ಕಾರವಾರ: ರಾಜ್ಯದಲ್ಲಿಯೇ ಮಾದರಿಯಾಗಿ ಕಾರವಾರ ನಗರಸಭೆ ಆವರಣದಲ್ಲಿ ವಿಶ್ರಾಂತಿ ಗೃಹ, ಪೌರಕಾರ್ಮಿಕರಿಗೆ ವಿಶ್ರಾಂತಿ ಕೊಠಡಿ, ವಿದ್ಯುತ್ ದೂರು ವಿಭಾಗ ಹಾಗೂ ಬ್ಯಾಂಕ್ ಶಾಖೆಯನ್ನು ತೆರೆಯಲಾಗಿದೆ. ನಾವು ಮಾಡಿದ ಅಭಿವೃದ್ಧಿ ಮುಂದಿನ ತಲೆಮಾರುಗಳಿಗೂ ಅನುಕೂಲವಾಗಬೇಕು ಎಂದು ಶಾಸಕಿ ರೂಪಾಲಿ ನಾಯ್ಕ ಹೇಳಿದರು.
ನಗರಸಭೆ ಆವರಣದಲ್ಲಿ ನಿರ್ಮಿಸಲಾದ ರಾತ್ರಿ ವಿಶ್ರಾಂತಿ ಗೃಹ, ಬ್ಯಾಂಕ್ ಶಾಖೆ, ವಿದ್ಯುತ್ ದೂರು ವಿಭಾಗ, ನಗರಸಭೆ ಸದಸ್ಯರ ಕೊಠಡಿ ಹಾಗೂ ಪೌರಕಾರ್ಮಿಕರ ವಿಶ್ರಾಂತಿ ಕೊಠಡಿಯನ್ನು ಉದ್ಘಾಟಿಸಿ ಅವರು ಮಾತನಾಡಿ, ನಗರದ ಸ್ವಚ್ಛತೆಗೆ ಎಲ್ಲರೂ ಪಣ ತೊಡಬೇಕು. ನಮ್ಮ ಕಾರವಾರ ಸುಂದರವಾಗಿಸಲು ಮರಗಿಡಗಳನ್ನು ಬೆಳೆಸಬೇಕು. ಕಾರವಾರ ನಗರವನ್ನು ಅಂದವಾಗಿಸಲು ವಿಧಾನ ಪರಿಷತ್ ಸದಸ್ಯರು, ನಗರಸಭೆ ಅಧ್ಯಕ್ಷರು, ಸದಸ್ಯರು ಪೌರಾಯುಕ್ತರು ಎಲ್ಲರೂ ಪ್ರಯತ್ನಿಸುತ್ತಿದ್ದು, ಸಾರ್ವಜನಿಕರ ಸಹಕಾರವೂ ಅಗತ್ಯವಾಗಿದೆ ಎಂದರು.
ನಗರದಲ್ಲಿ ಪಾರ್ಕಿಂಗ್ ಸಮಸ್ಯೆ ಕಾಡುತ್ತಿದ್ದು, ಅದಕ್ಕಾಗಿ ಹೊಸ ರೂಪವನ್ನು ನೀಡಲು ತಯಾರಿ ಹಾಗೂ ನೀಲನಕ್ಷೆಯನ್ನು ಮಾಡಲಾಗಿದೆ. ಎಲ್ಲರೂ ಇದನ್ನು ಪಾಲಿಸಬೇಕು. ಇದಕ್ಕೆ ನಮ್ಮ ಕಾರವಾರದ ಸಮಸ್ತ ನಾಗರಿಕರ ಸಹಕಾರ ಅಗತ್ಯವಾಗಿದೆ. ಬಿಣಗಾದಲ್ಲಿಯೂ ಒಂದು ಮಾರುಕಟ್ಟೆಯನ್ನು ಪ್ರಾರಂಭಿಸಿ ಅಲ್ಲಿಯ ಜನರಿಗೆ ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗುತ್ತಿದೆ. ಶೀಘ್ರದಲ್ಲಿ ಅದನ್ನು ಕಾರ್ಯರೂಪಕ್ಕೆ ತರಲು ಕ್ರಮಕೈಗೊಳ್ಳಲಾಗುವುದು. ಅಲ್ಲದೇ, ಬಿಣಗಾದ ಗುಡ್ಡಳ್ಳಿಗೆ ವಿದ್ಯುತ್ ಸಮಸ್ಯೆ ಇದ್ದು, ಪರಿಹರಿಸಲಾಗಿದೆ ಹಾಗೂ ರಸ್ತೆ ನಿರ್ಮಾಣವೂ ಮಾಡಲಾಗುತ್ತಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಮಾತನಾಡಿ, ನಗರಸಭೆ ಅಭಿವೃದ್ಧಿಯು ಒಬ್ಬರಿಂದ ಮಾತ್ರ ಸಾಧ್ಯವಿಲ್ಲ. ಆಯುಕ್ತರು, ಚುನಾಯಿತ ಸದಸ್ಯರು, ಸಿಬ್ಬಂದಿ ಹಾಗೂ ಶಾಸಕರ ಒಗ್ಗಟ್ಟಿನಿಂದ ಅಭಿವೃದ್ಧಿಯಾಗಿದೆ. ಈ ನಿಟ್ಟಿನಲ್ಲಿ ಪೌರಾಯುಕ್ತ ಆರ್.ಪಿ.ನಾಯ್ಕ ಅವರು ಉತ್ತಮ ರೀತಿಯ ಕಾರ್ಯ ನಿರ್ವಹಿಸಿದ್ದಾರೆ ಎಂದರು.
ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ ಮಾತನಾಡಿ, ಅಭಿವೃದ್ಧಿಯ ಲಾಭವನ್ನು ಪ್ರತಿಯೊಬ್ಬರೂ ಪಡೆಯಬೇಕು. ಸಾರ್ವಜನಿಕರು ಸರಿಯಾದ ಸಮಯದಲ್ಲಿ ತೆರಿಗೆ ಪಾವತಿಸಿದರೆ ಸರಕಾರದ ಇನ್ನಷ್ಟು ಯೋಜನೆಗಳು ಕಾರವಾರ ನಗರಕ್ಕೆ ಬರಲಿವೆ ಎಂದರು.
ಪೌರಾಯುಕ್ತ ಆರ್.ಪಿ.ನಾಯ್ಕ ಪ್ರಾಸ್ತಾವಿಕ ಮಾತನಾಡಿ, ನಗರದ ಆಭಿವೃದ್ಧಿಗೆ ನಗರಸಭೆಯ ಸದಸ್ಯರು, ಅಧಿಕಾರಿ ವರ್ಗದವರು, ಪೌರಕಾರ್ಮಿಕರು ಕೈ ಜೋಡಿಸಿದ್ದರಿಂದ ಉತ್ತಮ ಕಾರ್ಯ ಆಗಿದೆ. ಮುಂದಿನ ದಿನದಲ್ಲಿ ಜನರು ಸ್ವಚ್ಛತೆ ಬಗ್ಗೆ ಗಮನ ಹರಿಸಬೇಕು ಎಂದರು.
ನಗರಸಭೆ ಉಪಾಧ್ಯಕ್ಷ ಪಿ.ಪಿ.ನಾಯ್ಕ, ಸದಸ್ಯೆ ರೇಶ್ಮಾ ಮಾಳ್ಸೇಕರ್ ಮಾತನಾಡಿದರು. ಸ್ಥಾಯಿ ಸಮಿತಿ ಅಧ್ಯಕ್ಷೆ ಸುಜಾತಾ ತಾಮ್ಸೆ ವೇದಿಕೆಯಲ್ಲಿದ್ದರು. ಈ ಸಂದರ್ಭದಲ್ಲಿ ನಗರಸಭೆ ವತಿಯಿಂದ ಶಾಸಕಿ ರೂಪಾಲಿ ನಾಯ್ಕ, ಎಂಎಲ್ಸಿ ಗಣಪತಿ ಉಳ್ವೇಕರ್, ನಗರದ ಅಭಿವೃದ್ಧಿಗೆ 7.5 ಲಕ್ಷ ರೂ. ಮೌಲ್ಯದ ಲೈಟ್ ವ್ಯವಸ್ಥೆ ಕಲ್ಪಿಸಿದ ಮಾತೋಶ್ರೀ ಸರೋಜಾ ಬಾಳಾ ದೇಸಾಯಿ ಸಂಸ್ಥೆಯ ಅಧ್ಯಕ್ಷ ನರೇಂದ್ರ ದೇಸಾಯಿ, ವಿವಿಧ ಅಭಿವೃದ್ಧಿ ಕಾಮಗಾರಿ ಮಾಡಿದ ಗುತ್ತಿಗೆದಾರರಿಗೆ ಸನ್ಮಾನಿಸಲಾಯಿತು.
ಕೋಟ್:ನಗರದಲ್ಲಿ ಹೆಚ್ಚಾಗುತ್ತಿರುವ ಟ್ರಾಫಿಕ್ ಹಾಗೂ ಪಾರ್ಕಿಂಗ್ ಸಮಸ್ಯೆಯ ಬಗ್ಗೆ ಚರ್ಚಿಸುತ್ತಿದ್ದೇವೆ. ಶೀಘ್ರದಲ್ಲಿಯೇ ಪರಿಹಾರ ನೀಡುವ ಯೋಜನೆ ಜಾರಿಗೆ ಬರಲಿದೆ. ಶಾಲೆ- ಕಾಲೇಜು ಆರಂಭವಾಗುತ್ತವೆ. ಹೀಗಾಗಿ ಒನ್ ವೇ ಮಾದರಿಯಲ್ಲಿ ಟ್ರಾಫಿಕ್ ಸಮಸ್ಯೆಯನ್ನು ಪರಿಹರಿಸುತ್ತೇವೆ.–ರೂಪಾಲಿ ನಾಯ್ಕ, ಶಾಸಕಿ