ಸಿದ್ದಾಪುರ: ಅತಿಕ್ರಮಣ ಜಾಗದಲ್ಲಿ ಮನೆ ಕಟ್ಟಿ, ನೋಂದಣಿ ಸಂಖ್ಯೆ ಹೊಂದಿರುವ ಬಡ ಕುಟುಂಬಗಳಿಗೆ ವಸತಿ ಕಟ್ಟಿಕೊಳ್ಳುವ ಆದೇಶ ಪತ್ರ ನೀಡಲಾಗುತ್ತಿದ್ದು, ಈ ಬಾರಿ ತಾಲೂಕಿಗೆ 700 ಫಲಾನುಭವಿಗಳಿಗೆ ಸಹಾಯಧನ ದೊರೆಯಲಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಅವರು ಪಟ್ಟಣದ ರಾಘವೇಂದ್ರ ಮಠದ ಸಭಾಭವನದಲ್ಲಿ ತಾಲೂಕಿನ 23 ಗ್ರಾ.ಪಂ.ಗಳ ಸಹಯೋಗದಲ್ಲಿ ಆಯೋಜಿಸಿದ್ದ ವಸತಿ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಆದೇಶ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅತಿಕ್ರಮಣ ಜಾಗದಲ್ಲಿ ಮನೆ ಕಟ್ಟಿಕೊಂಡ ಬಡವರಿಗೆ ಮನೆ ನಂಬರ್ ಇದ್ದರೂ ಯಾವುದೇ ಸೌಲಭ್ಯ ದೊರೆಯುತ್ತಿರಲಿಲ್ಲ. ಅವರಿಗೆ ಸಮರ್ಪಕ ವಸತಿ ಕಟ್ಟಿಕೊಳ್ಳಲು ಸಾಧ್ಯವಾಗಬೇಕು ಎನ್ನುವ ನಿಟ್ಟಿನಲ್ಲಿ ಹಿಂದಿನಿಂದ ಪ್ರಯತ್ನ ಮಾಡುತ್ತ ಬಂದಿದ್ದರೂ ವಿಳಂಬವಾಯಿತು. ಆದರೆ ವಸತಿ ಸಚಿವರ ಹಾಗೂ ಸಂಬಂಧಿಸಿದ ಅಧಿಕಾರಿಗಳ ಜೊತೆ ಹಲವು ಬಾರಿ ಸಭೆ ನಡೆಸಿ, ಕಾನೂನು ತಿದ್ದುಪಡಿ ಮಾಡಿಸಿ ಈ ಸೌಲಭ್ಯ ಒದಗಿಸಲಾಗುತ್ತಿದೆ. ಇದು ನನ್ನ ಜೀವನದಲ್ಲಿ ಸಾರ್ಥಕವಾದ ಕಾರ್ಯಗಳಲ್ಲೊಂದು ಎಂದರು.
ಈಗ 364 ಫಲಾನುಭವಿಗಳಿಗೆ ಆದೇಶಪತ್ರ ನೀಡುತ್ತಿದ್ದು, ಉಳಿದವರಿಗೆ ಸದ್ಯದಲ್ಲೇ ಆದೇಶಪತ್ರ ನೀಡಲಾಗುತ್ತದೆ. ಪ್ರತಿ ಫಲಾನುಭವಿಗಳಿಗೂ 1 ಲಕ್ಷ 20 ಸಾವಿರ ರೂ.ಸಹಾಯಧನ ಮತ್ತು ಉದ್ಯೋಗಖಾತ್ರಿ ಯೋಜನೆ ಮೂಲಕ 28 ಸಾವಿರ ರೂ. 4 ಕಂತುಗಳಲ್ಲಿ ದೊರೆಯುತ್ತದೆ. ಪರಿಶಿಷ್ಠ ಜಾತಿ,ಪಂಗಡದವರಿಗೆ 1.75 ಲಕ್ಷ ಹಾಗೂ ಉದ್ಯೋಗ ಖಾತ್ರಿ ಯೋಜನೆ ಮೂಲಕ 28 ಸಾವಿರ ರೂ. ದೊರೆಯುತ್ತದೆ. ಜೀವನದಲ್ಲಿ ಒಮ್ಮೆ ಮಾತ್ರ ಉತ್ತಮ ಮನೆಯನ್ನು ಕಟ್ಟಿಕೊಳ್ಳುವ ಅವಕಾಶ ದೊರೆಯುತ್ತದೆ. ಹಾಗಾಗಿ ಅದನ್ನು ಸಮರ್ಪಕವಾಗಿ ಕಟ್ಟಿಕೊಳ್ಳಿ. ನೀವು ಮಾತ್ರ ಅಲ್ಲ,ಮುಂದಿನ ಪೀಳಿಗೆಗೂ ಅದರ ಉಪಯೋಗ ಪಡೆದುಕೊಳ್ಳುವಂತಿರಲಿ ಎಂದು ಅವರು ಹೇಳಿದರು.
ತಾಲೂಕಿನಲ್ಲಿ ಹಿಂದೆಂದೂ ಕಾಣದಂಥ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಗ್ರಾಮೀಣ ಭಾಗದ ರಸ್ತೆ, ಸೇತುವೆಗಳಿಗೆ 98 ಕೋಟಿ ರೂ. ಮಂಜೂರಾಗಿದ್ದು ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಇನ್ನೂ ಕಾರ್ಯಗತಗೊಳ್ಳಲಿದೆ. ಆದರೆ ಕೆಲವರು ಅಭಿವೃದ್ಧಿಯೇ ಆಗಿಲ್ಲ ಎನ್ನುವ ಅಪಸ್ವರ ತೆಗೆಯುತ್ತಾರೆ. ಅವರಿಗೆ ದೃಷ್ಟದೋಷ ಇರಬಹುದು ಅಥವಾ ರಾಜಕಾರಣಕ್ಕೆ ಹೇಳಬಹುದು ಮಾತ್ರ. ತಾಲೂಕಿನಲ್ಲಿ ಎಲ್ಲರೂ ಬೇಧ ಭಾವವಿಲ್ಲದೇ ಸೌಹಾರ್ದಯುತವಾಗಿ ಬದುಕುವಂತಾಗಬೇಕು. ಮೊದಲಿನಂತೆ ಈಗ ಗೂಂಡಾಗಿರಿ, ಕ್ಷುಲ್ಲಕ ರಾಜಕಾರಣ ನಡೆಯೋದಿಲ್ಲ. ತಮ್ಮ ರಾಜಕೀಯಕ್ಕೆ ಊರಿನ ಶಾಂತಿ,ಒಗ್ಗಟ್ಟು ಹಾಳುಮಾಡುವವರಿಗೆ ಅವಕಾಶ ನೀಡಬೇಡಿ ಎಂದು ಕಾಗೇರಿ ಹೇಳಿದರು.
ತಾಲೂಕಿನ ಎಲ್ಲ ಗ್ರಾಮ ಪಂಚಾಯತ್‍ಗಳ ವತಿಯಿಂದ ವಿಶ್ವೇಶ್ವರ ಹೆಗಡೆ ಕಾಗೇರಿಯವರನ್ನು ಸನ್ಮಾನಿಸಲಾಯಿತು ತಾ.ಪಂ ಇಓ ಪ್ರಶಾಂತರಾವ್ ಸ್ವಾಗತಿಸಿದರು. ಈಶ್ವರ ರಾಗಿಹೊಸಳ್ಳಿ ನಿರೂಪಿಸಿದರು. ತಾಲೂಕಿನ ವಿವಿಧ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಇದ್ದರು.