• Slide
  Slide
  Slide
  previous arrow
  next arrow
 • ಇಸಳೂರಿನಲ್ಲಿ ಯಕ್ಷಭಿಮಾನಿಗಳ ಮನಗೆದ್ದ ‘ಗಾನ-ನೃತ್ಯ-ವೈಭವ’

  300x250 AD

  ಶಿರಸಿ: ತಾಲೂಕಿನ ಇಸಳೂರಿನ ಶ್ರೀನಿಕೇತನ ಶಾಲಾ ಆವಾರದಲ್ಲಿ ಸ್ಥಳೀಯ ಧರ್ಮೇಶ್ವರ ಸಾಂಸ್ಕೃತಿಕ ಕಲಾ ವೇದಿಕೆ ಸಂಘಟಿಸಿದ್ದ ‘ಗಾನ-ನೃತ್ಯ-ವೇದಿಕೆ’ ಕಾರ್ಯಕ್ರಮ ಕಿಕ್ಕಿರಿದು ಸೇರಿದ್ದ ಸಾವಿರಾರು ಯಕ್ಷಾಭಿಮಾನಿಗಳ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಗಿದೆ.

  ಯಕ್ಷಗಾನದ ಅನುಭವಿ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ನಡೆದ ಗಾನದಲ್ಲಿ ರಾಘವೇಂದ್ರ ಆಚಾರ್ಯ ಜನ್ಸಾಲೆ ಮತ್ತು ತೆಂಕು ಮಹಿಳಾ ಭಾಗವತಿಕೆ ಖ್ಯಾತಿಯ ಶ್ರೀಮತಿ ಕಾವ್ಯಶ್ರೀ ಗುರುಪ್ರಸಾದ ಆಜೇರುರವರು ಅನೇಕ ಪೌರಾಣಿಕ ಪ್ರಸಂಗಗಳನ್ನು ದ್ವಂದ್ವವಾಗಿ ಹಾಡಿದರು. ಗಾಯಕ ವಿದ್ಯಾಭೂಷಣರು ತಮ್ಮ ಗಾನ ವೈಖರಿಯಲ್ಲಿ ಹಾಡಿ ಜನಪ್ರಿಯಗೊಳಿಸಿದ ಅರ್ಥಪೂರ್ಣ ಸುಂದರ ಹಾಡು `ಎಷ್ಟು ಸಾಹಸವಂತಾ ನೀನೇ ಭಗವಂತಾ’ಎಂಬ ಹಾಡನ್ನು ಭಾಗವತರಿಬ್ಬರು ದ್ವಂದ್ವವಾಗಿ ಯಕ್ಷ ಶೈಲಿಯಲ್ಲಿ ಹಾಡುತ್ತಿರುವಾಗ ಹಾಡಿಗೆ, ವಾದನಗಳ ನಾದಕ್ಕೆ ತಕ್ಕಂತೆ ಅಮೋಘವಾಗಿ ಸರಿಸುಮಾರು ಮೂವತ್ತು ನಿಮಿಷಗಳಿಗೂ ಮಿಕ್ಕಿ ತಮ್ಮ ಅಭಿನಯ ಕಲಾ ಪ್ರದರ್ಶನ ನೀಡಿದವರು ಅಭಿನೇತ್ರಿ ಅರ್ಚನ ಮುಖ್ಯಸ್ಥ ನಿಲಕೋಡು ಶಂಕರ ಹೆಗಡೆ ಮತ್ತು ಯುವ ಪ್ರತಿಭೆ ಕಣ್ಣಿ ಕಾರ್ತಿಕ ಭಟ್ಟರವರು. ಪ್ರತಿ ಹಂತದ ಅಭಿನಯದಲ್ಲಿ ಸಭೆಯ ಕರತಾಡನ ಕಾರ್ಯಕ್ರಮದ ಯಶಸ್ಸನ್ನು ಸಾಕ್ಷಿಕರಿಸಿತು.

