರು, ಕಲಾಭಿಮಾನಿಗಳು ನಿರ್ಬಿಡಿಯದಿಂದ ಖಂಡಿಸಲು ಮುಂದಾಗಬೇಕು ಎಂದು ಅವರು ಕರೆನೀಡಿದರು.
ಬಿದ್ರಕಾನ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪರಮೇಶ್ವರ ಸುಬ್ರಾಯ ಹೆಗಡೆ ಹುಲಿಮಕ್ಕಿ ಮಾತನಾಡಿ, ಮಹಾಭಾರತ, ರಾಮಾಯಣಗಳ ಮೌಲ್ಯವನ್ನು ಯಕ್ಷಗಾನ ಕಲೆ ಬಿತ್ತುತ್ತದೆ. ಆ ಮೂಲಕ ಸಾಮಾಜಿಕರು ತಪ್ಪು ದಾರಿಯಲ್ಲಿ ಸಾಗದಂತೆ ಎಚ್ಚರಿಕೆ ನೀಡುತ್ತದೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಹಿರಿಯ ಯಕ್ಷಗಾನ ಅರ್ಥಧಾರಿ ಎಂ.ಜಿ.ಹೆಗಡೆ ಗೋಳಿಕೈ ಸಂಸ್ಕಾರ, ಸಂಸ್ಕೃತಿ ಹಾಗೂ ಧರ್ಮ ಸೂಕ್ಷ್ಮವನ್ನು ಮನದಾಳಕ್ಕೆ ಇಳಿಸುವ ಯಕ್ಷಗಾನದಂತಹ ಕಲೆ ಬೇರೊಂದಿಲ್ಲ. ಇಂದಿನ ಬಾಲಕರು, ಯುವಕರು ಮೊಬೈಲ್ ಗೀಳಿಗೆ ಬೀಳದೇ ಈ ಕಲೆಯತ್ತ ಹೊರಳಿದಲ್ಲಿ ಭವಿಷ್ಯದಲ್ಲಿ ಈ ಕಲೆ ಮತ್ತಷ್ಟು ಬೆಳಗುವಲ್ಲಿ ಸಂಶಯವಿಲ್ಲ ಎಂದರು.
‘ಯಕ್ಷೋತ್ಸವ- 2022’ ಸಂದರ್ಭದಲ್ಲಿ ‘ಚಿತ್ರಾಕ್ಷಿ ಕಲ್ಯಾಣ’ ಯಕ್ಷಗಾನ ಪ್ರದರ್ಶನ ನಡೆದು ಪ್ರೇಕ್ಷಕರ ಮನಗೆದ್ದಿತು.
ಭಾಗವತರಾಗಿ ಮಾಧವ ಭಟ್ಟ ಕೊಳಗಿ, ನಾಗರಾಜ ಮಗಳ್ಳೆ, ಮೃದಂಗವಾದಕರಾಗಿ ಮಂಜುನಾಥ ಹೆಗಡೆ ಗುಡ್ಡೆದಿಂಬ, ಚಂಡೆವಾದಕರಾಗಿ ಗಣೇಶ ಭಟ್ಟ ಕೆರೆಕೈ ಪಾಲ್ಗೊಂಡಿದ್ದರು. ಅಶೋಕ ಭಟ್ಟ ಸಿದ್ದಾಪುರ, ಪ್ರಭಾಕರ ಹೆಗಡೆ ಹಣಜೀಬೈಲ, ಸದಾನಂದ ಹೆಗಡೆ, ಪ್ರಸನ್ನ ಹೆಗಡೆ, ಪ್ರವೀಣ ಹೆಗಡೆ, ಪ್ರದೀಪ ಹೆಗಡೆ, ಅವಿನಾಶ ಕೊಪ್ಪ, ರಾಮಕೃಷ್ಣ ಹೆಗಡೆ, ಅಪೂರ್ವ ಭಟ್ಟ, ಹುಚ್ಚಪ್ಪ ಗೌಡ, ಶಂಕರ ಹೆಗಡೆ, ಶಿವಾನಂದ ಹೆಗಡೆ ಅವರುಗಳು ವಿವಿಧ ಪಾತ್ರಗಳನ್ನು ನಿರ್ವಹಿಸಿದರು. ಯಕ್ಷಗಾನ ಕಲಾವಿದ ಕೃಷ್ಣ ಗೌಡ ಅವರ ನಿರ್ದೇಶನದಲ್ಲಿ ಚಿಕ್ಕಮಕ್ಕಳಿಂದ ಬಾಲಗೋಪಾಲ ವೇಷ, ಕುಣಿತ ನಡೆದು ನೋಡುಗರನ್ನು ರಂಜಿಸಿತು.
ಮೇಧಾ, ಸಮೀಕ್ಷಾ ಅವರುಗಳ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ವಿ.ವಿಶ್ವನಾಥ ಭಟ್ಟ ಗೋಳಿಕೈ ಸ್ವಾಗತಿಸಿದರು. ಯಕ್ಷಗಾನ ಕಲಾವಿದ ಅಶೋಕ ಭಟ್ಟ ಸಿದ್ದಾಪುರ ಪ್ರಾಸ್ತಾವಿಕ ಮಾತನಾಡಿದರು. ಅಶೋಕ ಹೆಗಡೆ ಗೋಳಿಕೈ ನಿರ್ವಹಿಸಿ, ವಂದಿಸಿದರು. ಶ್ರೀಮಹಾಗಣಪತಿ ಯಕ್ಷಗಾನ ಮಂಡಳಿಯ ಸಂಚಾಲಕ ಸದಾನಂದ ಹೆಗಡೆ, ಕಾರ್ಯದರ್ಶಿ ಪ್ರಭಾಕರ ಹೆಗಡೆ ಇತರರು ಉಪಸ್ಥಿತರಿದ್ದರು.