ಶಿರಸಿ : ಬೇಡ್ತಿ-ವರದಾ ನದಿ ಜೋಡಣೆ ಯೋಜನೆ ಅವೈಜ್ಞಾನಿಕ, ಅವ್ಯವಹಾರಿಕ.ಬೇಡ್ತಿ ಪ್ರದೇಶದ ರೈತರು, ವನವಾಸಿಗಳ ಬದುಕಿಗೆ ಮಾರಕವಾಗಲಿದೆ. ಈ ಯೋಜನೆ ಕೈಗೆತ್ತಿಕೊಳ್ಳಬಾರದು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಎಂದು ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಹೇಳಿದರು.
2021 ರ ಆರಂಭದಲ್ಲಿ ರಾಜ್ಯ ಸರ್ಕಾರ ಬೇಡ್ತಿ-ವರದಾ ನದೀ ಜೋಡಣೆ ಯೋಜನೆಯ ವಿವರ ಯೋಜನಾ ವರದಿ ಸಿದ್ಧಪಡಿಸಲು ಕೇಂದ್ರ ಸರ್ಕಾರದ ರಾಷ್ಟ್ರೀಯ ಜಲ ಅಭಿವೃದ್ಧಿ (NWDA) ಸಂಸ್ಥೆಗೆ ಒಪ್ಪಿಸಿತ್ತು. ಇದಕ್ಕೆ ಉ.ಕ. ಜಿಲ್ಲೆಯ ಜನತೆ ವಿರೋಧ ವ್ಯಕ್ತ ಪಡಿಸಿದ್ದರೂ ರಾಜ್ಯ ಸರ್ಕಾರ ಬೇಡ್ತಿ-ವರದಾ ಡಿಪಿಆರ್ ತಯಾರಿ ಆದೇಶ ಹಿಂಪಡೆದಿರಲಿಲ್ಲ. ಇದೀಗ ಡಿಪಿಆರ್ ಸಿದ್ಧವಾಗಿದ್ದು, ಡಿಪಿಆರ್ ಕೇಂದ್ರ ಸರ್ಕಾರದಿಂದ ರಾಜ್ಯ ನೀರಾವರಿ ಇಲಾಖೆ ಕೈ ಸೇರಿದೆ. ವಿವರ ಯೋಜನಾ ವರದಿಯಲ್ಲಿ ಪಟ್ಟಣದ ಹೊಳೆ, ಶಾಲ್ಮಲಾ, ಬೇಡ್ತಿ ನದಿಗಳನ್ನು ತಿರುಗಿಸುವ ಪ್ರಸ್ತಾಪ ಇದ್ದು,ಶಾಲ್ಮಲಾ-ವರದಾ ಹಾಗೂ ಬೇಡ್ತಿ-ಧರ್ಮಾ ನದೀ ಜೋಡಣೆ ಬಗ್ಗೆ ಪ್ರಸ್ತಾಪ ಮಾಡಲಾಗಿದೆ.
ರಾಜ್ಯ ನೀರಾವರಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಯನ್ನು ಏ.28 ರಂದು ವೃಕ್ಷ ಕಾರ್ಯಕರ್ತರ ತಂಡ ಭೇಟಿ ಮಾಡಿದ್ದು, ಬೇಡ್ತಿ-ವರದಾ ನದೀ ಜೋಡಣೆ ಯೋಜನೆ ನದಿ ಕಣಿವೆಗಳ ನಾಶವಾಗಿ,ಭೂಕುಸಿತವಾಗಲಿದೆ. ಈ ಯೋಜನೆ ಕೈಗೆತ್ತಿಕೊಳ್ಳಬಾರದು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದೇವೆ.
