ಶಿರಸಿ: ಸಹರಾ ಕ್ರೆಡಿಟ್ ಕೋ-ಆಪ್ ಸೊಸೈಟಿಯ ಆರ್‌ಡಿ ಖಾತೆಗೆ ಏಜೆಂಟ್ ಆಗಿದ್ದ ವ್ಯಕ್ತಿಯೋರ್ವ ಖಾತೆಗೆ 22 ಸಾವಿರ ರೂ. ಹಣ ತುಂಬದೆ ನಂಬಿಕೆ ದ್ರೋಹ ಮಾಡಿದ್ದಾನೆಂದು ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಶಿರಸಿಯ ಅಜಿತ್ ಶ್ರೀಕಾಂತ ನಾಡಿಗ್ ಆರೋಪಿಯಾಗಿದ್ದು, ಗಣೇಶನಗರ ಪುಟ್ಟನಮನೆಯ ಪ್ರವೀಣಕುಮಾರ ತೊಂಡೆಕೆರೆ ದೂರು ನೀಡಿದ್ದಾರೆ. ಸಹರಾ ಕ್ರೆಡಿಟ್ ಕೋ ಆಪ್. ಸೊಸೈಟಿಯಲ್ಲಿ ಆರ್‌ಡಿ ಖಾತೆ ಹೊಂದಿದ್ದ ಪ್ರವೀಣಕುಮಾರ ಈ ಸೊಸೈಟಿಯ ಆರ್‌ಡಿ ಖಾತೆಯ ಏಜೆಂಟ್, ಅಜಿತ್ ನಾಡಿಗ್ ಹತ್ತಿರ ಪ್ರತಿ ತಿಂಗಳು 1000 ರೂ. ಜಮಾ ಮಾಡುತ್ತಿದ್ದರು.
ಜಮಾ ಮಾಡುತ್ತಿದ್ದ ಹಣವನ್ನು ಅಜಿತ್ ನಾಡಿಗ್ ಹೇಳಿದಂತೆ ಗೂಗಲ್ ಪೇ ಮೂಲಕ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಖಾತೆಗೆ ಜಮಾ ಮಾಡುತ್ತಿದ್ದರು. ಹೀಗೆ ಮೂವತ್ತು ಕಂತುಗಳ 30 ಸಾವಿರ ರೂ. ಆರ್‌ಡಿ ಹಣವನ್ನು ಅಜಿತ್ ನಾಡಿಗ್ ಖಾತೆಗೆ ಜಮಾ ಮಾಡಿದ್ದರು.
ಆದರೆ, ಅಜಿತ್ ನಾಡಿಗ್ ಕೇವಲ 8 ಸಾವಿರ ಹಣವನ್ನು ಮಾತ್ರ ಸಹರಾ ಕೋ ಆಪ್ ಸೊಸೈಟಿಯಲ್ಲಿರುವ ಪ್ರವೀಣಕುಮಾರ ಆರ್‌ಡಿ ಖಾತೆಗೆ ಜಮಾ ಮಾಡಿ ಉಳಿದ ಹಣವನ್ನು ತುಂಬದೆ ಮೋಸ ಮಾಡಿದ್ದಾನೆಂದು ಪ್ರವೀಣಕುಮಾರ ಪೊಲೀಸರಿಗೆ ನೀಡಿದ ದೂರಿನಲ್ಲಿ ನಮೂದಿಸಿದ್ದಾರೆ. ಮಾರುಕಟ್ಟೆ ಠಾಣೆಯಲ್ಲಿ ದೂರು ದಾಖಲಾಗಿದೆ.