ಹೊನ್ನಾವರ: ತಾಲೂಕಾ ಪಂಚಾಯತ ಸಾಮಾನ್ಯ ಸಭೆಯಲ್ಲಿ ತಾ.ಪಂ ಆಡಳಿತಾಧಿಕಾರಿ ವಿನೋದ್ ಅಣ್ವೇಕರ್ 2022-23ನೇ ಯೋಜನೆ ಕಾರ್ಯಕ್ರಮಗಳಿಗೆ 9284.14 ಲಕ್ಷ ರೂ. ಆಯವ್ಯಯ ಮಂಡಿಸಿದರು.
ನಂತರ ವಿವಿಧ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿ ಕೃಷಿ ಇಲಾಖೆ ಚರ್ಚೆಯಲ್ಲಿ ರೈತರಿಗೆ ಅಗತ್ಯ ಬಿತ್ತನೆ ಲಭ್ಯದ ಬಗ್ಗೆ ವಿಚಾರಿಸಿದಾಗ, ಅಧಿಕಾರಿಗಳು ಉತ್ತರಿಸಿ, ಬೀಜ ನಿಗಮದಿಂದ ಪಡೆಯಲಾಗುತ್ತಿದೆ ಎಂದರು. ತಾಲೂಕ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಸುರೇಶ್ ನಾಯ್ಕ ಕಿಸಾನ್ ಕ್ರೆಡಿಟ್ ಕಾರ್ಡ್ ತಾಲೂಕಿನಲ್ಲಿ ಎಷ್ಟು ಪ್ರಮಾಣದಲ್ಲಿ ಆಗಿದೆ? ಎಂದು ಪ್ರಶ್ನಿಸಿದರು. ರೈತರಿಗೆ ಅನುಕೂಲವಾಗುವ ಯೋಜನೆಗಳನ್ನು ತಲುಪಿಸುವ ಕೆಲಸ ಮಾಡಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಚರ್ಚೆಯಲ್ಲಿ ತಾಲೂಕಿನ ದುಸ್ಥಿತಿಯಲ್ಲಿರುವ ಅಂಗನವಾಡಿ ಕೇಂದ್ರಗಳ ಕುರಿತು ಇಒ ಸುರೇಶ್ ಅಧಿಕಾರಿಗಳಲ್ಲಿ ಮಾಹಿತಿ ಪಡೆದು ಪ್ರಸ್ತಾಪಿಸಿದರು. ಶೀಘ್ರ ಕಾಮಗಾರಿ ನಡೆಸುವ ವಿಚಾರದ ಕುರಿತು ಆಡಳಿತಾಧಿಕಾರಿ ಸಲಹೆ, ಸೂಚನೆ ನೀಡಿದರು. ಅಂಗನವಾಡಿಗಳಲ್ಲಿ ಮಕ್ಕಳಿಗೆ ಅವಶ್ಯಕ ಪರಿಕರ ಲಭ್ಯತೆಯ ಬಗ್ಗೆ ಎಂದು ಪ್ರಶ್ನಿಸಿದರು. ಬಂದರು ಇಲಾಖೆ ಚರ್ಚೆಯಲ್ಲಿ ಇಲಾಖಾಧಿಕಾರಿಗಳು ಉತ್ತರಿಸಿ ಕಾಸರಗೋಡಿನಲ್ಲಿ ‘ಸಿ ವಾಲ್’ ನಿರ್ಮಾಣವಾಗಬೇಕಿದೆ ಇದನ್ನು ಶಾಸಕರ ಗಮನಕ್ಕೆ ತಂದು ಆರಂಭಿಸುತ್ತೇವೆ ಎಂದರು.