ಬೇಡ್ತಿ-ಅಘನಾಶಿನಿಕೊಳ್ಳ ಸಂರಕ್ಷಣಾ ಸಮಿತಿಯ ಮುಖ್ಯಸ್ಥರಾದ ಪೂಜ್ಯ ಸ್ವರ್ಣವಲ್ಲೀ ಶ್ರೀಗಳಿಗೆ ಈ ಬೆಳವಣಿಗೆ ಬಗ್ಗೆ ಮಾಹಿತಿ ನೀಡಲಾಗಿದೆ. ಸದ್ಯವೇ ಸಮಿತಿ ಸಭೆ ಕರೆಯಲು ಪೂಜ್ಯ ಸ್ವಾಮೀಜಿ ಅವರು ಸೂಚನೆ ನೀಡಿದ್ದಾರೆ. ಅಲ್ಲಿ ಮುಂದಿನ ಹೋರಾಟದ ಸ್ವರೂಪ ನಿರ್ಧಾರವಾಗಲಿದೆ ಎಂದು ಅಶೀಸರ ತಿಳಿಸಿದ್ದಾರೆ.
2021 ರ ಮಾರ್ಚನಲ್ಲೇ ಶಿರಸಿಯಲ್ಲಿ ಸಮಾವೇಶ ನಡೆಸಿ ಬೇಡ್ತಿ-ವರದಾ ಯೋಜನೆ ಬಗ್ಗೆ ವಿಮರ್ಶೆ ನಡೆಸಲಾಗಿತ್ತು. ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲಾಗಿತ್ತು. ಜನತೆ ಹಾಗೂ ಪರಿಸರಕ್ಕೆ ಭಾರೀ ಅನಾಹುತ ಮಾಡುವ ಈ ಯೋಜನೆ ಕೈ ಬಿಡಬೇಕು ಎಂದು ವಿಜ್ಞಾನಿಗಳು, ರೈತರ ಸಮಾವೇಶ ಸರ್ಕಾರವನ್ನು ಒತ್ತಾಯಿಸಿತ್ತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.
ಡಿಪಿಆರ್ ನ ಮುಖ್ಯಾಂಶಗಳು :- ಶಿರಲೇಬೈಲ್ ಎಂಬಲ್ಲಿ ಪಟ್ಟಣದ ಹೊಳೆಯಿಂದ, ಹುಳಗೋಳ ಸಮೀಪ ಶಾಲ್ಮಲಾ ನದಿಯಿಂದ ಯಲ್ಲಾಪುರದ ಬೇಡ್ತಿ ಸೇತುವೆ ಸಮೀಪ ಸುರೆಮನೆ ಎಂಬಲ್ಲಿ ಬೇಡ್ತಿ ನದಿಯಿಂದ ನೀರು ಸಾಗಿಸುವ ಯೋಜನೆಗಳ ಪ್ರಸ್ತಾಪ ಇದೆ. ಒಟ್ಟೂ 524 ಎಂ.ಸಿ.ಎಮ್. (ಮಿಲಿಯನ್ ಕ್ಯುಬಿಕ್ ಮೀಟರ್) ಅಥವಾ ಸುಮಾರು 22 ಟಿಎಂಸಿ ನೀರನ್ನು ಶಾಲ್ಮಲಾ & ಬೇಡ್ತಿಯಿಂದ ಸಾಗಿಸಲು ಡಿಪಿಆರ್ ಯೋಜನೆ ಉದ್ದೇಶಿಸಿದೆ. (ಪಟ್ಟಣದ ಹೊಳೆ ಶಾಲ್ಮಲಾದಿಂದ 302 ಎಮ್.ಸಿ.ಎಂ. ಹಾಗೂ ಬೇಡ್ತಿಯಿಂದ 222 ಎಂ.ಸಿಎಮ್.)
⦁ 3ನದಿಗಳಿಂದ ನೀರನ್ನು (ಬೃಹತ್ ಜಲಸಂಗ್ರಹಾಗಾರಗಳಿಗೆ) ಮೇಲೆತ್ತಲು 400 ಮೆಗಾವ್ಯಾಟ್ ವಿದ್ಯುತ್ ಬೇಕಾಗುತ್ತದೆ.
