ಭಟ್ಕಳ: ಅರಣ್ಯ ಹಕ್ಕು ಕಾಯಿದೆಗೆ ವ್ಯತಿರಿಕ್ತವಾಗಿ ನಾಮನಿರ್ದೇಶನ ಸದಸ್ಯರ ಅನುಪಸ್ಥಿತಿ ಹಾಗೂ ಮೂರು ತಲೆಮಾರಿನ ಪೂರ್ವದಿಂದ ದೃಢೀಕೃತ ಮತ್ತು ವಾಸಮಾಡುವ ಭೂಮಿಯ ಕಬ್ಜಾ ಹೊಂದಿರುವ ವೈಯಕ್ತಿಕ ದಾಖಲೆ ಹಾಜರುಪಡಿಸಲು ಕಾನೂನಿಗೆ ವ್ಯತಿರಿಕ್ತವಾಗಿ ಕಾನೂನು ಮತ್ತು ಸರಕಾರದ ಆದೇಶದಲ್ಲಿ ಉಪವಿಭಾಗ ಸಮಿತಿ ಅರಣ್ಯ ಅತೀಕ್ರಮಣದಾರರಿಗೆ ವಿಚಾರಣೆ ನೋಟೀಸ್ ನೀಡುತ್ತಿರುವುದು ಆಕ್ಷೇಪನಾರ್ಹ ಕಾರ್ಯವಾಗಿದೆ. ತಕ್ಷಣ ಕಾನೂನು ಬಾಹಿರ ಅರಣ್ಯ ಅತೀಕ್ರಮಣದಾರರ ಪುನರ್ ಪರಿಶೀಲನೆ ಅರ್ಜಿ ಸ್ಥಗಿತಗೊಳಿಸಬೇಕೆಂದು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಆಗ್ರಹಿಸಿದರು.
ಇಂದು ಭಟ್ಕಳದಲ್ಲಿ ಮೇ 7ರಂದು ಹೊನ್ನಾವರದಲ್ಲಿ ಜರುಗಲಿರುವ ಅರಣ್ಯವಾಸಿಗಳನ್ನ ಉಳಿಸಿ- ರ‍್ಯಾಲಿಯ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಪಾರಂಪರಿಕ ಅರಣ್ಯವಾಸಿಗಳು ಅರ್ಜಿ ಮಂಜೂರಿಗೆ ಸಂಬಂಧಿಸಿ ನಿರ್ದಿಷ್ಟವಾದ ದಾಖಲೆಗಳಿಗೆ ಒತ್ತಾಯಿಸತಕ್ಕದ್ದಲ್ಲ ಎಂಬ ಅಂಶ ಕಾನೂನಿನಲ್ಲಿ ಉಲ್ಲೇಖವಿದ್ದಾಗಲೂ ದಾಖಲೆಗಳಿಗೆ ಒತ್ತಾಯಿಸುವದು ಸರಿಯಿಲ್ಲ. ಅಲ್ಲದೇ, ಅರಣ್ಯವಾಸಿಗಳ ಸಾಗುವಳಿ ಕ್ಷೇತ್ರದ ಪರಿಸರವು 3 ತಲೆಮಾರಿನ ಜನವಸತಿ ಪ್ರದೇಶವೆಂದು ಪುರಾವೆ ಮಾಡಿದರೆ ಸಾಕು ಎಂಬ ಕೇಂದ್ರ ಬುಡಕಟ್ಟು ಮಂತ್ರಾಲಯ ನೀಡಿದ ಆದೇಶವನ್ನು ಜಿಲ್ಲಾಡಳಿತ ನಿರ್ಲಕ್ಷಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ಕಾನೂನಿನ ಸಮಿತಿಯಲ್ಲಿ ಮೂರು ನಾಮನಿರ್ದೇಶನ ಸದಸ್ಯರನ್ನೊಳಗೊಂಡ ಒಟ್ಟು ಆರು ಸದಸ್ಯರು ಇರಬೇಕೆಂಬ ಅಂಶವನ್ನ ಪರಿಗಣನೆಗೆ ತೆಗೆದುಕೊಳ್ಳದೇ ಕೇವಲ ಅಧಿಕಾರ ವರ್ಗದವರ ಸದಸ್ಯರ ಉಪಸ್ಥಿತಿಯಲ್ಲಿ ಅರ್ಜಿಗಳನ್ನ ಪುನರ್ ಪರಿಶೀಲಿಸುತ್ತಿರುವುದಕ್ಕೆ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸಭೆಯಲ್ಲಿ ಹೋರಾಟಗಾರರಾದ ರಾಮು ಮೋಗೇರ್, ದೇವರಾಜ ಗೊಂಡ, ಇನಾಯತ್ ಸಾಬಂದ್ರಿ, ರಿಜವಾನ್, ಕಯೀಂ, ಫರಿದಾ, ಖುರ್ಶಿದಾ, ಕೇಶವ ಮರಾಠಿ, ವಿಮಲ ಮೋಗೇರ್, ಮಾದೇವ ನಾಯ್ಕ ಹಾಡುವಳ್ಳಿ, ಪರಮೇಶ್ವರ ಮರಾಠಿ ಹಾಡುವಳ್ಳಿ, ಲಕ್ಷ್ಮಯ್ಯ ನಾಯ್ಕ ಹಲ್ಯಾಣಿ, ಶ್ರೀಧರ ನಾರಾಯಣ ನಾಯ್ಕ ಹಿರೇಬಿಳೂರು, ಮಂಜುನಾಥ ಕುಪ್ಪಯ್ಯ ನಾಯ್ಕ ಹಿರೇಬಿಳೂರು ಮುಂತಾದವರು ಉಪಸ್ಥಿತರಿದ್ದರು ಹಾಗೂ ಕಾರ್ಯಕ್ರಮವನ್ನು ಪಾಂಡುರಂಗ ನಾಯ್ಕ ಬೆಳಕೆ ಸ್ವಾಗತಿಸಿ, ವಂದಿಸಿದರು.
5 ಸಾವಿರ ನೋಟೀಸ್ :ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿಗಳನ್ನ ಪುನರ್ ಪರಿಶೀಲಿಸಲು ಪ್ರಸಕ್ತ ವರ್ಷ ಜಿಲ್ಲಾದ್ಯಂತ ವಿವಿಧ ಅರಣ್ಯ ಹಕ್ಕು ಸಮಿತಿಗಳಲ್ಲಿ 5 ಸಾವಿರಕ್ಕಿಂತ ಮಿಕ್ಕಿ ಅರಣ್ಯವಾಸಿಗಳಿಗೆ ಸಮಿತಿಯಿಂದ ವಿಚಾರಣೆ ಪತ್ರ ಕಳಿಸಲಾಗುತ್ತಿದೆ ಎಂದು ಜಿಲ್ಲಾ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.