ಶಿರಸಿ: ತಾಲೂಕಾ ವ್ಯವಸಾಯ ಹುಟ್ಟುವಳಿಗಳ ಸಹಕಾರಿ ಮಾರಾಟ ಸಂಘ (ಟಿ.ಎಂ.ಎಸ್.)ನ ಗ್ರೇಡಿಂಗ್ ವಿಭಾಗದ ನೂತನ ಕಟ್ಟಡ ಮೇ 3ರಂದು ಲೋಕಾರ್ಪಣೆಯಾಗಲಿದೆ.
ಈ ಕುರಿತು ಸಂಘದ ಸಭಾಂಗಣದಲ್ಲಿ ಶುಕ್ರವಾರ ಸಂಘದ ಅಧ್ಯಕ್ಷ ಜಿ.ಎಂ.ಹೆಗಡೆ ಹುಳಗೋಳ ಮಾಹಿತಿ ನೀಡಿ, ಗ್ರಾಹಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಹಲವು ಕಾರ್ಯಚಟುವಟಿಕೆ ಹಮ್ಮಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಗ್ರೇಡಿಂಗ್ ವಿಭಾಗದ ನೂತನ ಕಟ್ಟಡ ನಿರ್ಮಿಸಲಾಗಿದ್ದು, ಅಂದು 4.30 ಗಂಟೆಗೆ ಸಂಘದಲ್ಲಿ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಉದ್ಘಾಟಿಸುವರು. ಸಚಿವ ಶಿವರಾಮ ಹೆಬ್ಬಾರ ಜರಡಿ ಮಷಿನ್ ಉದ್ಘಾಟಿಸುವರು.
ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಧ್ಯಕ್ಷತೆವಹಿಸುವರು. ಸಹಕಾರಿಗಳಾದ ಆರ್.ಎಂ.ಹೆಗಡೆ ಬಾಳೇಸರ, ಶಂಭುಲಿಂಗ ಹೆಗಡೆ, ಎಪಿಎಂಸಿ ಅಧ್ಯಕ್ಷ ಶಿವಕುಮಾರ ಗೌಡ, ಪ್ರಭಾರಿ ಉಪನಿಬಂಧಕ ನಾಗರಾಜು ಎಸ್, ಎಪಿಎಂಸಿ ಕಾರ್ಯದರ್ಶಿ ಡಾ.ಕೆ.ಕೋಡಿಗೌಡ ಉಪಸ್ಥಿತರಿರುವರು. ನಂತರ ತುಳಸಿ ಹೆಗಡೆ ಅವಳಿಂದ ವಿಶ್ವಶಾಂತಿ ಸರಣಿಯ ಯಕ್ಷನೃತ್ಯ ರೂಪಕ ಪ್ರದರ್ಶನಗೊಳ್ಳಲಿದೆ ಎಂದರು.
ಸಂಘದ ಕಾರ್ಯನಿರ್ವಾಹಕ ಎಂ.ಎ.ಹೆಗಡೆ ಕಾನಮುಸ್ಕಿ ಮಾತನಾಡಿ, 37 ವರ್ಷದ ಈ ಸಂಘ ಜನಪರ ಕಾರ್ಯ ನಿರ್ವಹಿಸುತ್ತಿದೆ. ಪ್ರಸಕ್ತ ವರ್ಷ 237.59 ಕೋಟಿ ರೂ. ಉತ್ಪನ್ನ ಮಾರಾಟ ಮಾಡಲಾಗಿದೆ. ವಾರ್ಷಿಕ ವಹಿವಾಟು 380.25 ಕೋಟಿ ರೂ. ಇದೆ. ಮುಕ್ತಾಯಗೊಂಡ ಆರ್ಥಿಕ ವರ್ಷದಲ್ಲಿ 1.06 ಕೋಟಿ ನಿವ್ವಳ ಲಾಭ ಗಳಿಸಲಾಗಿದೆ. ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿತ್ತಿದ್ದು, ಪ್ರಸ್ತುತ ಉತ್ತಮ ದರ್ಜೆಯ ಗೋದಾಮು ಲೋಕಾರ್ಪಣೆ ಮಾಡಲಾಗುತ್ತಿದೆ ಎಂದರು.
ಈ ವೇಳೆ ಸಂಘದ ಉಪಾಧ್ಯಕ್ಷ ಎಂ.ಪಿ.ಹೆಗಡೆ, ನಿರ್ದೇಶಕರಾದ ಜಿ.ಎಂ.ಹೆಗಡೆ ಮುಳಖಂಡ, ಜಿ.ಟಿ.ಹೆಗಡೆ, ಆರ್.ಎಸ್.ಹೆಗಡೆ, ವಿ.ಆರ್.ಹೆಗಡೆ ಮಣ್ಮನೆ, ಆರ್.ಎಸ್.ಹೆಗಡೆ ಇದ್ದರು.