ಕಾರವಾರ: ರಾಜ್ಯದಲ್ಲಿ ಪಿಎಸ್ಐ ನೇಮಕಾತಿ ಹಗರಣದಲ್ಲಿ ಅಕ್ರಮವಾಗಿ ಭಾಗಿಯಾಗಿದ್ದಾರೆಂದು ಆಪಾದನೆ ಹೊತ್ತಿರುವವರನ್ನು ಸರ್ಕಾರದಲ್ಲಿರುವ ಪ್ರಭಾವಿಗಳು ರಕ್ಷಿಸುತ್ತಿದ್ದಾರೆ ಎಂಬ ದೃಶ್ಯ ಮಾಧ್ಯಮಗಳ ಸುದ್ದಿ ನಿಜವಾಗಿದ್ದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿರುವ ನೈತಿಕತೆ ಕಳಕೊಂಡಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ.ಶಂಭು ಶೆಟ್ಟಿ ಹೇಳಿದ್ದಾರೆ.
ಪಿಎಸ್‍ಐ ಅಕ್ರಮ ನೇಮಕಾತಿ ಹಗರಣದ ಸತ್ಯಾಂಶಗಳನ್ನು ಸಿಐಡಿ ತಂಡ ಒಂದೊಂದಾಗಿ ಬೇಧಿಸುತ್ತಿದ್ದು, ದಿನಂಪ್ರತಿ ಹೊಸ ಹೊಸ ಹಗರಣ ಬೆಳಕಿಗೆ ಬರುತ್ತಿದೆ. ಮುಖ್ಯವಾಗಿ ಸರಕಾರದಲ್ಲಿರುವ ಪ್ರಭಾವಿ ಸಚಿವರೊಬ್ಬರ ಖಾಸಾ ಸಂಬಂಧಿಯೊಬ್ಬರು ಈ ಹಗರಣದಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ ಎಂಬ ದೃಶ್ಯ ಮಾಧ್ಯಮಗಳ ವರದಿಗಳು ಹಗರಣಕ್ಕೆ ಮತ್ತಷ್ಟು ಪ್ರಾಮುಖ್ಯತೆ ತಂದುಕೊಟ್ಟಿದೆ. ಈ ಪ್ರಭಾವಿ ಸಚಿವರು ತನ್ನ ಸಂಬಂಧಿಯನ್ನು ವಿಚಾರಣೆ ಮಾಡದಂತೆ ಸಿಐಡಿ ತಂಡಕ್ಕೆ ಒತ್ತಡ ಹಾಕುತ್ತಿದ್ದಾರೆ ಎಂಬ ಸುದ್ದಿ ದಿನವಿಡೀ ದೃಶ್ಯ ಮಾಧ್ಯಮದಲ್ಲಿ ಪ್ರಸಾರಗೊಳ್ಳುತ್ತಿದ್ದು, ಇದನ್ನು ಜನಸಾಮಾನ್ಯರು ನಂಬಲೇಬೇಕಾಗಿದೆ. ಒಂದು ವೇಳೆ ದೃಶ್ಯಮಾಧ್ಯಮಗಳು ಸುಳ್ಳು ಸುದ್ದಿ ಹರಡುತ್ತಿದ್ದರೆ ಸರಕಾರ ಇದರ ವಿರುದ್ಧ ಕ್ರಮಕೈಗೊಳ್ಳುತ್ತಿತ್ತು. ಆದರೆ ಇದಾವುದೂ ನಡೆಯದಿರುವ ಕಾರಣ ದೃಶ್ಯ ಮಾಧ್ಯಮದ ಸುದ್ದಿ ನಿಜವೆಂದು ನಾಡಿನ ಜನತೆ ನಂಬಿದ್ದಾರೆ ಎಂದಿದ್ದಾರೆ.
ಸರಕಾರದ ವ್ಯಕ್ತಿಗಳು ಈ ಹಗರಣದಲ್ಲಿ ಭಾಗಿಯಾಗಿದ್ದರೆ ಅಂಥವರನ್ನು ಕೂಡಲೇ ಸರಕಾರದಿಂದ ಕಿತ್ತೊಗೆದು, ಸಿಐಡಿ ತಂಡಕ್ಕೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಲು ಸರಕಾರ ಅನುವು ಮಾಡಿಕೊಡಬೇಕೆಂದು ಅವರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.