  ಆರಂಭಿಕವಾಗಿ ಭಾಗವತರಿಬ್ಬರು ಕೆಲವೊಂದು ಆಯ್ದ ಪೌರಾಣಿಕ ಪ್ರಸಂಗದ ಹಾಡುಗಳನ್ನು ವೈಯಕ್ತಿಕವಾಗಿ ಹಾಡುತ್ತಾ ಜನಾಪೇಕ್ಷೆಯ ಹಾಡುಗಳನ್ನು ಪ್ರಸ್ತುತಗೊಳಿಸಿದರು. ಹಂತ ಹಂತವಾಗಿ ಬೇರೆ ಬೇರೆ ಪ್ರಸಂಗದ ಹಾಡುಗಳಿಗೆ ನೃತ್ಯಾಭಿನಯದಲ್ಲಿ ಶಂಕರ ಹೆಗಡೆ ನಿಲ್ಕೋಡ ಸ್ತ್ರೀ ವೇಷದ ಪಾತ್ರಧಾರಿಯಾಗಿ ಅಭಿನಯಿಸಿದ್ದು ಕಲಾರಸಿಕರಿಗೆ ರಸದೂಟ ಬಡಿಸಿದಂತಾಯಿತು. ವೀರ ರಸ, ಹಾಸ್ಯ ರಸದಲ್ಲಿ ದ್ವಂದ್ವ ಹಾಡು ವಾದನವೆಲ್ಲವೂ ಸುಂದರವಾಗಿ ಮೂಡಿಬಂತು.

  300x250 AD

  ಭಾಗವತರುಗಳಿಗೆ ಮದ್ದಲೆ ವಾದನದಲ್ಲಿ ಖ್ಯಾತ ಮದ್ದಲೆ ವಾದಕ ಎ.ಪಿ.ಪಾಠಕ್ ಹಾಗೂ ತೆಂಕು ಶೈಲಿಯಲ್ಲಿ ಚಂದ್ರ ಶೇಖರ ಗುರು ವಾಯನಕೆರೆ ಮತ್ತು ಚಂಡೆ ವಾದನದಲ್ಲಿ ಗಣೇಶ್ ಗಾಂವ್ಕರ್ ಹಳವಳ್ಳಿ, ಪ್ರಸನ್ನ ಭಟ್ಟ ಹೆಗ್ಗಾರ್ ಸಮರ್ಥವಾಗಿ ಸಾಥ್ ನೀಡುತ್ತ ಅಲ್ಲಿ ಕೂಡಾ ದ್ವಂದ್ವ ವಾದನ ನುಡಿಕೆಯ ಕೈಚಳಕ ಪ್ರದರ್ಶಿಸಿದ್ದು ವಿಶೇಷವಾಗಿತ್ತು.ಪ್ರತಿಯೊಂದು ಹಾಡಿಗೆ ವಿಶ್ಲೇಷಣೆ ನೀಡಿದವರು ಕೌಲಕ್ಕಿ ನಾಗರಾಜ ಹೆಗಡೆ.

  ಇದೇ ಸಂದರ್ಭದಲ್ಲಿ ಇಸಳೂರ ಸಾಂಸ್ಕೃತಿಕ ಕಲಾವೇದಿಕೆಯಿಂದ ಎಲ್ಲ ಕಲಾವಿದರನ್ನು ಸುಬ್ರಾಯ ಭಟ್ಟ ಗಟ್ಟಿಗೆತೋಟ ಮತ್ತು ಎನ್.ಜಿ.ಹೆಗಡೆ ಗೌರವಿಸಿದರು. ವೇ. ನಾಗರಾಜ ಭಟ್ಟ ದೊಡ್ನಳ್ಳಿಯವರ ವೇದಘೋಷದೊಂದಿಗೆ ಆರಂಭಗೊಂಡ ‘ಗಾನ-ನೃತ್ಯ-ವೈಭವ’ ಸರಿಸುಮಾರು ಮೂರು ತಾಸುಗಳಿಗೂ ಮಿಕ್ಕಿ ನಡೆದಿದ್ದು ಕೊನೆಯಲ್ಲಿ ಸುಪ್ರಸಿದ್ಧ ಹಾಡು ‘ಶಿಲೆಯೊಳು ಕಲೆಯರಳಿ ಹೂವಾಯಿತು’ ಎಂಬ ಮಂಗಲ ಹಾಡಿನೊಂದಿಗೆ ಒಟ್ಟಾರೆ ಕಾರ್ಯಕ್ರಮ ಸಮಾಪ್ತಿಗೊಂಡಿತು. ಗೋವಿಂದ ಎಸ್. ಭಟ್ಟ ಸ್ವಾಗತಿಸಿ, ವಂದಿಸಿದರು.

  Share This
  300x250 AD
  300x250 AD
  300x250 AD
  Leaderboard Ad
  Back to top