ಶಿರಸಿ: ಕಳೆದ 36ವರ್ಷಗಳ ಕಾಲ ಪದವಿಪೂರ್ವ ಕಾಲೇಜು ಉಪನ್ಯಾಸಕರಾಗಿ, ಪ್ರಾಚಾರ್ಯರಾಗಿ ಹಾಗೂ ಪ್ರಭಾರ ಡಿಡಿಪಿಯು ಆಗಿ ಕಾರ್ಯನಿರ್ವಹಿಸಿ ಸೇವಾ ನಿವೃತ್ತರಾದ ಕೊಳಗಿಬೀಸ್‍ನ ಮಾಬ್ಲೇಶ್ವರ ಹೆಗಡೆ ನೇರ್ಲಹದ್ದ ಸರಕಾರಿ ಪದವಿಪೂರ್ವ ಕಾಲೇಜಿನ ಪಾಚಾರ್ಯ ಆರ್.ಜಿ.ಭಟ್ಟ ಅವರನ್ನು ಶನಿವಾರ ಹೃದಯಸ್ಪರ್ಶಿಯಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು.
ಕೊಳಗಿಬೀಸ್‍ನ ಕಾಲೇಜಿನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಆರ್.ಜಿ.ಭಟ್ಟ ಮತ್ತು ಪತ್ನಿ ಕಲಾವತಿ ಭಟ್ಟ ಅವರನ್ನು ಕಾಲೇಜು ಅಭಿವೃದ್ದಿ ಸಮಿತಿಯವರು, ಉಪನ್ಯಾಸಕರು ಶಾಲು ಹೊದೆಸಿ, ಸ್ಮರಣಿಕೆ ನೀಡಿ ಗೌರವಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಆರ್.ಜಿ.ಭಟ್ಟ, ಬಡತನ ಕಾಲದಲ್ಲಿ ಶಿಕ್ಷಣ ಪಡೆದು ಈ ಹಂತಕ್ಕೆ ಬರಲು ಸಾಕಷ್ಟು ಮಂದಿ ಹಿರಿಯರು ನೀಡಿದ ಸಹಕಾರವನ್ನು ಸ್ಮರಿಸಿದರು. ಸೇವೆ ನಿಸ್ವಾರ್ಥವಾಗಿರಬೇಕು, ಫಲಾಫೇಕ್ಷೆ ಇರಬಾರದು, ಅದು ಸಮಾಜಮುಖಿಯಾಗಿರಬೇಕು. ನಾವು ಒಳ್ಳೆಯದನ್ನು ಮಾಡಿದರೆ, ಒಳ್ಳೆಯದನ್ನು ಬಯಸಿದರೆ ನಮಗೆ ಒಳ್ಳೆಯದೇ ಆಗುತ್ತದೆ. ಬೇರೆಯವರ ಬಗ್ಗೆ ಕೆಡುಕನ್ನು ಬಯಸಿದರೆ ನಮಗೆ ತಿರುಗುಬಾಣವಾಗುತ್ತದೆ ಎಂದರು.
ಉಪನ್ಯಾಸಕರಿಗೆ ಅರ್ಧಯಯನಶೀಲತೆ ಇರಬೇಕು. ಹೆಚ್ಚೆಚ್ಚು ಜ್ಞಾನ ಪಡೆದಷ್ಟು ಬೋಧನೆ ಸರಳವಾಗುತ್ತದೆ. ಕಲಿಕೆಯ ಮಕ್ಕಳ ಬಗ್ಗೆ ಕಾಳಜಿ ಇರಬೇಕು. ಕೆಲಸದಲ್ಲಿ ತನ್ಮಯತೆಯಿಂದ ತೊಡಗಿಕೊಳ್ಳಬೇಕು. ಆಗ ಆ ಕೆಲಸ ಅಚ್ಚುಕಟ್ಟಾಗಿ ಮಾಡಲು ಸಾಧ್ಯ ಎಂದರು.
ಉಪನ್ಯಾಸಕರಾದ ಎಂ.ಆರ್.ಶೇಖ್, ಎಸ್.ಎಸ್.ಹೆಗಡೆ, ಎಸ್.ಐ.ಹೆಗಡೆ, ವಿನೋದ ನಾಯ್ಕ, ಹರೀಶ, ಜಿ.ವಿ.ಹೆಗಡೆ, ಆದರ್ಶ ಎಂ.ಆರ್ ಮುಂತಾದವರು ಅನಿಸಿಕೆ ವ್ಯಕ್ತಪಡಿಸಿದರು. ಆರ್.ಜಿ.ಭಟ್ಟ ಅವರ ಶಿಸ್ತು, ಕ್ರಿಯಾಶೀಲತೆ, ಸಮಯ ಪ್ರಜ್ಞೆ, ಸೇವಾತತ್ಪರತೆ, ವಿದ್ಯಾರ್ಥಿಗಳ ಬಗೆಗಿನ ಕಾಳಜಿ, ಮಾನವೀಯತೆ, ಹೃದಯವೈಶಾಲ್ಯತೆ, ಪ್ರಾಮಾಣಿಕತೆಯ ಕಾರ್ಯವನ್ನು ಶ್ಲಾಘಿಸಿದರು. ವಿದ್ಯಾರ್ಥಿ ಪ್ರಥಮ ಸಹ ಅನಿಸಿಕೆ ವ್ಯಕ್ತಪಡಿಸಿದನು. ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಶ್ರೀಪಾದ ಭಟ್ಟ ಹೆಬ್ಬಲಸು ಅಧ್ಯಕ್ಷತೆ ವಹಿಸಿದ್ದರು. ಆರ್.ಜಿ.ಭಟ್ಟ ಅವರು ಕಾಲೇಜಿನ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಹಾಗೂ ಕಾಲೇಜಿನ ಅಭಿವೃದ್ಧಿಗೆ ನೀಡಿದ ಕೊಡುಗೆ, ಕಳಕಳಿಯನ್ನು ಸ್ಮರಿಸಿದರು. ಕಲಾವತಿ ಆರ್.ಭಟ್ಟ ಮಾತನಾಡಿದರು. ಸದಸ್ಯರಾದ ಸರ್ವೇಶ್ವರ ಹೆಗಡೆ, ವಿನಯ ಹೆಗಡೆ ಮುಂತಾದವರು ಉಪಸ್ಥಿತರಿದ್ದರು.
ಪ್ರಭಾರ ಪ್ರಾಚಾರ್ಯ ಎಂ.ಆರ್.ಶೇಖ್ ಸ್ವಾಗತಿಸಿದರು. ಉಪನ್ಯಾಸಕ ಜಿ.ವಿ.ಹೆಗಡೆ ನಿರೂಪಿಸಿದರು. ಉಪನ್ಯಾಸಕ ಆದರ್ಶ ಎಂ.ಆರ್ ವಂದಿಸಿದರು.
ಪ್ರಾಚಾರ್ಯ ಆರ್.ಜಿ.ಭಟ್ಟಗೆ ಹೃದಯಸ್ಪರ್ಶಿ ಬೀಳ್ಕೋಡುಗೆ
