ಸಿದ್ದಾಪುರ: ನಾಮಧಾರಿ ಕುಲಗುರುಗಳಾದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ತಾಲೂಕಾ ನಾಮಧಾರಿ ಅಭಿವೃದ್ಧಿ ಸಂಘದ ಪದಾಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದಾರೆ.
ಬ್ರಹ್ಮಾನಂದ ಸರಸ್ವತಿ ಸಗ್ವಾಮೀಜಿಗಳು ಏ.25ರಂದು ತಾಲೂಕಿನ ಹರಕನಳ್ಳಿಯ ಶ್ರೀವೀರಭದ್ರೇಶ್ವರ ದೇವಸ್ಥಾನದ ಧರ್ಮಸಭೆಯಲ್ಲಿ ಮಾತನಾಡಿದ್ದ ಹೇಳಿಕೆಯೊಂದನ್ನು ತಪ್ಪಾಗಿ ಅರ್ಥೈಸಿಕೊಂಡು ‘ಭಾರತ ಭಾಗ್ಯವಿದಾತ ಅಂಬೇಡ್ಕರ್’ ಎನ್ನುವ ಫೇಸ್ಬುಕ್ ಪೇಜ್ನಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಲಾಗಿದೆ. ಈ ಕೂಡಲೇ ಸೈಬರ್ ಕ್ರೈಂ ಕಾಯ್ದೆಯಡಿ ದೂರು ದಾಖಲಿಸಿಕೊಂಡು ಫೇಸ್ಬುಕ್ನಲ್ಲಿ ಸ್ವಾಮೀಜಿಗಳ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದವರನ್ನು ಪತ್ತೆ ಮಾಡಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿ ಆಗ್ರಹಿಸಿದ್ದಾರೆ.
ಈ ವೇಳೆ ನಾಮಾಧಿಕಾರಿ ಸಂಘದ ತಾಲೂಕು ಅಧ್ಯಕ್ಷ ಕೆ.ಜಿ.ನಾಯ್ಕ, ಕಾರ್ಯದರ್ಶಿ ಎಸ್.ಎಲ್.ನಾಯ್ಕ, ಶ್ರೀರಾಮ ಕ್ಷೇತ್ರ ಸೇವಾ ಸಮಿತಿ ಅಧ್ಯಕ್ಷ ವಿ.ಎನ್.ನಾಯ್ಕ, ಬಿಎಸ್ಎನ್ಡಿಪಿ ತಾಲೂಕಾಧ್ಯಕ್ಷ ವಿನಾಯಕ, ಪ್ರಮುಖರಾದ ಪ್ರವೀಣ್, ಶಂಕರಮೂರ್ತಿ ನಾಯ್ಕ ಕತ್ತಿ ಮೊದಲಾದವರು ಇದ್ದರು.