⦁ 145 ಮೀಟರ್ ಉದ್ದದ ಅಡ್ಡ ಕಟ್ಟೆಯನ್ನು ಪಟ್ಟಣದ ಹೊಳೆಗೆ ನಿರ್ಮಿಸಲಾಗುತ್ತದೆ. 202 ಮೀಟರ್ ಉದ್ದದ ಆಣೆಕಟ್ಟೆಯನ್ನು ಶಾಲ್ಮಲಾ ನದಿಗೆ ಹಾಕಲಾಗುತ್ತದೆ. ಶಾಲ್ಮಲಾ-ವರದಾ ಯೋಜನೆಯಲ್ಲಿ ನೀರು ಸಾಗಿಸಲು ಟನೆಲ್, ಚಾನೆಲ್‍ಗಳನ್ನು ನಿರ್ಮಿಸಲಾಗುತ್ತದೆ. ಇವುಗಳ ಒಟ್ಟೂ ಉದ್ದ 24 ಕಿ.ಮೀ.
⦁ ಬೇಡ್ತಿ ನದೀಗೆ 165 ಮೀಟರ್ ಉದ್ದದ ಆಣೆಕಟ್ಟೆ ಸುರಮನೆ ಎಂಬಲ್ಲಿ ಹಾಕಲಾಗುತ್ತದೆ. ಬೇಡ್ತಿಯಿಂದ ಧರ್ಮಾ ಜಲಾಶಯದವರೆಗೆ 28ಕಿ.ಮೀ ಉದ್ದದ ಟನೆಲ್ ನಿರ್ಮಿಸಲಾಗುತ್ತದೆ.
⦁ ಬೇಡ್ತಿ- ವರದಾ ನದೀ ಜೋಡಣೆ ಯೋಜನೆಯ ಅಂದಾಜು ವೆಚ್ಚ 2194 ಕೋಟಿ ರೂಪಾಯಿ ಎಂದು ವರದಿಯಲ್ಲಿ ಹೇಳಲಾಗಿದೆ.
⦁ ಸುಮಾರು 608 ಎಕರೆ ಅರಣ್ಯ ನಾಶವಾಗಲಿದೆ ಎಂದು ಡಿಪಿಆರ್ ಹೇಳಿದೆ. ಶಾಲ್ಮಲಾ ನದಿ ಸಂರಕ್ಷಿತ ಪ್ರದೇಶ & ಬೇಡ್ತಿ ಕಣಿವೆ ಸಂರಕ್ಷಿತ ಪ್ರದೇಶ ಬೇಡ್ತಿ-ವರದಾ ಯೋಜನಾ ಪ್ರದೇಶದ ವ್ಯಾಪ್ತಿಯಲ್ಲಿದೆ. ಎಂಬ ವನ್ಯ ಜೀವಿಕಾಯಿದೆ ಅಂಶವನ್ನು ಡಿಪಿಆರ್ ನಲ್ಲಿ ಉಲ್ಲೇಖಿಸಲಾಗಿದೆ.
⦁ ಯೋಜನಾ ಪ್ರದೇಶದ ವಿವರ ಸಮೀಕ್ಷೆ, ಸರ್ವೆ, ಡ್ರಿಲ್ಲಿಂಗ್, ನಿರ್ಮಾಣ ಸ್ಥಳಗಳ ಭೂಗರ್ಭ ಪರೀಕ್ಷೆ,ಸಾಮಾಜಿಕ ಆರ್ಥಿಕ, ಪರಿಸರ ಪರಿಣಾಮ ಅಧ್ಯಯನಗಳು, ಭೂಕಂಪ ವಲಯ ಪರೀಕ್ಷೆ, ಇತ್ಯಾದಿ ಸ್ಥಳ ಸಮೀಕ್ಷೆಗಳನ್ನು ನಡೆಸಲಾಗಿಲ್ಲ. ಬೇಡ್ತಿ ಪ್ರದೇಶದ ಜನರ ವಿರೋಧದಿಂದ ಸಮೀಕ್ಷೆ ನಡೆಸಲು ಸಾಧ್ಯವಾಗಿಲ್ಲ, ಎಂಬ ಸಂಗತಿಯನ್ನು ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ ವಿವರ ಯೋಜನಾ ವರದಿಯಲ್ಲಿ ಎತ್ತಿ ಹೇಳಿದೆ.