ಲಭ್ಯವಿರುವ ಮಾನವ ದಿನಗಳನ್ನು ನೆರೇಗಾ ಯೋಜನೆ ಅಡಿಯಲ್ಲಿ ಪೂರೈಸಿ ಎಂದು ಅರಣ್ಯ ಇಲಾಖೆ ಚರ್ಚೆಯಲ್ಲಿ ಇಲಾಖಾಧಿಕಾರಿಗಳಿಗೆ ವಿನೋದ್ ಅಣ್ವೇಕರ್ ಸೂಚಿಸಿದರು.ಈ ವಿಷಯ ಗಂಭೀರವಾಗಿ ಪರಿಗಣಿಸಿ ಎಂದು ಇಒ ಸುರೇಶ್ ರವರು ಸಹ ಇದೇ ವೇಳೆ ಸಲಹೆ ನೀಡಿದರು. ತಾಲೂಕಿನ ಯಾವುದೇ ಭಾಗದಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗದಂತೆ ಜಾಗೃತಿ ವಹಿಸಿ,ನೀರು ಪೂರೈಕೆಗೆ ಕ್ರಮವಹಿಸಿ ಎಂದು ಅಣ್ವೇಕರ್ ಸೂಚಿಸಿದರು.
ತೋಟಗಾರಿಕೆ ಇಲಾಖೆ ಚರ್ಚೆಯಲ್ಲಿ ಶಾಲೆಗಳಲ್ಲಿ, ಅಂಗನವಾಡಿ,ಗ್ರಾಮಪಂಚಾಯಿತಿಗಳಲ್ಲಿ ಲಭ್ಯವಿರುವಂತಹ ಜಾಗದಲ್ಲಿ ಹಣ್ಣು-ಹಂಪಲು ತೆಂಗು ಅವಶ್ಯಕ ಗಿಡಗಳನ್ನು ನೆಡಿ ಎಂದು ವಿನೋದ್ ಅಣ್ವೇಕರ್ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದರು. ಎಲ್ಲೆಲ್ಲಿ ಅವಶ್ಯಕತೆ ಇದೆ ಎಂದು ಪಟ್ಟಿಮಾಡಿ, ನಾನು ಸಹ ಇಂತಹ ಕಾರ್ಯಗಳಿಗೆ ನನ್ನ ಕೊಡುಗೆ ನೀಡುತ್ತೇನೆ. ಅಧಿಕಾರಿಗಳಾದವರು ಯಾವಾಗಲು ದೂರದೃಷ್ಟಿತ್ವ ಇಟ್ಟುಕೊಂಡು ಕಾರ್ಯ ನಿರ್ವಹಿಸಬೇಕು.ಸರ್ಕಾರಿ ನೌಕರಿಗೆ ಇಂತ ವಿಚಾರಗಳ ಮೂಲಕವು ಜನಸೇವೆ ಮಾಡಬಹುದು ಎಂದು ಕಿರು ಸಲಹೆ ನೀಡಿದರು.
ಲೋಕೋಪಯೋಗಿ ಇಲಾಖೆ ಚರ್ಚೆಯಲ್ಲಿ, ಕಳೆದ ವರ್ಷದ ಪ್ರವಾಹ ಸಂದರ್ಭದಲ್ಲಿನ ರಸ್ತೆ ಹಾಗೂ ಇನ್ನಿತರ ಸೌಕರ್ಯಗಳ ಕಾಮಗಾರಿಗಳು ಪೂರ್ಣಗೊಂಡಿವೆಯೆ ಎಂದು ಅಣ್ವೇಕರ್ ಪ್ರಶ್ನಿಸಿದರು. ಕೆಲವೊಂದು ಕಾಮಗಾರಿ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ಉತ್ತರಿಸಿದರು. ತಹಶೀಲ್ದಾರ ನಾಗರಾಜ ನಾಯ್ಕಡ್ ಉಪಸ್ಥಿತರಿದ್ದರು. ವಿವಿಧ ಇಲಾಖಾ ಅಧಿಕಾರಿಗಳು ಪಾಲ್ಗೊಂಡಿದ್ದರು.