ಶಿರಸಿ:ತಾಲೂಕಿನ ಬನವಾಸಿಯಲ್ಲಿ ಈ ಹಿಂದೆ ವಲಯ ಅರಣ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸಿ ಈಗ ಯಲ್ಲಾಪುರ ವಿಭಾಗದಲ್ಲಿ ಅರಣ್ಯ ಉಪ ಸಂರಕ್ಷಣಾಧಿಕಾರಿಯಾಗಿದ್ದ ಗೋಪಾಲಕೃಷ್ಣ ಹೆಗಡೆಯವರ ಬೀಳ್ಕೊಡುಗೆ ಸಮಾರಂಭವನ್ನು ಯಲ್ಲಾಪುರ ಅರಣ್ಯ ಕಛೇರಿಯಲ್ಲಿ ನಡೆಸಲಾಯಿತು. ಸಿದ್ದಾಪುರ ತಾಲೂಕಿನ ಹಾಣಜೀಬೈಲ ನಿವಾಸಿಗಳಾದ ಇವರು ಮಂಚಿಕೇರಿ ಸೇರಿದಂತೆ ಜಿಲ್ಲೆಯ ಅನೇಕ ಕಡೆ ಸೇವೆಯನ್ನು ಸಲ್ಲಿಸಿದ್ದು ಏ. ೩೦ರಂದು ತಮ್ಮ ಸೇವೆಯಿಂದ ನಿವೃತ್ತಿಗೊಂಡರು.
ಬೀಳ್ಕೊಡುಗೆ ಸಮಾರಂಭಕ್ಕೆ ಬನವಾಸಿ ಮತ್ತು ಶಿರಸಿಯಿಂದ ಹಲವಾರು ಸಂಖ್ಯೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಪಾಲ್ಗೊಂಡು ಅವರು ಕರ್ತವ್ಯ ನಿರ್ವಹಿಸಿದ ಕುರಿತು ಮತ್ತು ಅವರೊಂದಿಗೆ ಸೇವೆ ಸಲ್ಲಿಸಿದ ಅನುಭವವನ್ನು ಹಂಚಿಕೊಂಡರು.
ಜಿಲ್ಲಾ ಮರಾಠ ಸಮಾಜ ಮುಖಂಡ ಪಾಂಡುರಂಗ ವಿ. ಪಾಟೀಲ್, ಗೋಪಾಲಕೃಷ್ಣ ಹೆಗಡೆಯವರು ಮರಗಳ್ಳರಿಗೆ ಆಸ್ಪದ ನೀಡದೇ ಯಾವುದೇ ಹೊಂದಾಣಿಕೆ ಇಲ್ಲದೇ ಎಂತಹ ಒತ್ತಡ ಇದ್ದರೂ ಸಹ ಅದಕ್ಕೆ ಜಗ್ಗದೇ ಕರ್ತವ್ಯ ನಿರ್ವಹಿಸಿದ್ದನ್ನು ಪ್ರಶಂಸಿಸಿದರು. ಜನರ ಸಹಕಾರದಿಂದಲೇ ಅರಣ್ಯ ಒತ್ತುವರಿಯನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗಿದ್ದರು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಅರಣ್ಯಾಧಿಕಾರಿಗಳಾದ ಎಮ್. ಬಾಲಸುಬ್ರಹ್ಮಣ್ಯ, ಎಸ್. ಎಲ್. ನದಾಪ್, ಪ್ರಸಾದ ಪೇಟ್ನೇಕರ, ಸುರೇಶ ಕಲ್ಲೊಳ್ಳಿ, ಅಜೇಯ ನಾಯಕ ಮುಂತಾದವರು ಉಪಸ್ಥಿತರಿದ್ದರು.