ಭಟ್ಕಳ: ಶವ್ವಾಲ್ ತಿಂಗಳ ಚಂದ್ರ ದರ್ಶನವಾಗಿರುವ ಹಿನ್ನೆಲೆಯಲ್ಲಿ ಸೋಮವಾರ ಪಟ್ಟಣದಲ್ಲಿ ಈದ್- ಉಲ್- ಫಿತ್ರ್ ಹಬ್ಬವನ್ನ ಅತ್ಯಂತ ಸಡಗರ ಸಂಭ್ರಮದೊಂದಿಗೆ ಆಚರಿಸಲಾಯಿತು.
29 ದಿನಗಳ ಉಪವಾಸ ವೃತಾಚರಣೆ ಕೊನೆಗೊಂಡ ಹಿನ್ನೆಲೆಯಲ್ಲಿ ಸೋಮವಾರದಂದು ಬೆಳಿಗ್ಗೆ ಬಂದರ್ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಸೇರಿದ ಸಾವಿರಾರು ಮುಸ್ಲಿಮರು, ಮರ್ಕಝಿ ಖಲಿಫಾ ಜಮಾತ್- ಉಲ್- ಮುಸ್ಲಿಮೀನ್ ಪ್ರಧಾನ ಖಾಜಿ ಮೌಲಾನ ಕ್ವಾಜಾ ಮುಹಿದ್ದೀನ್ ಅಕ್ರಮಿ ಮದನಿ ನದ್ವಿಯವರ ನೇತೃತ್ವದಲ್ಲಿ ಈದ್ ವಿಶೇಷ ಪ್ರಾರ್ಥನೆ ನೆರವೇರಿಸಿದರು.
ವಿಶೇಷ ಪ್ರಾರ್ಥನೆಯ ಬಳಿಕ ಈದ್ ಸಂದೇಶ ನೀಡಿದ ಖಾಜಿ, ಯುವ ಸಮುದಾಯ ಧಾರ್ಮಿಕ ಮತ್ತು ನೈತಿಕ ಮೌಲ್ಯಗಳಿಂದ ವಿಮುಖವಾಗುತ್ತಿದ್ದು, ಅವರು ಜೀವನದಲ್ಲಿ ಧರ್ಮವನ್ನು ಪಾಲಿಸುವಂತೆ ಕರೆ ನೀಡಿದರು. ದೇವನ ಧರ್ಮದ ಕಡೆ ನಾವು ಮರಳಬೇಕಾಗಿದೆ. ನಮ್ಮಲ್ಲಿ ಮಾನವೀಯತೆ, ಮನುಷ್ಯ ಪ್ರೇಮ ಬೆಳೆಯಬೇಕಾದರೆ ನಾವು ಹೆಚ್ಚೆಚ್ಚು ಧರ್ಮವನ್ನು ಪಾಲಿಸುವ ಅವಶ್ಯಕತೆಯಿದೆ ಎಂದ ಅವರು, ನಮ್ಮ ಈ ಸುಂದರ ದೇಶದಲ್ಲಿ ಹಲವು ಜಾತಿ, ಧರ್ಮ, ಭಾಷೆ, ಸಂಸ್ಕೃತಿಯುಳ್ಳವರು ಬದುಕುತ್ತಿದ್ದಾರೆ. ಒಬ್ಬರು ಇನ್ನೊಬ್ಬರನ್ನು ದ್ವೇಷಿಸದೇ ಅನ್ಯೋನ್ಯತೆಯಿಂದ ಬಾಳುತ್ತಿದ್ದಾರೆ. ನಮ್ಮಲ್ಲಿ ಯಾವುದೇ ವೈರತ್ವವಿಲ್ಲ. ಕೆಲ ಮನುಷ್ಯ ವಿರೋಧಿಗಳು ನಡೆಸುತ್ತಿರುವ ದುಷ್ಕೃತ್ಯದಿಂದಾಗಿ ಇಡೀ ಸಮುದಾಯವನ್ನು ದೂರುವುದು ಸರಿಯಲ್ಲ. ನಾವು ನಮ್ಮ ಸಚ್ಚಾರಿತ್ರ್ಯ ಮತ್ತು ಉತ್ತಮ ನಡತೆಯೊಂದಿಗೆ ದೇಶಕ್ಕೆ ಮಾದರಿಯಾಗಬೇಕು ಎಂದು ಕರೆ ನೀಡಿದರು.
ಶ್ವೇತ ವಸ್ತ್ರಧಾರಿ ಮುಸ್ಲಿಮರು ಪರಸ್ಪರ ಅಪ್ಪುಗೆಯಿಂದ ಈದ್ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಈದ್ಗಾ ಮೈದಾನದಲ್ಲಿ ಸ್ಥಳವಕಾಶ ಸಾಕಾಗದೇ ಹೊರಗಿನ ಆವರಣ, ರಸ್ತೆ ಬದಿಯಲ್ಲೇ ಮುಸ್ಲಿಮರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಡಿವೈಎಸ್ಪಿ ಕೆ.ಯು.ಬೆಳ್ಳಿಯಪ್ಪ ನೇತೃತ್ವದಲ್ಲಿ ಪೊಲೀಸರು ಬಿಗಿ ಪೊಲೀಸ್ ಬಂದೋಬಸ್ತ್ ವಹಿಸಿದ್ದರು.